ಲೇ.ಎಚ್.ಕೆ.ವಿವೇಕಾನಂದ
KLive Special Article ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು.
ನಾನಾಗ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದೆ. ಒಂದು ಆಟೋದಲ್ಲಿ ಮಕ್ಕಳನ್ನು ಕರೆದೊಯ್ಯುವುದರಿಂದ ಪ್ರಾರಂಭವಾದ ನನ್ನ ವ್ಯವಹಾರ 10 ಆಟೋಗಳಿಗೇರಿತು.
ಆಮೇಲೆ ದೊಡ್ಡ ಶಾಲೆಗಳ ಒತ್ತಾಯದ ಮೇರೆಗೆ ಬ್ಯಾಂಕಿನ ಸಾಲದಿಂದ 5 ವ್ಯಾನ್ ಗಳನ್ನು ಖರೀದಿಸಿ ಶಾಲೆಗಳ ಜೊತೆ ಒಪ್ಪಂದ ಮಾಡಿಕೊಂಡೆ.
ಮುಂದೆ ಎರಡು ಟೆಂಪೋ ಟ್ರಾವಲರ್ ಗಳು ನನ್ನ ಕಂಪನಿ ಸೇರಿದವು. ಮಕ್ಕಳೊಂದಿಗೆ ಅವರ ಪೋಷಕರೊಂದಿಗೆ ಸಭ್ಯತೆಯಿಂದ, ವಿನಮ್ರತೆಯಿಂದ ಮಾತನಾಡುತ್ತಿದ್ದುದು ಮತ್ತು ಮಕ್ಕಳ ಸುರಕ್ಷತೆಗೆ ಅತಿಹೆಚ್ಚು ಮಹತ್ವ ನೀಡಿದ್ದು , ನನ್ನ ವ್ಯವಹಾರ ಹೆಚ್ಚಲು ಕಾರಣವಾಯಿತು.
ಕೇವಲ 7 ನೇ ತರಗತಿ ಓದಿದ್ದ ನನಗೆ ಮಕ್ಕಳ ಮುಗ್ಧ ಭಾಷೆಯೇ ನನ್ನ ಮಾತಾಯಿತು.ಕಡು ಬಡತನದಲ್ಲಿ ಇನ್ನೂ ಹಳ್ಳಿಯಲ್ಲಿಯೇ ಜೀವನ ಸಾಗಿಸುತ್ತಿದ್ದ ಅಪ್ಪ ಅಮ್ಮನನ್ನು ನನ್ನ ಬಳಿಯೇ ಕರೆ ತಂದು ಇಟ್ಟುಕೊಂಡೆ. ಬ್ಯಾಂಕಿನ ಕಂತುಗಳನ್ನು ಸರಿಯಾಗಿ ಕಟ್ಟುತ್ತಿದ್ದುದರಿಂದ ಬ್ಯಾಂಕಿನ ಮ್ಯಾನೇಜರ್ ಒತ್ತಾಯ ಮಾಡಿ ಮತ್ತೆ ಹೊಸ ಗೃಹ ಸಾಲ ನೀಡಿ ಒಂದು ಕೋಣೆಯ ಸ್ವಂತ ಮನೆ ಖರೀದಿಸುವಂತೆ ಮಾಡಿದರು.
ಅದಕ್ಕೆ ಗೃಹಪ್ರವೇಶ ಮಾಡಿ ಒಂದಷ್ಟು ಸ್ನೇಹಿತರಿಗೆ ಊಟ ಹಾಕಿಸಿದೆ.
ಸ್ವಂತ ಮನೆ ಆದಮೇಲೆ ಅಪ್ಪ ಅಮ್ಮನನ್ನು ಕಾರಿನಲ್ಲೇ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಿದೆ. ಎಲ್ಲವೂ ಸುಖಮಯವಾಗಿತ್ತು.
