Saturday, November 23, 2024
Saturday, November 23, 2024

Klive Special Article ಮಾಹಿತಿ ಹಕ್ಕು: ಪ್ರತಿಯೊಬ್ಬ ಜನ ಸಾಮಾನ್ಯರ ಅಧಿಕಾರ

Date:

Klive Special Article ಸ್ವತಂತ್ರ ಭಾರತದ ಕ್ರಾಂತಿಕಾರಿ ಕಾನೂನುಗಳಲ್ಲಿ ಮಾಹಿತಿ ಹಕ್ಕಿನ ಕಾನೂನಿಗೆ ಅಗ್ರ ಸ್ಥಾನ. ಸರ್ಕಾರೀ ದಾಖಲೆಗಳನ್ನು ಕತ್ತಲಿಂದ ಬೆಳಕಿಗೆ ತಂದು, ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಂತಹ ದುರಾಚಾರಗಳನ್ನು ಬಯಲಿಗೆಳೆದು, ಆಡಳಿತ ಸುಧಾರಣೆಗೆ ಸಹಾಯ ಮಾಡಿದ ಕೀರ್ತಿ ಈ ಕಾನೂನಿಗೆ ಸಲ್ಲುತ್ತದೆ. ಇದೊಂದು ಮೂಲಭೂತ ಮಾನವ ಹಕ್ಕಿನ ಭಾಗವೇ ಆಗಿದ್ದು, ಸರ್ಕಾರವು ಹೊಂದಿರುವ ಮಾಹಿತಿಯನ್ನು ಪಡೆಯಲು, ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆಯನ್ನು ತರಲು ಮಾಡಿದ ಕಾನೂನಾಗಿದೆ. ಈ ಕಾನೂನು, ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ ಸರ್ಕಾರದ ಬಳಿ ಇರುವ ಮಾಹಿತಿ ಪಡೆಯಲು ಮತ್ತು ಪರಿಶೀಲಿಸಲು ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಅಧಿಕಾರವನ್ನು ನೀಡುತ್ತದೆ.
ಈ ಐತಿಹಾಸಿಕ ಕಾನೂನು ೨೦೦೫ರಲ್ಲಿ ಜಾರಿಗೆ ಬಂದಿತು. ಇದಕ್ಕೂ ಮೊದಲು ಬ್ರಿಟಿಷರು ರಚಿಸಿದ ೧೯೨೩ ರ ಗೌಪ್ಯತಾ ಕಾಯ್ದೆ ಜಾರಿಯಲ್ಲಿತ್ತು (ಈಗಲೂ ಇದೆ). ಇದು ಪ್ರಾಥಮಿಕವಾಗಿ ಸರ್ಕಾರಿ ರಹಸ್ಯಗಳನ್ನು ರಕ್ಷಿಸುವತ್ತ ಗಮನ ಹರಿಸಿತ್ತು. ಆದರೆ ಸರ್ಕಾರೀ ಮಾಹಿತಿ ಪಡೆಯಲು ಯಾವುದೇ ಕಾನೂನು ಇರಲಿಲ್ಲ. ಇಂಥ ಒಂದು ಕಾನೂನಿಗೆ ೧೯೯೦ರಲ್ಲೇ ತಳಹದಿ ಹಾಕಿದವರು ವಿ ಪಿ ಸಿಂಗ್. ಅನಂತರ ೧೯೯೪ರಲ್ಲಿ ಮಜ್ದುರ್ ಕಿಸಾನ್ ಶಕ್ತಿ ಸಂಘಟನೆ ಇದಕ್ಕಾಗಿ ಹೋರಾಟವನ್ನು ಮಾಡಿತು. ಇದಲ್ಲದೇ, ಸುಪ್ರೀಂ ಕೋರ್ಟ್ ಮಾಹಿತಿ ಹಕ್ಕನ್ನು ಮೂಲಭೂತ ಹಕ್ಕಿನ ಭಾಗವಾಗಿ ಹಲವಾರು ಪ್ರಕರಣಗಳಲ್ಲಿ ಪರಿಗಣಿಸಿದೆ.
