Sonia Gandhi ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಂಗಳವಾರ ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ)ಯ ಚುನ್ನಿಲಾಲ್ ಗರಾಸಿಯಾ ಮತ್ತು ಮದನ್ ರಾಥೋಡ್ ಕೂಡ ರಾಜಸ್ಥಾನದಿಂದ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಮಹಾವೀರ್ ಪ್ರಸಾದ್ ಶರ್ಮಾ ತಿಳಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ಮಂಗಳವಾರ ಕೊನೆಯ ದಿನವಾಗಿತ್ತು.
ಬೇರೆ ಯಾವುದೇ ಅಭ್ಯರ್ಥಿಗಳು ಸ್ಪರ್ಧಿಸದ ಕಾರಣ ಮೂವರು ನಾಯಕರು ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯರಾಗಿರುವ ಮನಮೋಹನ್ ಸಿಂಗ್ (ಕಾಂಗ್ರೆಸ್) ಮತ್ತು ಭೂಪೇಂದ್ರ ಯಾದವ್ (ಬಿಜೆಪಿ) ಅವರ ಅಧಿಕಾರಾವಧಿಯು ಏಪ್ರಿಲ್ 3ರಂದು ಕೊನೆಗೊಳ್ಳಲಿದೆ. ಬಿಜೆಪಿ ಸದಸ್ಯರ ಕಿರೋಡಿ ಲಾಲ್ ಮೀನಾ ಅವರು ಶಾಸಕರಾಗಿ ಆಯ್ಕೆಯಾದ ನಂತರ ಡಿಸೆಂಬರ್‌ನಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಮೂರನೇ ಸ್ಥಾನವು ತೆರವಾಗಿತ್ತು.
Sonia Gandhi ಒಟ್ಟು 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿ 115 ಮತ್ತು ಕಾಂಗ್ರೆಸ್ 70 ಸದಸ್ಯರನ್ನು ಹೊಂದಿದೆ. ರಾಜಸ್ಥಾನದಲ್ಲಿ 10 ರಾಜ್ಯಸಭಾ ಸ್ಥಾನಗಳಿವೆ. ಇಂದು ಮೂವರ ಆಯ್ಕೆಯ ನಂತರ ರಾಜ್ಯದಿಂದ ಕಾಂಗ್ರೆಸ್ ಆರು ಮತ್ತು ಬಿಜೆಪಿ ನಾಲ್ಕು ಸದಸ್ಯರನ್ನು ಹೊಂದಿದಂತಾಗಿದೆ.