Pariniti Kalakendra ಸಾಗರದ ಪರಿಣಿತಿ ಕಲಾಕೇಂದ್ರ ಉತ್ತಮವಾಗಿ ನೃತ್ಯ ಉತ್ಸವ ಆಯೋಜಿಸುವ ಜತೆಯಲ್ಲಿ ಪ್ರತಿಭಾನ್ವಿತ ಕಲಾವಿದರಿಗೆ ರಾಷ್ಟ್ರೀಯ ವೇದಿಕೆಗಳನ್ನು ಕಲ್ಪಿಸುವ ಸಾರ್ಥಕ ಕೆಲಸ ಮಾಡುತ್ತಿದೆ ಎಂದು ಬೆಂಗಳೂರು ಐಸಿಸಿಆರ್ ವಲಯ ನಿರ್ದೇಶಕ ಕೆ.ಅಯ್ಯನಾರ್ ಹೇಳಿದರು.
ಪರಿಣಿತಿ ಕಲಾಕೇಂದ್ರದ ವತಿಯಿಂದ ಸಾಗರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ “9ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ, ಯೋಗ ಹಾಗೂ ಸಂಗೀತೋತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ವೈವಿಧ್ಯ ನೃತ್ಯ ಪ್ರಕಾರಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲು ಹಾಗೂ ಸ್ಥಳೀಯ ಕಲಾವಿದರಿಗೆ ನೃತ್ಯ ಪ್ರಕಾರಗಳ ಬಗ್ಗೆ ಜ್ಞಾನ ಒದಗಿಸಲು ನೃತ್ಯ ಉತ್ಸವಗಳು ಸಹಕಾರಿ ಆಗುತ್ತವೆ. ಪರಿಣಿತಿ ಕಲಾಕೇಂದ್ರದ ಪ್ರೋತ್ಸಾಹ ಕಾರ್ಯ ನಿರಂತರ ಆಗಿರಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ವಿದ್ವಾನ್ ಎಂ.ಗೋಪಾಲ್ ಅವರು ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪರಿಣಿತಿ ಕಲಾಕೇಂದ್ರದ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದು, ಸಾಗರದ ಕಲಾವಿದರನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡುವಷ್ಟು ಉತ್ತಮ ತರಬೇತಿ ನೀಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
Pariniti Kalakendra ಪಶ್ಚಿಮ ಬಂಗಾಳದ ರಾಜೀಬ್ ಭಟ್ಟಾಚಾರ್ಯ ಅವರಿಂದ ಓಡಿಸ್ಸಿ ನೃತ್ಯ, ನೃತ್ಯಾಂಜಲಿ ಸಂಸ್ಥೆಯ ಗುರು ಕರ್ನಾಟಕ ಕಲಾಶ್ರೀ ಪೂರ್ಣಿಮಾ ತಂಡದಿಂದ ಭರತನಾಟ್ಯ, ವಿದೂಷಿ ಸುಶ್ಮಿತಾ ಬ್ಯಾನರ್ಜಿ ತಂಡದಿಂದ ಕಥಕ್ ನೃತ್ಯ, ಕಲಾಮಂಡಲಮ್ ಡಾ. ಸೌಮ್ಯ ಹಾಗೂ ಲತಿಕಾ ಅವರಿಂದ ಮೋಹಿನಿಅಟ್ಟಂ ಹಾಗೂ ಶ್ರೀ ಭಾರತೀ ಕಲಾವಿದರು ಹೊಸೂರು ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
“9ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ, ಯೋಗ ಹಾಗೂ ಸಂಗೀತೋತ್ಸವ” ಪ್ರಯುಕ್ತ ಪರಿಣಿತಿ ಕಲಾಕೇಂದ್ರದ ವತಿಯಿಂದ ಆಯೋಜಿಸಿದ್ದ ಶಿವಾರತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಸಾಗರದ ಜೇಡಿಕುಣಿ ಮಂಜುನಾಥ್ ಅವರಿಗೆ ಪರಿಣಿತಿ ಕಲಾಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.
ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು, ಕಾರ್ಯದರ್ಶಿ ವಿದ್ವಾನ್ ಎಂ.ಗೋಪಾಲ್, ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ ಸಮಿತಿ ಅರುಣ್ ಕುಮಾರ್, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಮೈತ್ರಿ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.