Klive news article ಇದು “ಗೋಪಿ ವೃತ್ತ” ಅಲ್ಲ “ಟಿ.ಸೀನಪ್ಪ ಶೆಟ್ಟಿ ವೃತ್ತ”
ಈ ಹೆಸರನ್ನೇ ಬಳಸುವಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳಲ್ಲಿ ಮನವಿ…
ಒಂದು ಕಾಲದಲ್ಲಿ ಶಿವಮೊಗ್ಗೆಯ ಹೃದಯಭಾಗದಲ್ಲಿನ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಗೋಪಿ ಹೋಟೆಲ್ ಇದ್ದು, ಈ ಕಾರಣಕ್ಕಾಗಿ ಗೋಪಿವೃತ್ತ ಎಂದು ಬಳಕೆಗೆ ಬಂದಿತು. ವಾಸ್ತವವಾಗಿ, ಗೋಪಿ ಎಂಬ ಹೆಸರಿಗೂ, ಆ ವೃತ್ತಕ್ಕೂ ಯಾವುದೇ ಸಂಬoಧ ಇಲ್ಲ. ಆದಾಗ್ಯೂ ಲಾಗಾಯ್ತಿನಿಂದ ಈ ಹೆಸರೇ ಪ್ರಚಲಿತವಾಗಿದೆ. ಈ ವೃತ್ತರಚನೆ-ವಿನ್ಯಾಸ ಹಾಗೂ ಆಕರ್ಷಣೀಯವಾಗಿಸಿದ ಟಿ. ಸೀನಪ್ಪ ಶೆಟ್ಟರ ಹೆಸರು ಮರೆಯಾಗಿರುವುದು ಮಾತ್ರ ವಿಪರ್ಯಾಸದ ಸಂಗತಿ. ಆದರೆ ಈ ವೃತ್ತದ ಇತಿಹಾಸವನ್ನು ಅವಲೋಕಿಸುವುದಾದರೆ, ಈ ಹಿಂದೆ 1946ರಲ್ಲಿ ಈ ಜಾಗದಲ್ಲಿ ಚಾಮುಂಡೇಶ್ವರಿ ಭವನ ಎಂಬ ಹೋಟೆಲ್ ಅನ್ನು ಕುಂದಾಪುರದ ವೆಂಕಟರಾವ್ ಎಂಬುವವರು ಪ್ರಾರಂಭಿಸಿದ್ದರು. ಮುಂದೆ ಇದು, ಸೆಂಟ್ರಲ್ ಕರ್ನಾಟಕ ಹೋಟೆಲ್ ಆಗಿ ಪರಿವರ್ತನೆಯಾಗಿತ್ತು.
ಆನಂತರ ಈ ಜಾಗದಲ್ಲಿ ಮಾಳೂರು ರಾಮಸ್ವಾಮಿಯವರು ಗೋಪಿ ಹೋಟೆಲ್ ಹೆಸರಿನಲ್ಲಿ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದರು. ಹೀಗಾಗಿ ಈ ವೃತ್ತಕ್ಕೆ ತನ್ನಷ್ಟಕ್ಕೆ ತಾನೇ ಗೋಪಿ ಸರ್ಕಲ್ ಎಂಬ ಹೆಸರು ಬಾಯಿಂದ ಬಾಯಿಗೆ ಹರಿದು ಬಂದಿದೆ. ಹಾಗೆ ನೋಡಿದರೆ, ಇದಕ್ಕೂ ಮೊದಲು ಇದು ಪೋಸ್ಟಾಫೀಸ್ ವೃತ್ತವಾಗಿತ್ತು. ಬ್ರಿಟೀಷರ ಕಾಲದಲ್ಲಿ ಈ ಭಾಗದಲ್ಲಿ ಪ್ರಧಾನ ಅಂಚೆ ಕಛೇರಿ ಇದ್ದ ಕಾರಣದಿಂದಾಗಿ, ಈ ವೃತ್ತಕ್ಕೆ ಪೋಸ್ಟಾಫೀಸ್ ವೃತ್ತ ಎಂದೂ ಕರೆಯಲಾಗಿತ್ತು.
