Swadeshi Mela ಮಲೆನಾಡಿನ ಜನತೆಗೊಂದು ಸಿಹಿ ಸುದ್ದಿ. ಸಾಹಿತಿಗಳ ತವರೂರು ಶಿವಮೊಗ್ಗ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಜನರಿಗೆ ದೇಶೀಯ ವಸ್ತುಗಳ ಪರಿಚಯ ಮತ್ತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಗರದ ಫ್ರೀಡಂ ಪಾರ್ಕ್ ( ಚಂದ್ರಶೇಖರ್ ಆಜಾದ್ ಪಾರ್ಕ್, ಹಳೇ ಜೈಲು ಆವರಣ )ನಲ್ಲಿ ಡಿಸೆಂಬರ್ 6 ರಿಂದ 10ರ ತನಕ ಬೃಹತ್ ಸ್ವದೇಶಿ ಮೇಳವನ್ನು ಆಯೋಜಿಸಲಾಗಿದೆ.
ಈ ಮೇಳದಲ್ಲಿ 250 ಕ್ಕೂ ಹೆಚ್ಚು ಸ್ವದೇಶಿ ಮಳಿಗೆಗಳು ಭಾಗವಹಿಸಲಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಮೇಳದಲ್ಲಿ ವೈವಿಧ್ಯಮಯ ದೇಶೀಯ ಆಹಾರಗಳು, ದೇಶೀಯ ಕ್ರೀಡೆಗಳು, ಜಾನಪದ ಕಲಾ ವೈಭವ, ಯಕ್ಷಗಾನ, ಬಾನ್ಸುರಿ ವಾದನ, ನೃತ್ಯ ರೂಪಕ, ಜಾದೂ ಪ್ರದರ್ಶನ ಸೇರಿದಂತೆ 16 ಕ್ಕೂ ಹೆಚ್ಚು ಶಿಬಿರ ಹಾಗೂ ತರಬೇತಿ ಕಾರ್ಯ್ಗಾರಗಳು ನಡೆಯಲಿವೆ.
ಡಿಸೆಂಬರ್ 6 ರಂದು ಸಂಜೆ 6.30ಕ್ಕೆ ಬೃಹತ್ ಮೇಳದ ಸಾರ್ವಜನಿಕ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸುವರು ಹಾಗೂ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯಅತಿಥಿಗಳಾಗಿ ಜಿಲ್ಲೆಯ ಸಂಸದರಾದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿಗಳಾದ ಡಾ.ಆರ್. ಸೆಲ್ವಮಣಿ ಭಾಗವಹಿಸುವರು. ಖ್ಯಾತ ಅರ್ಥ ಶಾಸ್ತ್ರಜ್ಞರು ಮತ್ತು ಪರಿಸರ ತಜ್ಞರು, ಸ್ವದೇಶಿ ಚಿಂತಕರಾದ ಪ್ರೊ.ಬಿ.ಎಂ.ಕುಮಾರಸ್ವಾಮಿ ಮುಖ್ಯಭಾಷಣವನ್ನು ಮಾಡಲಿದ್ದಾರೆ. ಐದು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ.
ಸ್ವದೇಶೀ ಭರಪೂರ ಆಹಾರ :
ಇನ್ನು ಆಹಾರ ಪ್ರಿಯರಿಗಾಗಿ ಮೇಲುಕೋಟೆ ಪುಳಿಯೋಗರೆ, ಮುಳುಬಾಗಿಲು ದೋಸೆ, ದಾವಣಗೆರೆ ಬೆಣ್ಣೆದೋಸೆ, ಸಾವಯವ ಕಬ್ಬಿನಹಾಲು, ಅಡಕೆ ಐಸ್ ಕ್ರೀಂ, ಬಂಗಾರಪೇಟೆ ಚಾಟ್ಸ್, ಹುಬ್ಬಳ್ಳಿಯ ಗಿರಮಿಟ್, ಸಿರಿಧಾನ್ಯಗಳ ರೊಟ್ಟಿ (ನವಣೆ, ಸಜ್ಜೆ, ರಾಗಿ, ಜೋಳ ,ಅಕ್ಕಿ ರೊಟ್ಟಿ) ಸೇರಿದಂತೆ ಕವಳಿ, ಕಂಚಿ, ಮಾವು, ನಿಂಬೆ, ಮೆಣಸಿನ ಹಿಂಡಿ, ಮೆಂತ್ಯ ಹಿಂಡಿ, ಅಗಸಿ, ಶೇಂಗಾ, ಗುರೆಳ್ಳು ಚಟ್ನಿ ಪುಡಿ ಹೀಗೆ ನೂರಾರು ರೀತಿಯ ತರೇವಾರಿ ಆಹಾರ ಪದಾರ್ಥ, ತಿಂಡಿ, ತಿನಿಸು ಲಭ್ಯವಿದೆ.
