Jnanadayini CBSC School ಮಕ್ಕಳಲ್ಲಿ ಕ್ರೀಯಾಶೀಲತೆ ಹಾಗೂ ಆತವಿಶ್ವಾಸ ವೃದ್ಧಿಸಲು ಬೇಸಿಗೆ ಶಿಬಿರಗಳು ಸಹಕಾರಿ ಆಗುತ್ತವೆ ಎಂದು ಚಿರಂತನ ಯೋಗ ಟ್ರಸ್ಟ್ ಸಂಸ್ಥಾಪಕಿ, ಶಿಬಿರದ ಸಂಚಾಲಕಿ ಶಾಂತಾ ಎಸ್.ಶೆಟ್ಟಿ ಹೇಳಿದರು.
ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದ ಮಂದಾರ ಜ್ಞಾನದಾಯಿನಿ ಸಿಬಿಎಸ್‌ಸಿ ಶಾಲೆಯಲ್ಲಿ ಆಯೋಜಿಸಿದ್ದ ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳು ಅಜ್ಜ ಅಜ್ಜಿಯ ಮನೆಗೆ ಹೋಗಿ ಅಲ್ಲಿಯ ಪರಿಸರದಲ್ಲಿ ಆಟಗಳನ್ನು ಆಡಿ, ಅಜ್ಜಿಯ ಪ್ರೀತಿ ಗಳಿಸಿ, ಅವರು ಮಾಡಿಕೊಟ್ಟ ತಿಂಡಿತಿನಿಸು ತಿಂದು ಸಂಭ್ರಮಿಸುತ್ತಿದ್ದರು ಎಂದು ತಿಳಿಸಿದರು.
ಅಜ್ಜನೊಂದಿಗೆ ಊರನ್ನು ಸುತ್ತಿ ಬಂಧುಗಳೊಂದಿಗೆ ಕುಣಿದು ಕುಪ್ಪಳಿಸಿ ಸವಿ ನೆನಪಿನೊಂದಿಗೆ ತಮ್ಮೂರಿಗೆ ಮರಳುವ ಕಾಲ ಒಂದಿತ್ತು. ಈಗಿನ ಕಾಲದಲ್ಲಿ ಅಜ್ಜಿಮನೆ ಹೋಗುವ ಬದಲು ಬೇಸಿಗೆ ಶಿಬಿರಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ ಎಂದರು.
Jnanadayini CBSC School ಮಂದಾರ ಜ್ಞಾನದಾಯಿನಿ ಶಾಲೆಯ ಕಾರ್ಯದರ್ಶಿ ವಿಜಯ ಕೆ ಶೆಟ್ಟಿ ಮಾತನಾಡಿ, ಈ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು. ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಚಿಣ್ಣರ ಬೇಸಿಗೆ ಶಿಬಿರವು ಏಪ್ರಿಲ್ 17 ರವರೆಗೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಿಂದ ನೃತ್ಯ, ಕಥೆ, ಹಾಡು, ಆಟ ನಡೆಯಿತು. ಉಮಾದಿಲೀಪ್, ಭಾರತಿ, ಶೋಭಾ, ಚಂದನ್, ನವೀನ್ ವೈವಿಧ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಸವಿಕೃತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಬಿ.ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕರು ಸಹಕರಿಸಿದರು.