ಮಾಹಿತಿ ಹಕ್ಕಿನ ಅಡಿಯಲ್ಲಿ ಯಾವುದೇ ಭಾರತೀಯ ಪ್ರಜೆ (ಭಾರತದಲ್ಲಿ ನೆಲೆಸಿರಲಿ ಅಥವಾ ವಿದೇಶದಲ್ಲೇ ಇರಲಿ) ಯಾವುದೇ ಸಾರ್ವಜನಿಕ ಪ್ರಾಧಿಕಾರದಿಂದ ಮಾಹಿತಿಯನ್ನು ಪಡೆಯಬಹುದು. ಸೆಕ್ಷನ್ ೨(h ) ಪ್ರಕಾರ, ಸಾರ್ವಜನಿಕ ಪ್ರಾಧಿಕಾರವು ಭಾರತದ ಸಂವಿಧಾನದ ಅಡಿಯಲ್ಲಿ ಬರುವ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನ ಬರುವ ಇಲಾಖೆ, ಅಥವಾ ಪ್ರಾಧಿಕಾರಗಳನ್ನು ಒಳಗೊಂಡಿರುತ್ತದೆ. ಸರ್ಕಾರೀ ಖಚೇರಿಗಳಿಂದ ಯಾವ ಮಾಹಿತಿ ಪಡೆಯಬಹುದು ಎಂಬ ಬಗ್ಗೆ ಸೆಕ್ಷನ್ ೨(f ) ನಲ್ಲಿ ತಿಳಿಸಲಾಗಿದ್ದು, ಎಲ್ಲಾ ದಾಖಲೆಗಳು, ಡಾಕ್ಯುಮೆಂಟ್‌ಗಳು, ಮೆಮೊಗಳು, ಇ-ಮೇಲ್‌ಗಳು, ಅಭಿಪ್ರಾಯಗಳು, ಸಲಹೆಗಳು, ಪತ್ರಿಕಾ ಪ್ರಕಟಣೆಗಳು, ಸುತ್ತೋಲೆಗಳು, ಆದೇಶಗಳು, ಲಾಗ್‌ಬುಕ್‌ಗಳು, ಒಪ್ಪಂದಗಳು, ವರದಿಗಳು, ಪೇಪರ್‌ಗಳು, ಸ್ಯಾಂಪಲ್‌ಗಳು ಇತ್ಯಾದಿಗಳಿಗೆ ಸಂಬಂಧಿಸಿದ ಅಥವಾ ಒಳಗೊಂಡಿರುವ ಯಾವುದೇ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ.
ಮಾಹಿತಿ ಪಡೆಯಲು ಒಂದು ಅರ್ಜಿಯನ್ನು ೧೦ ರೂ ಶುಲ್ಕದೊಂದಿದೆ ಸಲ್ಲಿಸಬೇಕು. ಆದರೆ, ಬಡತನದ ರೇಖೆಯ ಕೆಳಗಿರುವ ವ್ಯಕ್ತಿಗೆ ಇದರಿಂದ ವಿನಾಯಿತಿ ಇದೆ. ಕೇಂದ್ರ ಸರ್ಕಾರದ ಮಾಹಿತಿಯನ್ನು ಅಂತರ್ಜಾಲದ ಮೂಲಕ ಕೂಡ ಕೇಳಬಹುದು. ಇದಕ್ಕಾಗಿ, ಸರ್ಕಾರವು ಒಂದು ಪೋರ್ಟಲ್ ಅನ್ನು ಸ್ಥಾಪಿಸಿದೆ. ಕರ್ನಾಟಕ ಸರ್ಕಾರದಲ್ಲಿನ ಯಾವುದೇ ಮಾಹಿತಿ ಬೇಕಿದ್ದರೆ, https://rtionline.karnataka.gov.in/ ಈ ಪೋರ್ಟಲ್ ನ ಮೂಲಕ ಮಾಹಿತಿ ಪಡೆಯಬಹುದು; ಕೇಂದ್ರ ಸರ್ಕಾರದ ಇಲಾಖೆಗಳಲ್ಲಿರುವ ಮಾಹಿತಿಗಾಗಿ https://rtionline.gov.in/ ಈ ಪೋರ್ಟಲ್ ಉಪಯೋಗಿಸಬಹುದು. ತಮ್ಮ ಕಛೇರಿಗೆ ಸಂಭಂದಿಸಿದ ಮಾಹಿತಿ ನೀಡಲು ಮಾಹಿತಿ ಹಕ್ಕಿನ ಅಧಿಕಾರಿಯನ್ನು ಪ್ರತಿಯೊಂದು ಪ್ರಾಧಿಕಾರವೂ ನೇಮಿಸಬೇಕಾದ್ದು ಅತ್ಯಗತ್ಯ. ಇಂಥ ಅಧಿಕಾರಿಯ ಮಾಹಿತಿಯನ್ನು ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು. ಮಾಹಿತಿ ಹಕ್ಕಿನ ಅಧಿಕಾರಿ ೩೦ ದಿನಗಳ ಒಳಗೆ ಮಾಹಿತಿಯನ್ನು ನೀಡಬೇಕು.
