Kannada and Culture Secretariat ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ ಇವರ ಸಹಯೋಗದೊಂದಿಗೆ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ರಾಜೇಶ್ವರಿ ಎನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅಂಬೇಡ್ಕರ್ ಅವರ ಕನಸಿನಂತೆ ಎಲ್ಲರೂ ನಮ್ಮ ನಮ್ಮ ಕರ್ತವ್ಯಗಳನ್ನು ಬಹಳ ಶ್ರದ್ಧೆಯಿಂದ ಮಾಡುತ್ತಾ ಸಮಾಜದಲ್ಲಿ ಸಹಬಾಳ್ವೆಯೊಂದಿಗೆ ಗೌರವಯುತವಾಗಿ ಭಾರತೀಯರಾಗಿ ಬಾಳೋಣ ಎಂದು ತಿಳಿಸಿದರು.
ನಿಮ್ಮ ಭವಿಷ್ಯದ ಮೇಲೆ ನಂಬಿಕೆ ಇಡಬೇಡಿ ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ ಎಂಬ ಅಂಬೇಡ್ಕರ್ ಅವರ ಮಾತನ್ನು ನೆನಪಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಡಾ. ನಾಗರಾಜ್ ಪರಿಸರ ಮುಖ್ಯಸ್ಥರು ಪರಿಸರ ವಿಜ್ಞಾನ ಹಾಗೂ ಭಾರತ ಸಂವಿಧಾನ ವಿಭಾಗ ಸಹ್ಯಾದ್ರಿ ವಿಜ್ಞಾನ ಕಾಲೇಜು ಇವರು ವಿದ್ಯಾವಂತರಾಗಿರಿ ಸಂಘಟಿತರಾಗಿರಿ ಮತ್ತು ಉತ್ತೇಜಿತರಾಗಿರಿ ಎಂಬ ಅಂಬೇಡ್ಕರ್ ಅವರ ಮಾತಿನಿಂದ ಆರಂಭಿಸಿ ಸಂಘಟಿತರಾಗುವ ಮೂಲಕ ಸಮಾಜದಲ್ಲಿ ಶೋಷಣೆಯನ್ನು ನಿಲ್ಲಿಸಬಹುದು. ವಿದ್ಯಾವಂತರಾದ ನಾವು ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.
ವಿದ್ಯಾವಂತರು ಪಡೆದ ಶಿಕ್ಷಣ ಬಡವರ ಕಣ್ಣೀರು ಒರೆಸುವುದಕ್ಕೆ ಸಹಾಯವಾಗಬೇಕೆ ಹೊರತು ಕಣ್ಣೀರು ಬರಿಸುವ ಕೆಲಸವಾಗಬಾರದು ಎಂದು ತಿಳಿಸಿದರು. ನುಡಿದಂತೆ ನಡೆಯುತ್ತ ಸತ್ಯ, ನ್ಯಾಯದ ಹಾದಿಯಲ್ಲಿ ಪ್ರಮಾಣಿಕವಾಗಿ ಎಲ್ಲರೊಡನೆ ಒಂದಾಗಿ ನಾವೆಲ್ಲ ಬಾಳೋಣ ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಕನಸಿನಂತೆ ಬಡವರು ಬಡವರಾಗಿ ಉಳಿಯದೆ ಅವರನ್ನು ಮೇಲೆ ಎತ್ತುವ ಕೆಲಸ ಸಮಾಜದಲ್ಲಿ ಉಳ್ಳವರಿಂದ ಆಗಬೇಕಾಗಿದೆ, ಎಲ್ಲಾ ನನಗೆ ಬೇಕು ನಮ್ಮವರಿಗೆ ಬೇಕು ಎಂಬ ಭಾವನೆಯನ್ನು ಬಿಡಬೇಕಾಗಿದೆ ಎಂದು ತಿಳಿಸಿದರು.
Kannada and Culture Secretariat ಶ್ರೀ ಉಮೇಶ್. ಎಚ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಪ್ರಭಾಕರ್ ಬಿ. ಟಿ ಮುಖ್ಯಸ್ಥರು ಜೈವಿಕ ತಂತ್ರಜ್ಞಾನ ವಿಭಾಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.