Lokhande Snehal Sudhakar, ಮಾರ್ಚ್ 3 ರ ಭಾನುವಾರ ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು 0 ಯಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಜಿ.ಪಂ.ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಲಸಿಕಾ ಟಾಸ್ಕ್‍ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 0 ಯಿಂದ 5 ವರ್ಷದೊಳಗಿನ 120609 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಯಾವುದೇ ಮಕ್ಕಳು ಲಸಿಕೆಯಿಂದ ಕೈ ಬಿಟ್ಟು ಹೋಗದಂತೆ ಮೈಕ್ರೋ ಪ್ಲಾನ್ ಸಿದ್ದಪಡಿಸಿ ಕಾರ್ಯ ಪ್ರವೃತ್ತರಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯವಾಗಿ ಅತೀ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಡುವ ಕೊಳಚೆ ಪ್ರದೇಶ, ಅಲೆಮಾರಿ ಜನಾಂಗ, ಇಟ್ಟಿ ಭಟ್ಟಿಗಳು, ಕಟ್ಟಡ ನಿರ್ಮಾಣ ಕಾರ್ಮಿಕರ ವಸತಿ ಪ್ರದೇಶಗಳು, ಬಸ್ಸು ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಲಸಿಕೆ ನೀಡಬೇಕು. ಸೂಕ್ಷ್ಮ ಪ್ರದೇಶಗಳು, ಪೆರಿ ಅರ್ಬನ್ ಏರಿಯಾಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಶಿಕ್ಷಣ ಇಲಾಖೆಯವರು ಲಸಿಕಾ ದಿನದಂದು ಶಾಲೆಗಳನ್ನು ತೆರೆದಿರಬೇಕು. ಮೆಸ್ಕಾಂ ನವರು ಫೆ.25 ರಿಂದ ಮಾರ್ಚ್ 06 ರವರೆಗೆ ಅನಿಯಮಿತ ವಿದ್ಯುತ್ ಸರಬರಾಜು ನೀಡಬೇಕು. ಶಾಲಾ ಪ್ರಾರ್ಥನಾ ವೇಳೆ ಪಲ್ಸ್ ಪೋಲಿಯೋ ಲಸಿಕೆ ಕುರಿತು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರ ಸಭೆಯಲ್ಲಿ ಪೋಷಕರಿಗೆ ಅರಿವು ಮೂಡಿಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ತಮ್ಮ ಕ್ಷೇತ್ರದಲ್ಲಿ ಅರಿವು ಮೂಡಿಸಬೇಕು ಹಾಗೂ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕಸದ ವಾಹನಗಳಲ್ಲಿ ಲಸಿಕೆ ಕುರಿತಾದ ಜಿಂಗಲ್ಸ್‍ಗಳನ್ನು ಹಾಕಬೇಕು. ಜಿಲ್ಲೆಯಾದ್ಯಂತ ಎಲ್ಲೆಡೆ ಪಲ್ಸ್ ಪೋಲಿಯೋ ಲಸಿಕೆ ಕುರಿತು ಮಾಹಿತಿ ಶಿಕ್ಷಣ ಮತ್ತು ಸಂವಹ ಕಾರ್ಯಚಟುವಟಿಕೆಗಳನ್ನು ಕೈಡೊಂಡು ಒಂದು ಮಗವೂ ಲಸಿಕೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು. ಸೋಷಿಯಲ್ ಮೀಡಿಯಾ, ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಬಗ್ಗೆ ಪ್ರಚಾರ ಮಾಡಬೇಕು ಹಾಗೂ ಇತರೆ ಇಲಾಖೆಗಳು ಸಮನ್ವಯದೊಂದಿಗೆ ಲಸಿಕಾಕರಣವನ್ನು ಶೇ.100 ರಷ್ಟು ಯಶಸ್ವಿಗೊಳಿಸಬೇಕೆಂದು ಸೂಚನೆ ನೀಡಿದರು.
ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜನಾಯ್ಕ್ ಮಾತನಾಡಿ, ಅತಿಸೂಕ್ಷ್ಮ ಪ್ರದೇಶಗಳಿಂದ ಹಿಡಿದು ಬಸ್, ರೈಲ್ವೇ ನಿಲ್ದಾಣ ಸೇರಿದಂತೆ ಜಿಲ್ಲೆಯಲ್ಲಿ 1051 ಲಸಿಕಾ ಭೂತ್ ಗಳನ್ನು ತೆರೆದು ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆ. ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು, ಪ್ರಾ.ಆ.ಸುರಕ್ಷಾ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ರೋಟರಿ, ಲಯನ್ಸ್, ರೆಡ್‍ಕ್ರಾಸ್ ಸಂಘ ಸಂಸ್ಥೆಗಳ ಪ್ರತಿನಿಧಿಗಳು ವ್ಯಾಕ್ಸಿನೇಟರ್‍ಗಳಾಗಿ ಕಾರ್ಯ ನಿರ್ವಹಿಸುವರು. ಪ್ರತಿ ತಾಲ್ಲೂಕುಗಳಿಗೆ ನೋಡಲ್ ಅಧಿಕಾರಿ, ಮೇಲ್ವಿಚಾರಕರನ್ನು ನೇಮಿಸಲಾಗಿದೆ, ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
Lokhande Snehal Sudhakar, ಡಬ್ಲ್ಯುಹೆಚ್‍ಓ ಎಸ್‍ಎಂಓ ಡಾ.ಹರ್ಷಿತ್ ಮಾತನಾಡಿ, ಮಾರ್ಚ್ 3 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ವೈದ್ಯಕೀಯ ಅಧಿಕಾರಿಗಳು, ಮೇಲ್ವಿಚಾರಕರು, ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ, ಘಟಕ/ಪ್ರಾ.ಆ.ಕೇಂದ್ರ ಮಟ್ಟದ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ನಗರ ಮತ್ತು ತಾಲ್ಲೂಕು ಟಾಸ್ಕ್‍ಪೋರ್ಸ್ ಸಭೆಗಳು ನಡೆಯಲಿವೆ. ಮಾ.4 ಮತ್ತು 5 ರಂದು ಮತ್ತು ನಗರ ಪ್ರದೇಶಗಳಲ್ಲಿ ಮಾ.6 ರಂದು ಬೂತ್‍ಗಳಲ್ಲಿ ಬಿಟ್ಟು ಹೋದ ಮಕ್ಕಳಿಗೆ ಮನೆ ಮನೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು.
ಶಿವಮೊಗ್ಗದಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯಲ್ಲಿ 103 ಸೂಕ್ಷ್ಮ ಪ್ರದೇಶ ಸೇರಿದಂತೆ 1051 ಬೂತ್‍ಗಳಲ್ಲಿ ಲಸಿಕೆ ಹಾಕಲು ಗುರುತಿಸಲಾಗಿದೆ. 30 ಮೊಬೈಲ್ ಟೀಂ ಸೇರಿದಂತೆ 2391 ತಂಡಗಳಲ್ಲಿ ಒಟ್ಟು 3919 ಸಿಬ್ಬಂದಿ ಹಾಗೂ 205 ಮೇಲ್ವಿಚಾರಕರು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಮೀಸಲ್ಸ್ ರುಬೆಲ್ಲಾ :
ಜಿಲ್ಲೆಯಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿ ಕಂಡು ಬರುವ ಜ್ವರ ಮತ್ತು ದದ್ದು ಪ್ರಕರಣಗಳನ್ನು ಮೀಸಲ್ಸ್ ರುಬೆಲ್ಲಾ(ದಡಾರ)ಪರೀಕ್ಷೆ ನಡೆಸಿ ವರದಿ ನೀಡಬೇಕು. ಮೀಸಲ್ಸ್ ರುಬೆಲ್ಲಾ ಕುರಿತು ಸಮೀಕ್ಷೆಯನ್ನು ನಿಯಮಿತವಾಗಿ ಮಾಡಬೇಕು. ಲಸಿಕೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ಹಾಗೂ ಯಾವುದೇ ಮಗು ಮೀಸಲ್ಸ್ ರುಬೆಲ್ಲಾ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಎರಡೂ ಡೋಸ್‍ಗಳಲ್ಲಿ ಮಕ್ಕಳು ಡ್ರಾಪ್ ಔಟ್ ಆಗದಂತೆ ಕ್ರಮ ವಹಿಸುವ ಮೂಲಕ ಇದನ್ನು ನಿರ್ಮೂಲನೆಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಜಿ.ಪಂ ಸಿಇಓ ತಿಳಿಸಿದರು.
ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದ ಅವರು ಮೀಸಲ್ಸ್ ರುಬೆಲ್ಲಾ ಪ್ರಕರಣಗಳಿಗೆ ಸಂಬಂಧಿಸಿದ ಮಾದರಿಗಳನ್ನು ಸಮರ್ಪಕವಾಗಿ ಕಳುಹಿಸಿದ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಡಬ್ಲ್ಯುಹೆಚ್‍ಓ ಎಸ್‍ಎಂಓ ಡಾ.ಹರ್ಷಿತ್, ಮೊದಲನೇ ಮತ್ತು ಎರಡನೇ ಸುತ್ತಿನ ಮೀಸಲ್ಸ್ ರುಬೆಲ್ಲಾ ಲಸಿಕಾಕರಣದಲ್ಲಿ ಜಿಲ್ಲೆಯು ಶೇ.87 ಪ್ರಗತಿ ಸಾಧಿಸಿದೆ ಎಂದರು.
ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ:
ಫೆ.27 ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು 1 ರಿಮದ 19 ವರ್ಷದ ಎಲ್ಲ ಮಕ್ಕಳು ಜಂತು ಹುಳು ನಿವಾರಣಾ ಮಾತ್ರೆ ಆಲ್ಬೆಂಡಜಾಲ್‍ನ್ನು ಉಚಿತವಾಗಿ ಪಡೆದುಕೊಳ್ಳಬೇಕು ಎಂದು ಜಿ.ಪಂ ಸಿಇಓ ತಿಳಿಸಿದರು.
2023-24 ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟು 4,52, 072 ಮಕ್ಕಳಿಗೆ ಆಲ್ಬೆಂಡಜಾಲ್ ನೀಡುವ ಗುರಿ ಹೊಂದಲಾಗಿದ್ದು, ಎಲ್ಲ ಅರ್ಹ ಮಕ್ಕಳು ಇದರ ಸದುಪಯೋಗ ಪಡೆಯಬೇಕು. ಹಾಗೂ ಶಿಕ್ಷಕರು ತಮ್ಮ ಮುಂದೆಯೇ ಮಕ್ಕಳು ಮಾತ್ರೆ ತೆಗೆದುಕೊಳ್ಳುವಂತೆ ನೋಡಬೇಕು.
ಜಂತುಹುಳುವಿನಿಂದ ಅಪೌಷ್ಟಿಕತೆ ಸೇರಿಂದತೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವುದರಿಂದ ಮಕ್ಕಳಿಗೆ ಶುಚಿತ್ವದ ಬಗ್ಗೆ, ಕೈ ತೊಳೆಯುವ ಕ್ರಮದ ಬಗ್ಗೆ ಶಾಲೆಗಳಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಬೇಕು. ಶಿಕ್ಷಕರು ಜಂತು ಹುಳು ನಿವಾರಣಾ ಮಾತ್ರೆ ನೀಡುವ ಬಗ್ಗೆ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದರು.
ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಅಂಗನವಾಡಿ, ಶಾಲೆಗಳು, ಪದವಿಪೂರ್ವ ಕಾಲೇಜು, ಐಟಿಐ, ಟೆಕ್ನಿಕಲ್ ಕೋರ್ಸ್ ಕಾಲೇಜುಗಳು,ಪ್ರಥಮ ಬಿಎ, ಮೆಡಿಕಲ್, ಆಯುರ್ವೇದಿಕ್ ಕಾಲೇಜುಗಳಲ್ಲಿ 1 ರಿಂದ 19 ವರ್ಷದ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಅಲ್ಲದೆ ಶಾಲೆ ಬಿಟ್ಟ ಮಕ್ಕಳಿಗೆ ಸಂಬಂಧಪಟ್ಟ ಅಂಗನವಾಡಿಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಎಲ್ಲ ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಡಿಡಿಪಿಐ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು, ಐಎಂಎ, ಸಂಘ ಸಂಸ್ಥೆ ಪದಾಧಿಕಾರಿಗಳು, ಇತರೆ ಅಧಿಕಾರಿಗಳು ಹಾಜರಿದ್ದರು.