Constitution of India ಸಮತೆಯ ಆಶಯ ಹೊತ್ತ ಜಗತ್ತಿನ ಅತೀ ದೊಡ್ಡ ಲಿಖಿತ ಸಂವಿಧಾನ ನಮ್ಮದು ಅನ್ನೋ ಹೆಮ್ಮೆ ಎಲ್ಲಾ ಭಾರತೀರದ್ದು. ಇದೀಗ ಸಂವಿಧಾನಕ್ಕೆ 75 ನೇ ವರ್ಷಾಚರಣೆ, ಇಡೀ ಭಾರತೀಯರು ಖುಷಿಪಡುವ ಸಂದರ್ಭ ಆಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆಯವರು ತಿಳಿಸಿದ್ದಾರೆ.
ಒಂದು ಪ್ರಜಾಪ್ರಭುತ್ವ ದೇಶಕ್ಕೆ ಸಂವಿಧಾನವು ನೆಲದ ಕಾನೂನಾಗಿ, ಮಾರ್ಗಸೂಚಿಯಾಗಿ ಕೆಲಸ ನಿರ್ವಹಿಸುತ್ತಿರುತ್ತದೆ, ಹಾಗೂ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹಿತೈಷಿಯೂ ಆಗಿರುತ್ತದೆ. ಇಂತಹ ಸಂವಿಧಾನ ರಚನೆ ಮಾಡುವ ಮಹತ್ವದ ಕಾರ್ಯ ಮಾಡುವಲ್ಲಿ ಡಾ.ಬಿ ಆರ್ ಅಂಬೇಡ್ಕರ್, ಜವಹಾರಲಾಲ್ ನೆಹರು, ಸಿ ರಾಜ ಗೋಪಾಲಚಾರಿ, ರಾಜೇಂದ್ರ ಪ್ರಸಾದ್, ವಲ್ಲಭಭಾಯ್ ಪಟೇಲ್, ಅಬುಲ್ ಕಲಾಂ ಆಜಾದ್,ರಂಜನ್ ಮುಖರ್ಜಿ ಮತ್ತು ಹಲವು ನಾಯಕರ ಪಾತ್ರ ಗಣನೀಯವಾಗಿದೆ ಎಂದಿದ್ದಾರೆ.
ಒಟ್ಟು 2 ವರ್ಷ 11 ತಿಂಗಳು 18 ದಿನಗಳ ಕಾಲದಲ್ಲಿ ಸಂವಿಧಾನ ರಚನೆಯ ಕಾರ್ಯ ನಡೆಯಿತು. ಮತ್ತು ನಮ್ಮ ಸಂವಿಧಾನವನ್ನು 1949 ರ ನವೆಂಬರ್ 26 ರಂದು ಅಂಗೀಕರಿಸಲಾಯಿತು. 1950 ರ ಜನವರಿ 26 ರಂದು ಜಾರಿಗೊಳಿಸಲಾಯಿತು.
ಸಂವಿಧಾನದಲ್ಲಿ ಒಟ್ಟು 470 ವಿಧಿ ಹಾಗೂ 25 ಭಾಗ ಹೊಂದಿರುವ ಭವ್ಯ ಸಂವಿಧಾನ ನಮ್ಮದಾಗಿದೆ.ನಮ್ಮ ಸಂವಿಧಾನ ದೇಶದ ಪ್ರತಿಯೊಬ್ಬರಿಗೂ ಪ್ರಾಮುಖ್ಯತೆ ಕೊಡುವಂತಹ ವಿಚಾರವನ್ನೇ ಒಳಗೊಂಡಿದೆ. ನಮ್ಮ ಸಂವಿಧಾನದ ವಿಶೇಷತೆ ಎಂದರೆ ಇದು ಏಕ ಸಂವಿಧಾನ, ಏಕ ಪೌರತ್ವ ಹೊಂದಿದೆ , ಸಮಗ್ರ ನ್ಯಾಯಾಂಗ ವ್ಯವಸ್ಥೆ ಇದ್ದು ಬಲವಾದ ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ರಾಜ್ಯಪಾಲರುಗಳ ನೇಮಕವಾಗುತ್ತದೆ.
ಅಖಿಲ ಭಾರತ ಸೇವೆಗಳು ಮತ್ತು ತುರ್ತು ಪರಿಸ್ಥಿತಿಯಂತಹ ಏಕೀಕೃತ ಲಕ್ಷಣಗಳನ್ನು ಸಹ ಹೊಂದಿದ್ದು ನಿಬಂಧನೆಗಳನ್ನು ಒಳಗೊಂಡಂತಹ ಸಂವಿಧಾನ ನಮ್ಮದು. ಸಂವಿಧಾನದ ಪ್ರಾಮುಖ್ಯತೆ ನೋಡುವುದಾದರೆ ಸಂವಿಧಾನವು ಒಂದು ದೇಶದ ಹೊರಗಿನ ನಡವಳಿಕೆಗೆ ಮತ್ತು ನಾಗರಿಕ ಸ್ವಾತಂತ್ರ್ಯಕ್ಕೆ ಹೇಗೆ ಸ್ಪಂದಸಬೇಕೆಂದು ತಿಳಿಸುತ್ತದೆ. ಇದು ನಾಗರೀಕ ಹಕ್ಕುಗಳ ರಕ್ಷಣೆಯ ರಕ್ಷಕನಾಗಿ ಹಾಗೂ ಮಾರ್ಗದರ್ಶಕನಾಗಿರುತ್ತದೆ ಮತ್ತು ಸರ್ಕಾರ ಸಂಘಟನೆಗೆ ನಿರ್ದೇಶನ ನೀಡುತ್ತದೆ ಎಂದರು.