ಆದರೆ, ದುರಾದೃಷ್ಟ ನೋಡಿ, ನನಗೂ ವ್ಯವಹಾರದಲ್ಲಿ ಬೇರೆಯವರಿಂದ ಸ್ಪರ್ಧೆ ಉಂಟಾಯಿತು. ಆದಾಯ ಸ್ವಲ್ಪ ಕಡಿಮೆಯಾಯಿತು. ಡ್ರ್ಯೆವರ್ ಗಳ ಸಂಬಳ, ಡೀಸಲ್ ಬೆಲೆ ಒಟ್ಟಿಗೆ ಹೆಚ್ಚಾಗಿ ಮತ್ತೂ ಕಷ್ಟವಾಯಿತು. ಈ ಮಧ್ಯೆ ಒಮ್ಮೆ ಟೆಂಪೋ ಟ್ರಾವಲರ್ ರಜಾ ದಿನದಂದು ಹೊರಗೆ ಬಾಡಿಗೆ ಹೋಗಿದ್ದಾಗ ಅಪಘಾತವಾಗಿ ಗಾಡಿ ಜಖಂ ಆಯಿತು. ಆ ಘಟನೆಯಿಂದ ಹೊರಗೆ ಬರಲು, ಪೋಲಿಸ್ ಕೇಸ್ ಹ್ಯಾಂಡಲ್ ಮಾಡಲು ಸಾಕಷ್ಟು ಹಣ ಖರ್ಚಾಯಿತು.
ಜೊತೆಗೆ Maintenances ಜಾಸ್ತಿಯಾಗಿ ಲಾಸ್ ಆಗಲು ಶುರುವಾಯಿತು. ಇದೇ ನೆಪ ಒಡ್ಡಿ ಡ್ರ್ಯೆವರ್ ಗಳು ಕ್ಯೆ ಕೊಡಲು ಪ್ರಾರಂಬಿಸಿದರು.
ಗಾಡಿಗಳು ಸರಿಯಾಗಿ ಓಡುತ್ತಿರಲಿಲ್ಲ. ಸಮಯ ಪಾಲನೆ ತಪ್ಪಿತು. ಬ್ಯಾಂಕಿನ ಕಂತು ಸರಿಯಾಗಿ ಪಾವತಿಯಾಗದೆ ಗಾಡಿಗಳು ಸೀಜ್ ಆಗುವ ಹಂತಕ್ಕೆ ಬಂದವು. ಅದನ್ನು ಸರಿದೂಗಿಸಲು ಮೊದಲಿಗೆ ಪರಿಚಿತರು, ನಂತರ ಸಂಬಂಧಿಗಳು, ಕೊನೆಗೆ ಬಡ್ಡೀ ವ್ಯಾಪಾರಿಗಳಿಂದ ಅಧಿಕ ಬಡ್ಡಿಗೆ ಸಾಲ ಪಡೆಯಲು ಶುರುಮಾಡಿದೆ.
KLive Special Article ಮುಂದೆ ಸರಿಹೋಗಬಹುದು ಎಂಬ ವಿಶ್ವಾಸ ನನ್ನದಾಗಿತ್ತು. ಕೆಲವೊಮ್ಮೆ ನಾನೇ ಖುದ್ದು ಹಗಲು ರಾತ್ರಿ ಗಾಡಿ ಓಡಿಸುತ್ತಿದ್ದೆ. ಆದರೂ, ಸಾಧ್ಯವಾಗಲಿಲ್ಲ. ಬಡ್ಡಿಯನ್ನು ಸರಿಯಾಗಿ ಕಟ್ಟದ ಕಾರಣಕ್ಕೆ Financier ಗಳು ಕಾಟ ಕೊಡಲು ಶುರು ಮಾಡಿದರು. ತಪ್ಪಿಸಿಕೊಂಡು ಓಡಾಡತೊಡಗಿದೆ.
ಅದರ ಪರಿಣಾಮ ವ್ಯವಹಾರದ ಮೇಲೂ ಬೀರಿ ಹಳ್ಳ ಹಿಡಿಯಿತು. ಸುದ್ದಿ ಸುತ್ತಮುತ್ತ ಹಬ್ಬಿ ಜನ ನನ್ನನ್ನು ನಂಬದಾದರು. ಹಣ ಹುಟ್ಟಲಿಲ್ಲ. ಕೆಲವು ಗಾಡಿಗಳು ಬ್ಯಾಂಕಿನ ಪಾಲಾದರೆ ಇನ್ನೂ ಕೆಲವು Financiers ಗಳ ಪಾಲಾದವು. ಆದರೂ ಸಾಲ ತೀರಲಿಲ್ಲ. ಆ ಕಡೆ ಸಾಲಗಾರರ ಕಾಟ, ಈ ಕಡೆ ಬ್ಯಾಂಕಿನವರ ಕಾಟ. ಬದುಕು ನರಕ ಸದೃಶವಾಯಿತು. ಮನೆ ಹರಾಜಿಗೆ ನೋಟಿಸ್ ಮೇಲೆ ನೋಟಿಸ್ ಬರತೊಡಗಿತು. ಮನೆ ಬಿಟ್ಟು ಎಲ್ಲೋ ದೇವಸ್ಥಾನ, ಬಸ್, ರೈಲು ನಿಲ್ದಾಣಗಳು, ಛತ್ರಗಳಲ್ಲಿ ಮಲಗತೊಡಗಿದೆ.