ಶಿವಮೊಗ್ಗೆಯ ಹೃದಯಭಾಗದಲ್ಲಿರುವ ಪ್ರಮುಖ ವೃತ್ತಇದಾಗಿದ್ದು, ಇದನ್ನು ಕೊಡುಗೈ ದಾನಿಗಳೂ, ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯಾಪಾರಸ್ಥರೂ ಆಗಿದ್ದ ಸೀನಪ್ಪ ಶೆಟ್ಟರ ಸಹೋದರರು ಅವರ ಅಣ್ಣನ ನೆನಪಿಗಾಗಿ 1956 ರಲ್ಲಿ ಈ ವೃತ್ತವನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದ್ದರು. ಆಗಿನ ಕಾಲದಲ್ಲಿ 25,000 ರೂ.ಗಳನ್ನು ಖರ್ಚು ಮಾಡಿ, ಈ ವೃತ್ತವನ್ನು ನಿರ್ಮಿಸಲಾಗಿತ್ತು. ಸುತ್ತಲೂ ಕಲ್ಲನ್ನು ವೃತ್ತಾಕಾರದಲ್ಲಿ ಬಳಸಿ ನಿರ್ಮಿಸಿದ ಆಕರ್ಷಕ ವೃತ್ತ ಇದಾಗಿತ್ತು. ಟಿ.ಸೀನಪ್ಪ ಶೆಟ್ಟರ ಇನ್ನೊಬ್ಬ ಸಹೋದರರಾದ ಟಿ ರಾಮಸ್ವಾಮಿ ಶೆಟ್ಟಿಯವರು, 1958ರಲ್ಲಿ ಆಕಸ್ಮಿಕ ಅಪಘಾತದಲ್ಲಿತೀರಿಕೊಂಡರು. ಆದ್ದರಿಂದ ಅವರ ನೆನಪಿಗಾಗಿ 1959 ರಲ್ಲಿ ಅವರ ಸಹೋದರರು ಮತ್ತೆ 20,000ರೂ.ಗಳನ್ನು ಖರ್ಚು ಮಾಡಿ, ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಈ ವೃತ್ತದಲ್ಲಿ ಅವರ ಹೆಸರಲ್ಲಿ ನಾಮಫಲಕದೊಂದಿಗೆ ನೀರಿನ ಕಾರಂಜಿ (ಫೌಂಟೆನ್) ನಿರ್ಮಿಸಲಾಗಿತ್ತು. ಇದು ಮಲೆನಾಡು ಭಾಗದ ಮೊದಲ ನೀರಿನ ಕಾರಂಜಿ. ಇದು ಆ ಕಾಲದಲ್ಲಿಯೇ ವರ್ಣರಂಜಿತವಾದ ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದ ಕಾರಂಜಿ ವೃತ್ತ. ಈ ವೃತ್ತದ ಮೂಲಕ ಹಾದು ಹೋಗುವುದೇ ಒಂದು ರೋಮಾಂಚಕಾರಿ ಅನುಭವವಾಗಿತ್ತು. ಸುತ್ತಲೂ ಕಲ್ಲಿನ ಬೆಂಚ್‌ಗಳಲ್ಲಿ ಸಂಜೆ ಜನ ಕುಳಿತು ಕಾರಂಜಿಯನ್ನು ವೀಕ್ಷಿಸುತ್ತಿದ್ದರು. ಕಾಲ ಕಳೆದಂತೆ ಸಂಚಾರ ಒತ್ತಡ ಹೆಚ್ಚಾದಂತೆಲ್ಲಾ ಮುಂದೆ ಈ ಕಾರಂಜಿಯನ್ನು ಅನಿವಾರ್ಯವಾಗಿ ನಗರಸಭೆ ಆವರಣಕ್ಕೆ ನಾಮಫಲಕದ ಸಮೇತ ಸ್ಥಳಾಂತರಿಸಲಾಗಿತ್ತು. ಮುಂದೆ ಈ ಕಾರಂಜಿ ಹಳತಾದ್ದರಿಂದ ಹಾಗೂ ಈ ಕಾರಂಜಿ ಇದ್ದ ಜಾಗದಲ್ಲಿ ಅಂಬೇಡ್ಕರ್‌ರವರ ಪ್ರತಿಮೆ ಸ್ಥಾಪಿಸಬೇಕಾದ್ದರಿಂದ ಪಾಲಿಕೆಯವರು ಕಾರಂಜಿಯನ್ನು ತೆರವುಗೊಳಿಸಿದರು. ಸೀನಪ್ಪ ಶೆಟ್ಟಿ ವೃತ್ತ ಹಾಗೂ ಇಂದಿನ ಪಾಲಿಕೆ ಆವರಣದಲ್ಲಿ ಗಮನ ಸೆಳೆದಿದ್ದ ಈ ಕಾರಂಜಿ ಪ್ರಸ್ತುತ ಮೂಲೆ ಗುಂಪಾಗಬೇಕಾಯಿತು. ಸುಮಾರು 57 ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದ ಕಾರಂಜಿ ಇತಿಹಾಸದ ಪುಟ ಸೇರಿತ್ತು. ಸೀನಪ್ಪ ಶೆಟ್ಟಿ ಸಹೋದರರ ಈ ಕೊಡುಗೆ ಈಗ ನೆನಪು ಮಾತ್ರ.
Klive news article ಮುಂದೆ ಈ ವೃತ್ತದಲ್ಲಿ ಸಿಗ್ನಲ್ ಲೈಟ್‌ಗಳ ಅಳವಡಿಕೆಗೆ ಶ್ರೀನಿಧಿ ಕುಟುಂಬ ತನ್ನ ಕೊಡುಗೆಯಾಗಿ 15,000 ರೂ ಗಳ ವಂತಿಕೆ ನೀಡಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿನ ಈ ವೃತ್ತದ ನಿರ್ಮಾಣ ಹಾಗೂ ಸೌಂದರ್ಯೀಕರಣಕ್ಕೆ ಕಾರಣರಾದ ಟಿ. ಸೀನಪ್ಪ ಶೆಟ್ಟಿಯವರ ಹೆಸರನ್ನೇ ಮುಂದಿನ ದಿನಗಳಲ್ಲಿಉಳಿಸಿಕೊಂಡು ಹೋಗಬೇಕಿದೆ. ಹೀಗಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿಯವರ ಹೆಸರನ್ನೇ ಬಳಸುವಂತೆ ವಿನಂತಿಸಲಾಗುತ್ತಿದೆ. ಈ ಮೂಲಕ ಮುಂದಿನ ತಲೆಮಾರಿಗೆ ಅನನ್ಯ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಕೆಲಸವಾಗಬೇಕಿದೆ.
ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ವ್ಯವಹಾರಗಳಲ್ಲಿ ಸುತ್ತೋಲೆ, ಪತ್ರಿಕಾ ಪ್ರಕಟಣೆಗಳಲ್ಲಿ ಸಹ ತಪ್ಪದೇ ಈ ಸರ್ಕಲ್‌ನ ಹೆಸರು ನಮೂದಿಸುವಾಗ ಟಿ. ಸೀನಪ್ಪಶೆಟ್ಟಿ ವೃತ್ತ ಎಂದೇ ಬಳಸುವಂತೆ ವಿನಂತಿಸಲಾಗಿದೆ.
