Rotary Shivamogga ಆಧುನಿಕ ದಿನಗಳಲ್ಲಿ ಸರಿಯಾದ ಜೀವನಶೈಲಿ, ಆರೋಗ್ಯ ಪದ್ಧತಿ ಪಾಲಿಸದೇ ಇರುವುದರಿಂದ ಪಾರ್ಶ್ವವಾಯು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಉತ್ತಮ ಜೀವನಶೈಲಿ, ದಿನನಿತ್ಯ ವ್ಯಾಯಾಮ ಅಭ್ಯಾಸ ಮಾಡುವುದರಿಂದ ಸದೃಢ ಆರೋಗ್ಯ ನಮ್ಮದಾಗುತ್ತದೆ ಎಂದು ಸರ್ಜಿ ಆಸ್ಪತ್ರೆಯ ನರರೋಗ ತಜ್ಞ ಪ್ರಶಾಂತ್ ಶ್ರೀಪುರಂ ಅಭಿಪ್ರಾಯಪಟ್ಟರು.
ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅತಿಯಾದ ರಕ್ತದೊತ್ತಡ, ಟೆನ್ಷನ್, ಧೂಮಪಾನ, ಮದ್ಯಪಾನ ಹಾಗೂ ಮಧುಮೇಹದಿಂದಲೂ ಪಾರ್ಶ್ವವಾಯುವಿಗೆ ತುತ್ತಾಗಬಹುದು. ತುತ್ತಾದ ವ್ಯಕ್ತಿಗಳು ಆತಂಕ ಪಡುವುದು ಬೇಡ, ಸಕಾಲದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಎಂದು ತಿಳಿಸಿದರು.
ಯುವಜನತೆ ಮೊಬೈಲ್, ಲ್ಯಾಪ್‌ಟಾಪ್ ಬಳಸುತ್ತ ಅತಿ ಹೆಚ್ಚು ಸಮಯ ಕಳೆಯುತ್ತಿದ್ದು, ಸರಿಯಾದ ನಿದ್ರೆ ಮಾಡದೇ ಇರುವುದರಿಂದ, ರಕ್ತದ ಏರಿಳಿತದಿಂದ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಆಧುನಿಕ ವೈದ್ಯ ಪದ್ಧತಿಯಲ್ಲಿ ಸೂಕ್ತ ಚಿಕಿತ್ಸೆ ನೀಡಿ ಅಪಾಯದಿಂದ ಪಾರುಮಾಡಬಹುದಾಗಿದೆ. ಸಾರ್ವಜನಿಕರು ವೈದ್ಯರ ಮಾರ್ಗದರ್ಶನ ಪಡೆಯಬೇಕು ಎಂದರು.
Rotary Shivamogga ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಆರೋಗ್ಯ ಉತ್ತಮವಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ವ್ಯಕ್ತಿಯೂ ಗಮನ ಹರಿಸಬೇಕು. ಯೋಗ, ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಬೇಕು. ಜಂಕ್ ಫುಡ್‌ಗಳನ್ನು ಸೇವಿಸಬಾರದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವೈದ್ಯರಿಗೆ ಸನ್ಮಾನಿಸಲಾಯಿತು. ಡಾ. ಅಕಿಲಾ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ಡಾ. ರವಿಕಿರಣ, ಚಂದ್ರಹಾಸ ರಾಯ್ಕರ್, ಅರುಣ ದೀಕ್ಷಿತ್, ಶ್ರೀಕಾಂತ್, ಎ.ಒ.ಮಹೇಶ್, ಮಂಜುನಾಥ ಕದಂ, ಕಿಶೋರಕುಮಾರ್, ಎಸ್.ಗಣೇಶ್, ಕೇಶವಪ್ಪ, ಕೃಷ್ಣಮೂರ್ತಿ, ಡಾ. ಅವಿನಾಶ್, ಡಾ. ಲಲಿತಾ ಭರತ್, ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.