Constitution of India ಸಂವಿಧಾನವು ಭಾರತದ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಐತಿಹಾಸಿಕ ಹಿನ್ನೆಲೆಯನ್ನು, ಸಾಮರಸ್ಯವನ್ನು, ನ್ಯಾಯಪರತೆಯನ್ನು ಪ್ರತಿನಿಧಿಸುತ್ತದೆ. ಹಾಗೂ ನಾಗರೀಕ ಹಕ್ಕುಗಳ ರಕ್ಷಣೆ, ಧರ್ಮನಿರಪೇಕ್ಷತೆ ಮತ್ತು ನ್ಯಾಯಸ್ಥಾನಗಳ ಸ್ವತಂತ್ರತೆಯ ಆದರ್ಶಗಳನ್ನು ಹೊಂದಿದ್ದು, ವ್ಯಕ್ತಿಗಳ ಹಕ್ಕುಗಳ ಸಂರಕ್ಷಣೆ ಮತ್ತು ಸಮಾಜದಲ್ಲಿ ಸಾಮರಸ್ಯ, ಶಾಂತಿ, ಸೌಹಾರ್ಧತೆ ಬೆಳೆಸುವ ಉದ್ದೇಶಗಳನ್ನು ಹೊಂದಿದೆ. ಇದರ ಮೂಲಕ ಸಂವಿಧಾನ ಜನರಿಗೆ ನ್ಯಾಯ, ಸಮಾನತೆ ಮತ್ತು ಸಮರ್ಥನೀಯ ಸಾಮಾಜಿಕ ನಡವಳಿಕೆ ಹಾಗೂ ಸ್ವಾತಂತ್ರ್ಯವನ್ನು ನೀಡುತ್ತಿದೆ.
ಇಷ್ಟೇಲ್ಲಾ ಅಲ್ಲದೆ ಇನ್ನೂ ಅನೇಕ ವಿಶೇಷಗಳಿವೆ. ಆದರೆ ಜನ ಸಾಮಾನ್ಯರಿಗೆ ಸಂವಿಧಾನದ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದೇ ಇರುವುದು ಶೋಚನೀಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿಯೊಬ್ಬ ಪ್ರಜೆಗೂ ನಮ್ಮ ನೆಲದ ಕಾನೂನಾದ ಸಂವಿಧಾನ ಹಾಗೂ ಅದರ ಆಶಯದ ಕುರಿತು ಅರಿವು ಮೂಡಿಸುವುದಕ್ಕಾಗಿ ರಾಜ್ಯಾದ್ಯಂತ ಜ.26 ರಿಂದ ಒಂದು ತಿಂಗಳ ಕಾಲ ಸಂವಿಧಾನ ಜಾಗೃತಿ ಜಾಥಾ ನಡೆಸುತ್ತಿದೆ. ಜಾಥಾ ಮೂಲಕ ಪ್ರತಿಯೊಬ್ಬ ಸಾರ್ವಜನಿಕರಿಗೂ ಸಂವಿಧಾನದ ಮಹತ್ವ ಏನು, ತಮ್ಮ ಹಕ್ಕುಗಳು ಮತ್ತು ಕರ್ತವ್ಯ ಹಾಗೂ ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸಲಿದೆ. ಪ್ರತಿ ಗ್ರಾ.ಪಂ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸಂವಿಧಾನದ ಅರಿವು ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಶಾಂತಿ ಸೌಹಾರ್ಧ, ಸಹಬಾಳ್ವೆ, ಸಮಾನತೆ, ಪ್ರಜಾಪ್ರಭುತ್ವ, ಒಕ್ಕೂಟ ಸರ್ಕಾರ ಹಾಗೂ ಸ್ವತಂತ್ರ ಭಾರತದ ಪರಿಕಲ್ಪನೆಯ ಸಂವಿಧಾನವು ಭಾರತೀಯರೆಲ್ಲರ ಹಕ್ಕುಗಳನ್ನು ಕಾಯ್ದಿರಿಸಿದೆ. ಇಂತಹ ಅಖಂಡ ಭಾರತದ ಪ್ರಜೆಗಳಾದ ನಾವು ನಮ್ಮ ಸಂವಿಧಾನವನ್ನು ತಿಳಿಯೋಣ. ಸಂವಿಧಾನವನ್ನು ಉಳಿಸೊಣ ಎಂಬ ಆಶಯದೊಂದಿಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಜ.26 ರಿಂದ ಒಂದು ತಿಂಗಳ ಕಾಲ ಪ್ರತಿ ಗ್ರಾ.ಪಂ ಮಟ್ಟದಲ್ಲಿ, ತಾಲ್ಲೂಕು ಮಟ್ಟ ಹಾಗೂ ಜಿಲ್ಲಾಮಟ್ಟದಲ್ಲಿ ಸಂಭ್ರಮ ಮತ್ತು ಉತ್ಸಾಹದಿಂದ ನಡೆಸಲಾಗುತ್ತಿದೆ ಎಂದು ತಿಳಿಸಿದರು.