Klive Special Article ಗೌಪ್ಯ ಮಾಹಿತಿಯನ್ನು ರಕ್ಷಿಸುವ ಅಗತ್ಯತೆಯೊಂದಿಗೆ ಮಾಹಿತಿಯ ಹಕ್ಕನ್ನು ಸಮತೋಲನಗೊಳಿಸಲು, ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಅರ್ಜಿದಾರರಿಗೆ ಮಾಹಿತಿಯನ್ನು ನಿರಾಕರಿಸಲೂ ಕಾಯಿದೆಯ ಅಡಿಯಲ್ಲಿ ಅವಕಾಶವಿದೆ. ಉದಾಹರಣೆಗೆ, ರಾಷ್ಟ್ರೀಯ ಭದ್ರತೆ ಅಥವಾ ರಕ್ಷಣೆಗೆ ಹಾನಿಯುಂಟುಮಾಡುವ ಮಾಹಿತಿ; ವಿದೇಶಿ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಂಬಂಧಿಸಿದ ಮಾಹಿತಿ; ನಡೆಯುತ್ತಿರುವ ತನಿಖೆ ಅಥವಾ ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಯಾಗಬಹುದಾದ ಮಾಹಿತಿ; ವ್ಯಕ್ತಿಯ ಗೌಪ್ಯತೆಯನ್ನು ಉಲ್ಲಂಘಿಸಬಹುದಾದ ಮಾಹಿತಿ ಕಂಪನಿಯ ಸ್ಪರ್ಧಾತ್ಮಕ ಸ್ಥಾನಕ್ಕೆ ಹಾನಿಯುಂಟುಮಾಡುವ ವ್ಯಾಪಾರ ರಹಸ್ಯಗಳು, ಬೌದ್ಧಿಕ ಆಸ್ತಿ ಅಥವಾ ವಾಣಿಜ್ಯ ಮಾಹಿತಿಯನ್ನು ಒಳಗೊಂಡಿರುವ ಮಾಹಿತಿ; ಇತ್ಯಾದಿ.
ಹಾಗಾದರೆ, ಮಾಹಿತಿ ನೀಡದೇ ಇದ್ದರೆ ಅಥವಾ ಸರಿಯಾದ ಮಾಹಿತಿ ನೀಡದೇ ಇದ್ದರೆ ಏನು ಪರಿಹಾರ? ಇದಕ್ಕೂ ಮಾಹಿತಿ ಹಕ್ಕಿನ ಕಾಯಿದೆಯ ಅಡಿಯಲ್ಲಿ ಪರಿಹಾರವಿದೆ. ಮಾಹಿತಿ ಬೇಕಾದ ಪ್ರಾಧಿಕಾರದಲ್ಲೇ ಮಾಹಿತಿ ಪಡೆದ ೩೦ ದಿನದ ಒಳಗೆ ಅಥವಾ, ಮಾಹಿತಿ ಅರ್ಜಿಯನ್ನು ಸಲ್ಲಿಸಿದ ೩೦ ದಿನದ ಒಳಗೆ ಪ್ರಥಮ ಮೇಲ್ಮನವಿಯನ್ನು ಸಲ್ಲಿಸಬಹುದು. ಅಲ್ಲಿಯೂ ಮಾಹಿತಿ ಸಿಗದೇ ಹೋದರೆ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಯಾಗಿದ್ದರೆ, ೯೦ ದಿನಗಳ ಒಳಗೆ ರಾಷ್ಟೀಯ ಮಾಹಿತಿ ಹಕ್ಕಿನ ಆಯೋಗದ ಮುಂದೆ ಎರಡನೇ ಅಪೀಲನ್ನು ಸಲ್ಲಿಸಬಹುದಾಗಿದೆ. ಮಾಹಿತಿ ಆಯೋಗದ ನಿರ್ಧಾರವು ಅತೃಪ್ತಿಕರವಾಗಿದ್ದರೆ ಅಥವಾ ವಿಷಯವು ಮಹತ್ವದ ಕಾನೂನು ಸಮಸ್ಯೆಯನ್ನು ಒಳಗೊಂಡಿದ್ದರೆ, ಅರ್ಜಿದಾರರು ದೆಹಲಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸುವ ಮೂಲಕ ನಿರಾಕರಣೆಯನ್ನು ಪ್ರಶ್ನಿಸಬಹುದು. ಮನವಿ. ಇದು ಸಾಮಾನ್ಯವಾಗಿ ಮಾಹಿತಿಯ ನಿರಾಕರಣೆಯನ್ನು ಸವಾಲು ಮಾಡುವ ಕೊನೆಯ ಉಪಾಯವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಮೂಲಭೂತ ಹಕ್ಕುಗಳು ಅಥವಾ ಗಮನಾರ್ಹ ಸಾರ್ವಜನಿಕ ಹಿತಾಸಕ್ತಿಯ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
ಮಾಹಿತಿ ಹಕ್ಕನ್ನು ಹೆಚ್ಚು ಹೆಚ್ಚು ಬಳಸಿ ಸರ್ಕಾರೀ ವ್ಯವಸ್ಥೆಯನ್ನು ಇನ್ನೂ ಉತ್ತಮಗೊಳಿಸಲು ನಾವೆಲ್ಲರೂ ಶ್ರಮಿಸೋಣವೇ ?

ಸುಧೀರ್ ಕೀಳಂಬಿ
ವಿದೇಶಾಂಗ ಇಲಾಖೆಯಲ್ಲಿ ಕಾನೂನು ಸಲಹೆಗಾರರು ಹಾಗೂ ವಿದೇಶಾಂಗ ಇಲಾಖೆಯಲ್ಲಿ ಮಾಹಿತಿ ಹಕ್ಕಿನ ಅಧಿಕಾರಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...