ಇಂತಹ ಸಂದರ್ಭದಲ್ಲಿಯೇ ಮತ್ತೊಂದು ಬರಸಿಡಿಲು ನನಗೆ ಅಪ್ಪಳಿಸಿತು…
ಅಪ್ಪನಿಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದರು. ನಾನೀಗ ಮನೆಗೆ ಬರಲೇ ಬೇಕಾಗಿತ್ತು. ಅಪ್ಪನ ಶುಶ್ರೂಷೆ ನನ್ನ ಮೊದಲ ಆದ್ಯತೆಯಾಗಿತ್ತು. ದೇವರ ಮೇಲೆ ಭಾರ ಹಾಕಿ ಸಂಜೆ ಮನೆಗೆ ಬಂದೆ. ನಾನು ಬಂದಿರುವುದು ಸಾಲಗಾರರಿಗೆ ಪಕ್ಕದ ಮನೆಯವರಿಂದ ತಿಳಿಯಿತು.
ಏಕೆಂದರೆ, ಅವರೇ ಮಾಹಿತಿ ಕೊಡುತ್ತಾರೆ ಎಂದು ನನಗೆ ಖಚಿತವಿತ್ತು.
ಆದದ್ದಾಗಲಿ ಎಂದು ಒಳಗೆ ಸೇರಿಕೊಂಡೆ. ಬೆಳಗ್ಗೆ ಸಾಲಗಾರರು ಬರುತ್ತಾರೆ ಮಾನ ಹರಾಜಾಗುವುದು ಗ್ಯಾರಂಟಿಯಾಯಿತು. ಅಮ್ಮ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಅಪ್ಪನನ್ನು ನೋಡಿಕೊಳ್ಳುತ್ತಿದ್ದರು.
ನಾನಾ ಬೆಳಗಿನಿಂದ ಅಲ್ಲೇ ಇದ್ದು ಬಂದಿದ್ದೆ. ಈಗ ಮನೆಯಲ್ಲಿ ನಾನೊಬ್ಬನೆ. ಬಾಗಿಲು ಮುಚ್ಚಿದೆ. ಮನೆಯಲ್ಲಿದ್ದ ಸಣ್ಣ ದೇವರ ಕೋಣೆಯಲ್ಲಿ ಕುಳಿತೆ.
ಆಗ, ಸಮಯ ರಾತ್ರಿ 8 ಗಂಟೆ. ಶಿವ, ಗಣೇಶ, ಲಕ್ಷ್ಮೀ, ರಾಮ, ಆಂಜನೇಯ ಎಲ್ಲರೂ ಜೊತೆ ಇರುವ ಒಂದು ಪೋಟೋ ಇತ್ತು. ಅದರ ಮುಂದೆ ಕುಳಿತು ಪ್ರಾರ್ಥಿಸತೊಡಗಿದೆ.
