KLive Special Article ಸಮಾಜಕಾರ್ಯಕರ್ತರು ವ್ಯಕ್ತಿಗಳು, ಕುಟುಂಬ, ಸಮುದಾಯ ಮತ್ತು ವಿವಿಧ ಸಂಸ್ಥೆಗಳೊಂದಿಗೆ ಅವರ ಅಳಲನ್ನು ನಿವಾರಿಸಲು ಮತ್ತು ಸಾಮರ್ಥ್ಯವನ್ನು ವೃದ್ಧಿಸಲು ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಸೇರ್ಪಡೆ, ಸಮಾನತೆ, ಸುಸ್ಥಿರ ಅಭಿವೃದ್ಧಿ, ಮಾನವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಸಮಾಜಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ.
ವಿಶ್ವ ಸಮಾಜಕಾರ್ಯ ದಿನವೂ ಇನ್ನೊಬ್ಬರ ಬದುಕಿನಲ್ಲಿ ಬದಲಾವಣೆಯನ್ನು ಮಾಡುವ ಸಮಾಜಕಾರ್ಯಕರ್ತನನ್ನು ಸಮಾಜದಲ್ಲಿ ಗುರುತಿಸಿ, ಅವರಿಗೆ ಉತ್ತೇಜನ ನೀಡುವ ದಿನವಾಗಿದೆ. ಅಂತೆಯೇ ಸಮಾಜ ಸೇವೆಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವ್ಯಕ್ತಿಗಳ ಕುಟುಂಬದ ಹಾಗೂ ಸಮುದಾಯಗಳ ಮೇಲೆ ಸಮಾಜಕಾರ್ಯದಿಂದ ಆಗುವ ಸಕಾರಾತ್ಮಕ ಪರಿಣಾಮವನ್ನು ಉತ್ತೇಜಿಸುವ ದಿನವಾಗಿದೆ.
ಇಂದಿಗೂ ಯುವ ಸಮಾಜಕಾರ್ಯಕರ್ತರಿಗೆ ಪ್ರೇರಕರಾಗಿ ಇರುವಂತಹ ಪ್ರಮುಖ ಚಿಂತಕರನ್ನು ನೋಡೋಣ :
ಮೇಧಾ ಪಾಟ್ಕರ್ ಇವರು ಸಾಮಾಜಿಕ ಕಾರ್ಯಕರ್ತೆ ಹಾಗೂ ಪರಿಸರ ಹೋರಾಟಗಾರ್ತಿ ಎಂದೇ ಪ್ರಸಿದ್ದರು.
ಮದರ್ ತೆರೇಸಾ ಇವರು ಮಾನವೀಯತೆಗೆ ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆಗೆ ತಮ್ಮನ್ನು ಮುಡುಪಾಗಿಸಿದವರು.
ರಾಜಾರಾಮ್ ಮೋಹನ್ ರಾಯ್ ಇವರು ಭಾರತದಲ್ಲಿ ಸಾಮಾಜಿಕ ಸುಧಾರಕರಾಗಿ ಸತಿ ಪದ್ಧತಿಯ ನಿರ್ಮೂಲನೆ ಹಾಗೂ ವಿಧವೆಯರ ಮರುವಿವಾಹಕ್ಕೆ ಉತ್ತೇಜನ ನೀಡಿದವರು.
ಮಹಾತ್ಮ ಗಾಂಧೀಜಿ ಇವರು ತಮ್ಮ ಜೀವನವನ್ನು ದೇಶ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸಲು ಮುಡಿಪಾಗಿಟ್ಟವರು ಇವರು ತಮ್ಮ ಮೌಲ್ಯಗಳೊಂದಿಗೆ ಮತ್ತು ತತ್ವಗಳೊಂದಿಗೆ ವಿಶ್ವಾದ್ಯಂತ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ.
ಅಣ್ಣ ಹಜಾರೆ ಇವರು ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸಿದವರು. ಸರಕಾರದ ಪಾರದರ್ಶಕತೆಯನ್ನು ಹೆಚ್ಚಿಸಲು ಚಳುವಳಿಗಳನ್ನು ಮುನ್ನಡೆಸಿದವರು.
ಕೈಲಾಶ್ ಸತ್ಯರ್ತಿ ಇವರು ಭಾರತೀಯ ಸಮಾಜ ಸುಧಾರಕ, ಮಕ್ಕಳ ಹಕ್ಕುಗಳ ಕಾರ್ಯಕರ್ತರು ಎಂದು ಪ್ರಖ್ಯಾತರಾದವರು.
ಸುನೀತಾ ಕೃಷ್ಣನ್ ಇವರು ಮಾನವ ಹಕ್ಕುಗಳ ಕಾರ್ಯಕರ್ತೆ, ಪ್ರಜ್ವಲ ಸಂಸ್ಥೆಯನ್ನು ಹುಟ್ಟು ಹಾಕಿದವರು ಹಾಗೂ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಡಿದವರು.
KLive Special Article ಇವರೆಲ್ಲರನ್ನೂ ಮಾದರಿಯಾಗಿಟ್ಟುಕೊಂಡು ನವ ಸಮಾಜಕಾರ್ಯಕರ್ತರು ರೂಪುಗೊಳ್ಳಬೇಕಾಗಿದ್ದು, ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ, ಪ್ರಸ್ತುತ ಸಮಾಜದಲ್ಲಿ ಪರಿಸರವನ್ನು ರಕ್ಷಣೆ ಮಾಡುವಲ್ಲಿ ನಾವು ಹೊಸ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಸಮಾಜಕ್ಕೆ ನಮ್ಮದೇ ಆದ ಕೊಡುಗೆಯನ್ನು ನೀಡೋಣ.
ಸಮಾಜಕಾರ್ಯವು ಒಂದು ವೃತ್ತಿಪರ ಶಿಕ್ಷಣವಾಗಿದ್ದು ನೀವು ಕೂಡ ಸಮಾಜದಲ್ಲಿ ಸಮಾಜ ಕಾರ್ಯಕರ್ತನೆಂದು ಗುರುತಿಸಿಕೊಳ್ಳಬೇಕಾದರೆ ಬಿ. ಎಸ್.ಡಬ್ಲ್ಯೂ, ಎಂ. ಎಸ್. ಡಬ್ಲ್ಯೂ ಕೋರ್ಸ್ ಗೆ ಪ್ರವೇಶಾತಿ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ, ಉತ್ತಮ ಸಮಾಜ ರಚನೆಯಲ್ಲಿ ನಿಮ್ಮ ಪಾಲೂ ನೀಡಬಹುದು.
ಬರಹ : ನ್ಯಾನ್ಸಿ ಲವಿನಾ ಪಿಂಟೊ, ಸಹಾಯಕ ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