ಮಹಾನಗರ ಪಾಲಿಕೆಯ ಎಲ್ಲಾ ದಾಖಲಾತಿಗಳಲ್ಲೂ ಸಹ ಸೀನಪ್ಪಶೆಟ್ಟಿ ವೃತ್ತ ಎಂದು ಅಧಿಕೃತವಾಗಿ ನಮೂದಾಗಿದ್ದರೂ, ಸಾರ್ವಜನಿಕ ಬಳಕೆ ಅಷ್ಟಾಗಿ ಕಂಡು ಬಂದಿಲ್ಲದಿರುವುದು ವಿಷಾದಕರ. ಮುಂದಿನ ದಿನಗಳಲ್ಲಿ ಈ ವೃತ್ತ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂದೇ ಬಳಕೆಯಾಗಬೇಕು ಎಂಬ ಉದ್ದೇಶದಿಂದ ಅವರ ಮುಂದಿನ ತಲೆಮಾರು ಕಲ್ಲು ಕೆತ್ತನೆಯ ನಾಮಫಲಕವನ್ನು ಅಳವಡಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅವಧಿಯಲ್ಲಿ ಈ ವೃತ್ತ ಈಗ ಇನ್ನಷ್ಟು ವಿಶಾಲವಾಗಿದೆ. ಸಂಚಾರ ಸುಗಮವಾಗಿ ನಡೆಯಬೇಕು ಎಂದು ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ವೃತ್ತವನ್ನು ಇನ್ನು ಮುಂದೆ ಟಿ.ಸೀನಪ್ಪಶೆಟ್ಟಿ ವೃತ್ತ ಎಂದು ಗುರುತಿಸಿ, ಅವರ ಅನನ್ಯ ಹಾಗೂ ದೂರದೃಷ್ಟಿಯ ಕೊಡುಗೆಯನ್ನು ಮುಂದಿನ ಪೀಳಿಗೆಗೆ ದಾಖಲಿಸಬೇಕಾಗಿ ಕೋರಲಾಗಿದೆ. ಇದರಿಂದ ದಾನಿಗಳಾಗಿ ಸಾರ್ವಜನಿಕರು ಮುಂದೆ ಬರಲು ಪ್ರೋತ್ಸಾಹ ನೀಡಿದಂತಾಗುತ್ತದೆ.
ಫ್ಲೆಕ್ಸ್ಗಳನ್ನು ಮಾಡಿಸುವ ಗ್ರಾಹಕರು ಸಾಮಾನ್ಯವಾಗಿ ಗೋಪಿ ವೃತ್ತ ಎಂದು ನಮೂದಿಸುತ್ತಾರೆ. ಆದರೆ, ದಯವಿಟ್ಟು ಫ್ಲೆಕ್ಸ್ ಮಾಡುವವರು ಫ್ಲೆಕ್ಸ್ಗಳಲ್ಲಿ ಗೋಪಿ ವೃತ್ತ ಎಂದು ಬಳಸದೆ ‘ಟಿ.ಸೀನಪ್ಪ ಶೆಟ್ಟಿ ವೃತ್ತ’ ಎಂದು ನಮೂದಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ.