ಅಯ್ಯೋ ದೇವರೇ, ನನ್ನನ್ನು ನಿನಗೆ ಅರ್ಪಿಸಿಕೊಳ್ಳುತ್ತೇನೆ. ಇನ್ನು ಮೇಲೆ ನಾನು ನಿನ್ನವನೆ. ಉದ್ದೇಶಪೂರ್ವಕವಾಗಿ ನಾನು ತಪ್ಪು ಮಾಡಿಲ್ಲ ಎಂದು ನಿನಗೇ ತಿಳಿದಿದೆ. ನನ್ನ ಅರಿವಿನ ವ್ಯಾಪ್ತಿಯಲ್ಲಿ ಬದುಕಿದ್ದೇನೆ. ನಾಳೆ ಖಂಡಿತ ಸಾಲಗಾರರು ಬರುತ್ತಾರೆ. ನನ್ನ ಮಾನ ಮರ್ಯಾದೆ ಹರಾಜಾಕುತ್ತಾರೆ. ಈ ಕಷ್ಟದಿಂದ ಕಾಪಾಡು. ಹೇಗೆ ರಕ್ಷಿಸುವೆಯೋ ನನಗೆ ಗೊತ್ತಿಲ್ಲ. ನಾನು ನಿನ್ನನ್ನೇ ನಂಬಿದ್ದೇನೆ. ನೀನು ಇದ್ದದ್ದೇ ಆದರೆ ನನ್ನ ಮಾನ ರಕ್ಷಣೆಯ ಹೊಣೆ ನಿನ್ನದೇ ” ಎಂದು ಅಂಗಲಾಚುತ್ತಾ ಇಡೀ ರಾತ್ರಿ ಕುಳಿತು ಪ್ರಾರ್ಥಿಸಿದೆ.
ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಹಸಿವು ನಿದ್ದೆಯ ಪರಿವೆಯೇ ಇರಲಿಲ್ಲ. ಅಪಾರವಾಗಿ ದೇವರನ್ನು ನಂಬಿದ್ದೆ.
ಬೆಳಗ್ಗೆ ಸುಮಾರು 8 ಗಂಟೆ. ಮನೆಯ ಕಾಲಿಂಗ್ ಬೆಲ್ ಶಬ್ದವಾಯಿತು. ದೇವರುಗಳಿಗೆ ಮತ್ತೊಮ್ಮೆ ಕ್ಯೆ ಮುಗಿದು ಹೋಗಿ ಬಾಗಿಲು ತೆರೆದೆ. ಪರಿಚಿತರೇ ಆದ 6 ಜನ ಹಣ ಕೊಟ್ಟಿದ್ದವರ ಕಡೆಯವರು ಒಳ ಬಂದರು. ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ಹಣ ಕೇಳಿದರು. ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸುತ್ತಿದ್ದಂತೆ ಮೊದಲೇ ಆಕ್ರೋಶಗೊಂಡಿದ್ದ ಅವರು ಕೊರಳ ಪಟ್ಟಿ ಹಿಡಿದುಕೊಂಡು ದರದರನೆ ಮನೆಯ ಮುಂದಿನ ರಸ್ತೆಗೆ ಎಳೆದುತಂದರು. ತಮ್ಮ ಕಾಲಿನ ಚಪ್ಪಲಿ ಕಳಚಿ ಎಲ್ಲರಿಗೂ ತೋರಿಸುತ್ತಾ ಬಾರಿಸಿದರು.
ಅಕ್ಕಪಕ್ಕದವರ ನೋಟದ ತೀಕ್ಷ್ಣತೆಯಲ್ಲಿ, ಅವಮಾನದ ಬೆಂಕಿಯಲ್ಲಿ ನೋವೇನು ಗೊತ್ತಾಗಲಿಲ್ಲ. ಬಾಯಿ ಮತ್ತು ಮೂಗಿನಿಂದ ಸಣ್ಣಗೆ ರಕ್ತ ಹರಿಯುತ್ತಿತ್ತು. ಕೊನೆಗೆ ಅವರೇ 15 ದಿನದ ಟೈಂ ಕೊಟ್ಟು, ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಹೇಳಿ ಹೋದರು.
ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಇಲ್ಲದಿದ್ದದ್ದು ಮತ್ತು ಅಪ್ಪನ ಆರೋಗ್ಯದ ಸ್ಥಿತಿ ಅವರಲ್ಲೂ ಸ್ವಲ್ಪ ಕರುಣೆ ಉಂಟುಮಾಡಿತ್ತು.
