Radio Shivamogga ರೇಡಿಯೋ ಶಿವಮೊಗ್ಗ, ಪರಿಸರ ಅಧ್ಯಯನ ಕೇಂದ್ರ, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ಹತ್ತನೆಯ ತರಗತಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಕರಿಗೆ ವಿಶೇಷ ಕಾರ್ಯಾಗಾರ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ನಡೆಯಿತು.
ಪರೀಕ್ಷಾ ಸಮಯದಲ್ಲಿ ಪಾಲಕರು ಹೇಗಿರಬೇಕು ಎಂಬ ಕಾರ್ಯಾಗಾರ ಇದಾಗಿತ್ತು. ಇದರಲ್ಲಿ ಮನೋವಿಜ್ಞಾನಿ, ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದಯಾನಂದ ಸಾಗರ್, ಆಹಾರ ತಜ್ಞರಾದ ನಿರಾಲಿ ಹಾಗೂ ಅರ್ಪಿತಾ ಶೆಟ್ಟಿ ಭಾಗವಹಿಸಿದ್ದರು.
ಸಂವಾದ ರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಕರು ತಮ್ಮ ಅನೇಕ ಸಂದೇಹ, ಗೊಂದಲಗಳಿಗೆ ಉತ್ತರ ಕಂಡುಕೊಂಡರು.
ಮನೋವಿಜ್ಞಾನಿ, ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದಯಾನಂದ ಸಾಗರ್ ಜೊತೆಗೆ ನಡೆದ ಸಂವಾದದಲ್ಲಿ ಒತ್ತಡಗಳನ್ನು ನಿರ್ವಹಿಸುವ ಬಗೆಯನ್ನು ತಿಳಿದುಕೊಂಡರು. ಪಾಲಕರು ಹಾಗೂ ಮಕ್ಕಳ ನಡುವೆ ಬಾಂಧವ್ಯ ಹೇಗಿರಬೇಕು, ಮಕ್ಕಳಿಗೆ ನಿರ್ಣಾಯಕ ಘಟ್ಟದ ಪರೀಕ್ಷೆಗಳ ಸಂದರ್ಭದಲ್ಲಿ, ಅವರಿಗೆ ಹೇಗೆ ಆತ್ಮವಿಶ್ವಾಸ ತುಂಬಿಸಿ, ಮುನ್ನಡೆಸಬೇಕು ಇತ್ಯಾದಿ ಮಾಹಿತಿಗಳನ್ನು ಪಡೆದುಕೊಂಡರು.
ಆಹಾರ ತಜ್ಞರಾದ ನಿರಾಲಿ ಹಾಗೂ ಅರ್ಪಿತಾ ಶೆಟ್ಟಿ ಮಾತನಾಡಿ ಪರೀಕ್ಷಾ ಸಮಯದಲ್ಲಿ ಆಹಾರ ಹೇಗಿರಬೇಕು, ಪೌಷ್ಟಿಕಾಂಶಯುಕ್ತ ಆಹಾರಗಳೆಂದರೆ ಯಾವುವು, ಅದನ್ನು ಯಾವ ಸಮಯದಲ್ಲಿ, ಯಾವ ಪ್ರಮಾಣದಲ್ಲಿ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
Radio Shivamogga ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ನಾಗರಾಜ್, ಕಾಲೇಜಿನ ಉಪ ಪ್ರಾಂಶುಪಾಲ ಜಗದೀಶ್, ರೇಡಿಯೋ ಶಿವಮೊಗ್ಗದ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ, ಕಾರ್ಯಕ್ರಮ ಸಂಯೋಜಕ ಅಜೇಯ ಸಿಂಹ, ಆರ್ ಜೆ ಗಳಾದ ಮಹಾಲಕ್ಷ್ಮೀ, ರಕ್ಷಿತಾ ಹೊಳ್ಳ, ಅಶ್ವಿನಿ ಇನ್ನಿತರರು ಇದ್ದರು.