Akashavani Bhadravati ಆಕಾಶವಾಣಿ ಭದ್ರಾವತಿ ಕೇಂದ್ರದ ವಜ್ರ ಮಹೋತ್ಸವ ವರ್ಷ ಆರಂಭದ ಹಿನ್ನೆಲೆಯಲ್ಲಿ ಕೇಂದ್ರದ ಆವರಣದಲ್ಲಿ ಕೇಳುಗರೊಂದಿಗೆ ಆಯೋಜಿಸಿದ್ದ ಸಂಭ್ರಮ ಆಚರಣೆ ಕಾರ್ಯಕ್ರಮದ ಮುನ್ನುಡಿ ಯಶಸ್ವಿಯಾಗಿ ಜರುಗಿತು.
ಭದ್ರಾವತಿ ಆಕಾಶವಾಣಿ ಕೇಂದ್ರವು 60ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕುಲಪತೊ ಪ್ರೊ. ಎಸ್.ವೆಂಕಟೇಶ್ ಅವರು ವಿಶ್ವಜ್ಞಾನಿ ಅಂಬೇಡ್ಕರ್ ಕುರಿತು ಪ್ರಸಾರವಾದ ಸರಣಿಯ ಪ್ರಶ್ನೆಗೆ ಸರಿ ಉತ್ತರ ನೀಡಿದ 45 ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಪ್ರೊ. ಎಸ್.ವೆಂಕಟೇಶ ಏಪ್ರಿಲ್ 14 ರಿಂದ ವರ್ಷಪೂರ್ತಿ ಅಂಬೇಡ್ಕರ್ ವಿಚಾರಧಾರೆಯನ್ನು ಆಕಾಶವಾಣಿ ಸಹಯೋಗದಲ್ಲಿ ಪ್ರಸಾರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಭದ್ರಾವತಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ವಜ್ರ ಮಹೋತ್ಸವದ ಪ್ರಯುಕ್ತ ಮಹಿಳೆಯರಿಗೆ ಅಡುಗೆ ಕಾರ್ಯಕ್ರಮ, ಮಕ್ಕಳಿಗೆ ಪಂಚತಂತ್ರ ಕಥೆ, ಶಿವಮೊಗ್ಗ ಪ್ರವಾಸಿತಾಣ ಪರಿಚಯ, ಸಿನಿಪ್ರಿಯರಿಗೆ ಚಿತ್ರಲಹರಿ, ಯುವಕರಿಗೆ ವೃತ್ತಿ ಮಾರ್ಗದರ್ಶನವನ್ನು ಒಳಗೊಂಡ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
Akashavani Bhadravati ಕೇಳುಗರ ಪರವಾಗಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಉಮೇಶ್ ದಾವಣಗೆರೆ, ಅಥಣಿಯಿಂದ ಶ್ರೀಶೈಲ ತೇಲಿ, ಕಲ್ಬುರ್ಗಿ ಮಹೇಶ್ ಹಿಪ್ಪರಿಗಿ, ನ್ಯಾಮತಿ ಹಂಪಣ್ಣ. ಹಾಗೂ ಆಕಾಶವಾಣಿಯ ಎಲ್ಲಾ ಉದ್ಘೋಷಕರು, ಆಡಳಿತ ಅಧಿಕಾರಿಗಳು, ರಾಜ್ಯದ ವಿವಿಧ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಜನ ಕೇಳುಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಿಸಿಕೆ ಹಾಗೂ ಅಭಿಪ್ರಾಯವನ್ನು ನೇರ ಪ್ರಸಾರದಲ್ಲಿ ಹಂಚಿಕೊಂಡರು.
ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ನೆಲ್ಲಿಕಟ್ಟೆ ಸಿದ್ದೇಶ್, ತಾಂತ್ರಿಕ ವಿಭಾಗದ ಮುಖ್ಯಸ್ಥ ಪಿ.ಆರ್. ಶ್ರೀಪತಿ, ಕಾರ್ಯಕ್ರಮ ಅಧಿಕಾರಿ ಎಸ್.ಎಲ್.ರಮೇಶ್ ಪ್ರಸಾದ್, ಸಹಾಯಕ ಅಭಿಯಂತರ ನಟೇಶ್ ರಾಮನ್, ಬಸವರಾಜ ನೆಲ್ಲಿಸರ, ಬಸವರಾಜಪ್ಪ ಅಪರಂಜಿ ಶಿವರಾಜ್ ಗಣ್ಯರು ಉಪಸ್ಥಿತರಿದ್ದರು.