• ಟಿ. ಸೀನಪ್ಪ ಶೆಟ್ಟಿ ಪರಿವಾರದ ಕಿರು ಪರಿಚಯ
ಮೂಲತಃ ತರೀಕೆರೆಯ ನಿವಾಸಿಗಳಾದ ಟಿ. ಸೀನಪ್ಪಶೆಟ್ಟಿ ಪರಿವಾರ ವ್ಯವಹಾರದ ದೃಷ್ಟಿಯಿಂದ ಶಿವಮೊಗ್ಗದಲ್ಲಿ ನೆಲೆ ನಿಂತವರು. ಹಿರಿಯರಾದ ಟಿ. ಸೀನಪ್ಪ ಶೆಟ್ಟಿಯವರ ಸಹೋದರರಾದ ಟಿ. ನಾರಾಯಣಶೆಟ್ಟಿ, ಟಿ. ಗೋವಿಂದಸ್ವಾಮಿಶೆಟ್ಟಿ, ಟಿ. ರಾಮಸ್ವಾಮಿಶೆಟ್ಟಿ, ಟಿ. ಪುಟ್ಟಸ್ವಾಮಿಶೆಟ್ಟಿ, ಟಿ. ನಾಗರಾಜ ಶೆಟ್ಟಿ ಅವರು ಕೊಡುಗೈ ದಾನಿಗಳಾಗಿ ಶಿವಮೊಗ್ಗದಲ್ಲಿ ಧಾರ್ಮಿಕ,
ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹದಾಯಕರಾಗಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಹೃದಯಭಾಗದಲ್ಲಿನ ಈ ವೃತ್ತ ನಿರ್ಮಾಣ ಹಾಗೂ ಸೌಂದರ್ಯೀಕರಣಕ್ಕೆ ಕಾರಣರಾದ ಟಿ. ಸೀನಪ್ಪ ಶೆಟ್ಟಿಯವರ ಹೆಸರನ್ನೇ ಉಳಿಸಿಕೊಂಡು ಹೋಗಬೇಕಿದೆ. ಹೀಗಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿಯವರ ಹೆಸರನ್ನೇ ಬಳಸುವಂತೆ ವಿನಂತಿಸಲಾಗಿದೆ. ತಮ್ಮ ಬರವಣಿಗೆಗಳಲ್ಲಿ ಈ ಸರ್ಕಲ್ ಟಿ. ಸೀನಪ್ಪ ಶೆಟ್ಟಿ ಸರ್ಕಲ್ ಎಂದು ಹೆಸರು ಬಳಸುವ ಮೂಲಕ, ಮುಂದಿನ ತಲೆಮಾರಿಗೆ ಅನನ್ಯ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಕೆಲಸವಾಗಬೇಕಿದೆ. ಪ್ರಸ್ತುತ ಶ್ರೀನಿಧಿ ಕುಟುಂಬದ ಕುಡಿಗಳಾದ ಟಿ. ಆರ್. ಅಶ್ವತ್ಥನಾರಾಯಣ ಶೆಟ್ಟಿ, ಟಿ. ಆರ್. ವೆಂಕಟೇಶಮೂರ್ತಿ ಹಾಗೂ ಅವರ ಮಕ್ಕಳು ಈ ಸಂಸ್ಥೆಯನ್ನು ಹೆಚ್ಚು ಶ್ರದ್ಧೆಯಿಂದ ನಡೆಸುತ್ತಾ, ಶಿವಮೊಗ್ಗೆಯ ಜನತೆಗೆ ಅನೇಕ ವಿಧದಲ್ಲಿ ತಮ್ಮ ಶಕ್ತಿ ಅನುಸಾರ ಸೇವೆಯನ್ನು ಸಲ್ಲಿಸುತ್ತಿದ್ದು, ಅವರ ಮಕ್ಕಳು ಸಹ ಈ ಕಾರ್ಯದಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಸಂತೋಷದ ವಿಚಾರ.

ಇದರಿಂದ ಈ ಸರ್ಕಲ್ ಹೆಸರು ಬಳಸುವ ಸಂದರ್ಭಗಳಲ್ಲಿ ದಯವಿಟ್ಟು “ಟಿ. ಸೀನಪ್ಪ ಶೆಟ್ಟಿ ವೃತ್ತ” ಎಂದೇ ಕರೆಯಬೇಕು ಅಥವಾ ನಮೂದಿಸಬೇಕಾಗಿ ಶಿವಮೊಗ್ಗೆಯ ಪ್ರಜೆಯಾಗಿ ಎಲ್ಲರನ್ನೂ ಪ್ರಾರ್ಥಿಸುತ್ತೇನೆ.
ಲೇ; ಹೆಚ್.ಖಂಡೋಬರಾವ್
ಸಹನಾ, ಗಾಂಧಿನಗರ ಮುಖ್ಯರಸ್ತೆ ಶಿವಮೊಗ್ಗ