ಜಾನಪದ ಕಲಾ ವೈಭವ :
ಡಿಸೆಂಬರ್ 6 ರ ಬುಧವಾರ ರಾತ್ರಿ 8.30ಕ್ಕೆ ಜಾನಪದ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭದ್ರಾವತಿ ತಾಲ್ಲೂಕು ಎಮ್ಮಹಟ್ಟಿಯ ಶ್ರೀ ಗಜಾನನ ಡೊಳ್ಳು ಮತ್ತು ಸಾಂಸ್ಕೃತಿಕ ಕಲಾ ತಂಡ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾನಪದ ಕಲಾ ತಂಡ, ವೀರಭದ್ರ ಕುಣಿತ ಮತ್ತು ವೀರಗಾಸೆ ಪ್ರದರ್ಶನ ಮಾಡಲಿದೆ.
ತಾರಸಿ ತೋಟ ತರಬೇತಿ ಕಾರ್ಯಾಗಾರ :
ಡಿಸೆಂಬರ್ 7 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ರವರೆಗೆ ತಾರಸಿ ತೋಟ ತರಬೇತಿ ಕಾರ್ಯ್ಗಾರವನ್ನು ಬೆಂಗಳೂರಿನ ತಾರಸಿ ತೋಟ ತರಬೇತಿ ತಜ್ಞರಾದ ಶ್ರೀಮತಿ ಪ್ರತಿಮಾ ಅಡಿಗ ಅವರು ನಡೆಸಿಕೊಡಲಿದ್ದಾರೆ.
ಡಿಸೆಂಬರ್ 7 ರಂದು ಸಂವಾದ ಮತ್ತು ಕಾರ್ಯಾಗಾರ :
ಡಿಸೆಂಬರ್ 7 ರಂದು ಮಧ್ಯಾಹ್ನ 3 ರಿಂದ ಸಂಜೆ 5.30 ರವರೆಗೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ಸಂಘಟನೆಯಿಂದ ಕೃಷಿ ಮಾರುಕಟ್ಟೆ,-ಯುವಕರ ಪಾತ್ರದ ಕುರಿತು ಸಂವಾದ ಹಾಗೂ ಸಾವಯವ ಕೃಷಿ-ಪ್ರಾತ್ಯಕ್ಷಿಕೆ -ಪ್ರದರ್ಶನ ವಿಸ್ತರಣೆ ಕಾರ್ಯಾಗಾರ ನಡೆಯಲಿದೆ.
Swadeshi Mela ಆಯುರ್ವೇದ ಶಿಬಿರ :
ಡಿಸೆಂಬರ್ 8 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಶಿವಮೊಗ್ಗದ ಖ್ಯಾತ ವೈದ್ಯ ಡಾ.ಎಂ.ಬಿ.ಗುರುರಾಜ ಅವರು ಆಯುರ್ವೇದ ಶಿಬಿರ ನಡೆಸಿಕೊಡಲಿದ್ದಾರೆ. ಆರೋಗ್ಯಕರ ಜೀವನ ಪದ್ಧತಿ ಮತ್ತು ಮನೆಯಲ್ಲೇ ಮಾಡಿಕೊಳ್ಳಬಹುದಾದ ಸರಳ ಚಿಕಿತರಸಾ ವಿಧಾನದ ಕುರಿತು ಮಾಹಿತಿ ನೀಡಲಾಗುತ್ತದೆ.
ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ :
ಡಿಸೆಂಬರ್ 8 ರಂದು ಸಂಜೆ 6 ಗಂಟೆಗೆ ಹನುಮಗಿರಿ ಶ್ರೀ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಿಂದ ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವಂದೇ ಮಾತರಂ ನೃತ್ಯ ರೂಪಕ :
ಡಿಸೆಂಬರ್ 9 ರ ಶನಿವಾರ ರಾತ್ರಿ 7 ಗಂಟೆಗೆ ಮೈಸೂರಿನ ನೃತ್ಯ ನಿಪುಣೆ ಡಾ.ಕೃಪಾ ಫಡಕೆ ಮತ್ತು ತಂಡದಿಂದ ವಂದೇ ಮಾತರಂ ನೃತ್ಯ ರೂಪಕ ನಡೆಯಲಿದೆ.
ಪಂಚಗವ್ಯ ಚಿಕಿತ್ಸಾ ಶಿಬಿರ :
ಡಿಸೆಂಬರ್ 9 ರಂದು ಪಂಚಗವ್ಯ ಚಿಕಿತ್ಸಾ ಶಿಬಿರ ( ಗೋ ಆಧಾರಿತ) ವನ್ನು ವೈದ್ಯ ಡಾ.ಡಿ.ಪಿ.ರಮೇಶ್ ಅವರು ನಡೆಸಿಕೊಡಲಿದ್ದಾರೆ.
ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರ :
ಡಿಸೆಂಬರ್ 9 ರ ಶನಿವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರ ನಡೆಯಲಿದೆ. ಕೋಲಾರ ಕರ್ನಾಟಕ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭೀಮರಾವ್ ಶಿಬಿರವನ್ನು ನಡೆಸಿ ಕೊಡಲಿದ್ದಾರೆ. ಶಿಬಿರದಲ್ಲಿ ಸ್ನಾನ ಚೂರ್ಣ, ಹಲ್ಲುಜ್ಜುವ ಪುಡಿ, ಆರೋಗ್ಯ ವರ್ಧಕ ಪಾನೀಯ, ಕಫ ಮತ್ತು ಅಸ್ತಮಾ ನಿವಾರಣೆಗೆ ಸಿರಫ್, ಮೌತ್ ರಿಫ್ರೆಶನರ್, ಮಧುಮೇಹ ನಿವಾರಣಾ ಔಷಧಿ, ವಾತ-ಪಿತ್ತಹರ ಔಷಧಿಗಳ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುವುದು.
ಯೋಗಾಸನ ಪ್ರದರ್ಶನ :
ಡಿಸೆಂಬರ್ 10 ರ ಭಾನುವಾರ ಸಂಜೆ 4 ರಿಂದ 5.30 ರವರೆಗೆ ಶಿವಮೊಗ್ಗ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗಾಸನ ಪ್ರದರ್ಶನ ನಡೆಯಲಿದೆ.
ಜಾದೂ ಪ್ರದರ್ಶನ :
ಡಿಸೆಂಬರ್ 10 ರಂದು ರಾತ್ರಿ 7 ಗಂಟೆಗೆ ಮೆಗಾ ಮ್ಯಾಜಿಕ್ ಸ್ಟಾರ್ ಶ್ರೀ ಕುದ್ರೋಳಿ ಗಣೇಶ್ ಅವರಿಂದ ಅಬ್ರಕಡಬ್ರ ಜಾದೂ ಪ್ರದರ್ಶನ ನಡೆಯಲಿದೆ.
ಮಡಿಕೆಯಲ್ಲಿ ಚಿತ್ತಾರ ಬಿಡಿಸುವ ಸ್ಪರ್ಧೆ :
ಮಹಿಳೆಯರಿಗೆ ಮಡಿಕೆಯಲ್ಲಿ ಚಿತ್ತಾರ ಬಿಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಚಿತ್ತಾರವು ನೈಸರ್ಗಿಕ ಬಣ್ಣದಿಂದ ಕೂಡಿರಬೇಕು, ಮಡಿಕೆ ಆಯೋಜಕರ ಕೈ ಸೇರುವ ತನಕ ಜವಾಬ್ದಾರಿ ತಮ್ಮದೇ ಆಗಿರುತ್ತದೆ, ಚಿತ್ತಾರದ ಮಡಿಕೆಯನ್ನು ಮೇಳದಲ್ಲಿ ಪ್ರದರ್ಶಿಸಲಾಗುವುದು, ಚಿತ್ತಾರ ಮಡಿಕೆಯನ್ನು ದಿನಾಂಕ 04-012-2023 ರೊಳಗಾಗಿ ತಲುಪಿಸಬೇಕು.
ಪಂಡಿತ್ ಡಾ.ಪ್ರವೀಣ್ ಗೋಡ್ಖಿಂಡಿ ಅವರಿಂದ ಬಾನ್ಸುರಿ ವಾದನ :
ಮೇಳದ ರಾಗರಂಗ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ಪಂಡಿತ್ ಡಾ.ಪ್ರವೀಣ್ ಗೋಡ್ಖಿಂಡಿ ಅವರು ಬಾನ್ಸುರಿ ವಾದನ ನಡೆಸಿಕೊಡಲಿದ್ದಾರೆ. ಇವರಿಗೆ ತಬಲಾ ಕಲಾವಿದ ಕಿರಣ್ ಗೋಡ್ಖಿಂಡಿ ಸಾತ್ ನೀಡಲಿದ್ದು, ಸುನಿಲ್ ಕುಮಾರ್ ಬಾನ್ಸುರಿ ಸಹಕಾರ ನೀಡಲಿದ್ದಾರೆ.
ರೈತರೊಂದಿಗೆ ಸಂವಾದ :
ಮೇಳದಲ್ಲಿ ಡಿಸೆಂಬರ್ 10 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ರೈತರೊಂದಿಗೆ ಸಾವಯವ ಕೃಷಿ, ಬಹುಬೆಳೆ ಪದ್ಧತಿ, ಮೌಲ್ಯ ವರ್ಧನೆ, ಮಾರುಕಟ್ಟೆ ಮತ್ತು ಸಹಕಾರಿ ವ್ಯವಸ್ಥೆ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸ್ವದೇಶಿ ಮೇಳವನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿನಂತಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ 91485 24854 , 70191 08511 ಸಂಪರ್ಕಿಸಬಹುದು.
ಡಿ ಎಸ್ ಅರುಣ್
ಶಾಸಕರು ವಿಧಾನ ಪರಿಷತ್
ಸಂಚಾಲಕರು, ಸ್ವದೇಶಿ ಜಾಗರಣ ಮಂಚ್, ಕರ್ನಾಟಕ