ನಾನು ಮನೆಯ ಒಳಗೆ ಬಂದೆ. ದೇವರುಗಳನ್ನು ನೋಡಿದೆ. ನಗುಬಂತು. ನನ್ನ ಪೆದ್ದುತನಕ್ಕೆ ನಾಚಿಕೆಯಾಯಿತು. ಪಾಪ ಒಂದು ಪೋಟೋ ಏನು ತಾನೆ ಮಾಡಲು ಸಾಧ್ಯ. ಅದೊಂದು ನಿರ್ಜೀವ ವಸ್ತು. ಏನಾದರೂ ಮಾಡುವುದಿದ್ದರೆ ಪ್ರತಿಕ್ರಿಯಿಸುವ ಶಕ್ತಿಯಿರುವ ನಾನೇ ಮಾಡಬೇಕು. ನನ್ನನ್ನು ಸೃಷ್ಟಿಸಿರುವುದು ಈ ಪ್ರಕೃತಿ. ಜೀವ ನಿಯಂತ್ರಿಸುತ್ತಿರುವುದು ಅದರ ಭಾಗಗಳಾದ ಗಾಳಿ, ನೀರು, ಬೆಳಕು, ಮಣ್ಣು. ಉಳಿದದ್ದೆಲ್ಲಾ ಮಾನವ ತನ್ನ ಸ್ವಾರ್ಥಕ್ಕಾಗಿ ಅನುಕೂಲಕ್ಕಾಗಿ ನಿರ್ಮಿಸಿಕೊಂಡ ಭ್ರಮೆಗಳು. ಮಾನ ಅವಮಾನಗಳು ಮಾನವ ಕಲ್ಪಿತ ಬಂಧನಗಳು.
ಆದ್ದರಿಂದ, ನನ್ನನ್ನು ನಾನೇ ಕಾಪಾಡಿಕೊಳ್ಳಬೇಕು. ಮಾನ ಅವಮಾನಕ್ಕಿಂತ ಜೀವ ಮುಖ್ಯ. ಮರ್ಯಾದೆ ಶ್ರೀಮಂತರ ಸೊತ್ತು. ಬಡವರು ಅದರ ಬಗ್ಗೆ ಯೋಚಿಸಲೂ ಬಾರದು. ಬದುಕಿದ್ದರೆ ಉಳಿದದ್ದು.
ಮನದಲ್ಲೇ ದೃಢ ನಿಶ್ಚಯ ಮಾಡಿಕೊಂಡೆ. ಸಾಯಬಾರದು, ಆತ್ಮಹತ್ಯೆ ಮಾಡಿಕೊಳ್ಳಬಾರದು.
ಸಹಜವಾಗಿ ಉಸಿರು ನಿಲ್ಲುವವರೆಗೂ ಹೋರಾಡಬೇಕು. ಹೇಗಾದರೂ ಸರಿ ಜೀವ ಉಳಿಸಿಕೊಳ್ಳುಬೇಕು ಎಂದು ನಿರ್ಧರಿಸಿ ಅಪ್ಪನನ್ನು ನೋಡಲು ಆಸ್ಪತ್ರೆಯ ಕಡೆ ಹೆಜ್ಜೆ ಹಾಕಿದೆ.
ಆ, ಈಗ 5 ವರ್ಷದ ಮೇಲಾಯಿತು. ಈಗಲೂ ಜೀವಂತ ಇದ್ದೇನೆ. ನಗುವೂ ನನ್ನ ಜೊತೆಯಿದೆ. ವಿಷಾದವೂ ಇದೆ. ಅಪ್ಪ ಅಮ್ಮನ ಜೊತೆ ಸಣ್ಣ ಬಾಡಿಗೆ ಕೊಠಡಿಯಲ್ಲಿ ಕೂಲಿ ಮಾಡುತ್ತಾ ನೆಮ್ಮದಿಯಾಗಿದ್ದೇನೆ. ಎಲ್ಲಾ ಸಾಲಗಳಿಂದ ಮುಕ್ತ. ಸಮಾಜದ ಮುಖ್ಯವಾಹಿನಿಯಿಂದ ಬಹುದೂರ ಸರಿದಿದ್ದೇನೆ. ಸ್ಥಿತಪ್ರಜ್ಞತೆ ಅರಿವಿಲ್ಲದೆ ನನ್ನಲ್ಲಿ ಐಕ್ಯವಾಗಿದೆ.
” ಎಲ್ಲವನ್ನೂ ಕಳೆದುಕೊಂಡೆ ಆದರೆ ನನ್ನನ್ನು ನಾನು ಪಡೆದುಕೊಂಡೆ “
ನಿಮ್ಮರಕ್ಷಕರು ನೀವೇ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.