Rotary Shivamogga ವಿದ್ಯಾರ್ಥಿಗಳು ಏಕಾಗ್ರತೆ ಮನೋಭಾವ ಬೆಳೆಸಿಕೊಳ್ಳಬೇಕು. ನಿರಂತರ ಪರಿಶ್ರಮ ವಹಿಸಿ ಛಲದಿಂದ ಅಧ್ಯಯನ ನಡೆಸಬೇಕು. ಧನಾತ್ಮಕ ಆಲೋಚನೆಗಳಿಂದ ಪರೀಕ್ಷಾ ಭಯ ದೂರ ಮಾಡಿಕೊಳ್ಳಬಹುದು ಎಂದು ಮನೋವೈದ್ಯೆ ಡಾ. ಕೆ.ಎಸ್.ಶುಭ್ರತಾ ಹೇಳಿದರು.
ಶಿವಮೊಗ್ಗದ, ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ಕ್ಷೇಮ ಟ್ರಸ್ಟ್, ಐಎಂಎ ಲೇಡಿಸ್ ವಿಂಗ್ ವತಿಯಿಂದ ಇಂಟರಾಕ್ಟ್ ಮಕ್ಕಳಿಗೆ ಆಯೋಜಿಸಿದ್ದ ಪರೀಕ್ಷಾ ಭಯ ಪರಿಹಾರ ಹಾಗೂ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪರೀಕ್ಷೆಗೆ ವೇಳಾಪಟ್ಟಿ ಸಿದ್ಧಪಡಿಸಿ ಅಧ್ಯಯನ ನಡೆಸಬೇಕು. ಕಷ್ಟವಿರುವ ವಿಷಯಗಳ ಬಗ್ಗೆ ಹೆಚ್ಚು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಪುನರಾವರ್ತಿತ ಅಭ್ಯಾಸ ನಡೆಸಬೇಕು. ಅಧ್ಯಾಪಕರ ಬಳಿ ಮಾರ್ಗದರ್ಶನ ಪಡೆಯಬೇಕು. ಸರಿಯಾದ ಸಮಯಕ್ಕೆ ಆಹಾರ ತೆಗೆದುಕೊಳ್ಳಬೇಕು. ನಿದ್ದೆ ಸರಿಯಾಗಿ ಮಾಡಬೇಕು ಎಂದು ತಿಳಿಸಿದರು.
ಪರೀಕ್ಷೆಗೆ ಸಂಪೂರ್ಣ ಪ್ರಯತ್ನ ನಡೆಸಿದಾಗ ಫಲಿತಾಂಶ ತಾನಾಗಿಯೇ ಬರುತ್ತದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಭಯ ಪಡುವುದು ಬೇಡ, ಜೀವನದಲ್ಲಿ ಯಶಸ್ಸು ಗಳಿಸಲು ಅನೇಕ ದಾರಿಗಳಿವೆ. ಧೈರ್ಯದಿಂದ ಬದುಕು ಮುನ್ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ರೋಟರಿ ಛಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಬೇಕು. ಉತ್ತಮ ಆರೋಗ್ಯ ಪದ್ಧತಿ ರೂಢಿಸಿಕೊಳ್ಳಬೇಕು. ಅಧ್ಯಯನ ಕ್ರಮಗಳನ್ನು ಅಳವಡಿಸಿಕೊಂಡು ಯಶಸ್ಸು ಗಳಿಸಬೇಕು ಎಂದು ಹೇಳಿದರು.
Rotary Shivamogga ರೋಟರಿ ಶಿವಮೊಗ್ಗ ಪೂರ್ವ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಇಂಟರಾಕ್ಟ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಯೋಗ, ಧ್ಯಾನ, ಪ್ರಾಣಾಯಾಮ ಅಭ್ಯಾಸ ಮಾಡಬೇಕು. ಗುಂಪು ಚರ್ಚೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಛಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ್ ಡಿ ಶಿಗ್ಗಾವ್ ಮಾಹಿತಿ ನೀಡಿದರು. ಇದೇ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಂವಾದ ನಡೆಸಲಾಯಿತು. ಉಪಪ್ರಾಚಾರ್ಯ ನರಸಿಂಹಯ್ಯ, ಇಂಟರಾಕ್ಟ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು