Brillo Institute ಬದಲಾಗುತ್ತಿರುವ ಔದ್ಯಮಿಕ ಕ್ಷೇತ್ರದ ನಿರೀಕ್ಷೆಗೆ ತಕ್ಕನಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದಲ್ಲಿ ಉದ್ಯೋಗವಕಾಶಗಳು ಅರಸಿ ಬರುತ್ತವೆ ಎಂದು ಬೆಂಗಳೂರಿನ ಬ್ರಿಲೋ ಸಂಸ್ಥೆಯ ವಿಶ್ವವಿದ್ಯಾಲಯ ಸಂಪರ್ಕ ಮುಖ್ಯಸ್ಥೆ ಶ್ರೀಮತಿ ರಿತು ಶರ್ಮ ಅಭಿಪ್ರಾಯಪಟ್ಟರು. ಅವರಿಂದು ಕಂಪ್ಯೂಟರ್ ಅಪ್ಲಿಕೇಶನ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಚಿಮ್ಮಿ ಬರುವ ಉತ್ಸಾಹ ಸ್ಪೂರ್ತಿ ಕೇವಲ ವಿದ್ಯಾರ್ಥಿ ಹಾಗೂ ಯುವ ದೆಸೆಯಲ್ಲಿ ಮಾತ್ರ ಇದ್ದರೆ ಸಾಲದು ಜೀವನಪೂರ್ತಿ ಇರಬೇಕು. ಭವ್ಯ ಚಿತ್ರಗಳು ಸ್ಮೃತಿ ಪಟಲದಲ್ಲಿ ಬರುತ್ತಿರಬೇಕು, ಅದರ ಸಾಕಾರಕ್ಕೆ ತುಡಿಯಬೇಕು ದುಡಿಯಬೇಕು, ಇದಕ್ಕಾಗಿ ಕಲಿಕೆಯ ದಾಹ ಯಾವತ್ತೂ ಇರಬೇಕು ಎಂದರು.
ವಿದ್ಯಾರ್ಥಿಗಳಿಗೆ ಕರೆಕೊಟ್ಟರಲ್ಲದೆ ಆಧುನಿಕ ತಂತ್ರಜ್ಞಾನಗಳ ತಿಳುವಳಿಕೆ ಮತ್ತು ಅಳವಡಿಕೆಗಳೆ ನಿರಂತರ ಕಲಿಕೆ, ಇದರಿಂದ ಮಾತ್ರ ಪದವೀಧರರು ಮಾನವ ಸಂಪನ್ಮೂಲವಾಗಿ ಹೊರಹೊಮ್ಮಲು ಸಾಧ್ಯ, ಇಂತಹ ಮಾನವ ಸಂಪನ್ಮೂಲವು ವೈಯಕ್ತಿಕ ಕೌಟುಂಬಿಕ ಹಿತಗಳಿಗೆ ಸೀಮಿತವಾಗದೇ ರಾಷ್ಟ್ರ ಮತ್ತು ವಿಶ್ವದ ಹಿತಕ್ಕೂ ಕಾರಣವಾಗಬೇಕು ಎಂದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಸಂಸ್ಥೆಯ ಚೇರ್ಮನ್, ಖ್ಯಾತ ಲೆಕ್ಕಪರಿಶೋಧಕ ಡಾ.ಅಥಣಿ ಎಸ್. ವೀರಣ್ಣನವರು ತೀವ್ರ ಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಗಳ ತಿಳುವಳಿಕೆ ಪಡೆಯದೆ ಪದವೀಧರರಿಗೆ ಭವಿಷ್ಯವಿಲ್ಲ ಎಂದರು.
Brillo Institute ಕಾಲೇಜಿನ ಪ್ರಾಚಾರ್ಯ ಡಾ. ಬಿ ವೀರಪ್ಪನವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಹನಾ ಹಾಗೂ ಸೂಫಿಯಾನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನಿರಂಜನ್ ಪ್ರಸಾದ್ ಪ್ರಾರ್ಥನೆಯನ್ನು ಹಾಡಿದರೆ ವಾಗೀಶ್ ಎಂ ವಿ ಸ್ವಾಗತ ಕೋರಿದರು. ನವೀನ್ ಹೆಚ್ ಹಾಗೂ ಜ್ಯೋತಿ ಎನ್ ಅತಿಥಿಗಳ ಪರಿಚಯ ಮಾಡಿದರು. ಪದವೀಧರರಿಗೆ ಪ್ರತಿಜ್ಞಾವಿಧಿಯನ್ನು ವಿಜಯ್ ಎನ್ ರಾವ್ ಬೋಧಿಸಿದರು. ಶ್ರೀಮತಿ ವಿಂಧ್ಯಾ ಎಸ್ ಅತಿಥಿಗಳನ್ನು ಸನ್ಮಾನಿಸಿದರು. ಪೂಜಾ ಎಂ ಎಸ್ ವಂದನೆಗಳನ್ನು ಸಮರ್ಪಿಸಿದರು. -ಚಿತ್ರ ಹಾಗೂ ವರದಿ: ಎಚ್.ಬಿ.ಮಂಜುನಾಥ ಹಿರಿಯ ಪತ್ರಕರ್ತ