Good Luck Araike Kendra ಸಮಾಜಮುಖಿ ಸೇವಾ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸುವುದು ಅತ್ಯಂತ ಮುಖ್ಯ. ನಾವು ಮಾಡುವ ಸೇವೆಯು ಸದಾ ನಮಗೆ ಶ್ರೀರಕ್ಷೆಯಾಗುತ್ತದೆ ಎಂದು ಭಾವಸಾರ ವಿಜನ್ ಪ್ರೇರಣ ಇಂಡಿಯಾ ಸಂಸ್ಥೆಯ ನೂತನ ಅಧ್ಯಕ್ಷೆ ಉಮಾ ವೆಂಕಟೇಶ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಕಾಶಿಪುರದ ಪ್ರಿಯದರ್ಶಿನಿ ಬಡಾವಣೆಯಲ್ಲಿರುವ “ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ” ಹೊಸ ವರ್ಷ ಹಾಗೂ ಸಂಕ್ರಾಂತಿಯ ಪ್ರಯುಕ್ತ ಅಗತ್ಯ ವಸ್ತುಗಳ ವಿತರಣೆ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಶಕ್ತರಿಗೆ, ಅನಾಥರಿಗೆ, ವೃದ್ಧರು ಸೇರಿದಂತೆ ಅಗತ್ಯ ಇರುವವರಿಗೆ ಮಾನವೀಯ ಕಳಕಳಿಯಿಂದ ಸೇವೆ ಮಾಡಿಸಿದರೆ ದೇವರಿಗೆ ಪೂಜಿಸಿದ ಭಾವ ನಮ್ಮದಾಗುತ್ತದೆ. ಭಾವಸಾರ ವಿಜನ್ ಇಂಡಿಯಾ ಸಂಸ್ಥೆಯು ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನಾಥ ಐತಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವೆ ಮಾಡಿದ ಸಂಸ್ಥೆಗಳು ಚಿರಾಯುವಾಗಿರುತ್ತವೆ. ಆರೈಕೆ ಕೇಂದ್ರದ ಕಟ್ಟಡ ನಿರ್ಮಾಣ ಮಾಡಿದ್ದು, ಅದಕ್ಕೆ ಕೈ ಜೋಡಿಸಿ ನೆರವು ನೀಡಬೇಕು. ನಿಮ್ಮಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ನಿತ್ಯ ಅನ್ನಪೂರ್ಣ ಪ್ರಸಾದ ಯೋಜನೆ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಆರೈಕೆ ಕೇಂದ್ರದಲ್ಲಿ ಇರುವವರಿಗೆ ಅಗತ್ಯ ವಸ್ತುಗಳನ್ನು ಭಾವಸಾರ ವಿಜನ್ ಇಂಡಿಯಾ ವತಿಯಿಂದ ವಿತರಿಸಲಾಯಿತು.
Good Luck Araike Kendra ಕಾರ್ಯಕ್ರಮದಲ್ಲಿ ಗುಡ್‌ಲಕ್ ಆರೈಕೆ ಕೇಂದ್ರದ ನಿರ್ದೇಶಕ ಜಿ.ವಿಜಯಕುಮಾರ್, ಕಾರ್ಯದರ್ಶಿ ಪಂಚಾಕ್ಷರಯ್ಯ, ಮಂಜುನಾಥ್, ಎಂ.ಎನ್.ವೆಂಕಟೇಶ್, ಕಾರ್ಯದರ್ಶಿ ಕವಿತಾ ಹರೀಶ್, ಸಹ ಕಾರ್ಯದರ್ಶಿ ಸುಮಾ ನವಲೆ, ಚೈಲ್ಡ್ ವೆಲ್ಫೇರ್ ವನಿತಾ, ಕಾವ್ಯ, ವಿಜನ್ ಸರ್ವಿಸ್ ಡೈರೆಕ್ಟರ್ ಅವಿನಾಶ್ ಮತ್ತಿತರರು ಉಪಸ್ಥಿತರಿದ್ದರು.