Shuttle badminton ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶಾಖೆಯ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿ ಓದುತ್ತಿರುವ ಅವಳಿ ಸಹೋದರರಾದ ಪುನೀತ್.ಎಸ್. ಮತ್ತು ಪವನ್.ಎಸ್. ಷಟಲ್ ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಈ ಪ್ರತಿಭಾನ್ವಿತರು 2023 – 24 ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ರಾಮನಗರ ಜಿಲ್ಲೆ, ಕನಕಪುರದ ವಡಯರಳ್ಳಿಯ ಜೈನ್ ಸ್ಪೋರ್ಟ್ಸ್ ಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 17 ವರ್ಷ ವಯೋಮಿತಿಯೊಳಗಿನ ಪ್ರೌಢ ಶಾಲಾ ಬಾಲಕರ ಬೆಂಗಳೂರು ವಿಭಾಗ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಭಾಗವಹಿಸಿ, ಚಾಕ ಚಕ್ಕತೆಯ ಆಟದ ಪ್ರದರ್ಶನ ನೀಡಿ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಅಕ್ಟೋಬರ್ 19 ಮತ್ತು 20 ರಂದು ಜೈನ್ ಸ್ಪೋರ್ಟ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯೊಳಗಿನ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಷಟಲ್ ಬ್ಯಾಡ್ಮಿಂಟನ್ ಲೀಗ್ ಮಾದರಿಯ ಪಂದ್ಯಾವಳಿಯಲ್ಲಿ ಗುರುಪುರದ ಬಿ ಜಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾನ್ವಿತ ಅವಳಿ ಸಹೋದರರಾದ ಪುನೀತ್ ಎಸ್ ಮತ್ತು ಪವನ್ ಎಸ್ ಲೀಗ್ ಮಾದರಿಯ ಎಲ್ಲಾ ಪಂದ್ಯಾವಳಿಗಳಲ್ಲಿ ಕಲಬುರ್ಗಿ ವಿಭಾಗ, ಬೆಳಗಾವಿ ವಿಭಾಗ, ಮೈಸೂರು ವಿಭಾಗಗಳ ಮಧ್ಯೆ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ಹಾಗೂ ಬಿರುಸಿನ ಹೊಡೆತ ಮತ್ತು ಅಷ್ಟೇ ರಕ್ಷಣಾತ್ಮಕ ಆಟದ ಪ್ರದರ್ಶನ ನೀಡಿದರು.
ಪ್ರಥಮ ಸ್ಥಾನ ಹಾಗೂ ಅತ್ಯಾಕರ್ಷಕ ಪಾರಿತೋಷಕ ಮತ್ತು ಬಂಗಾರದ ಪದಕವನ್ನು ಸಂಸ್ಥೆಯ ಮಡಿಲಿಗೆ ತಂದು ಕೊಟ್ಟಿದ್ದಾರೆ.
ಈ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ಬಂಗಾರದ ಪದಕ ಪಡೆದು, ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ “ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
15 ವರ್ಷ ವಯೋಮಿತಿ ಒಳಗಿನ ಕನಾಟಕ ರಾಜ್ಯ ಷಟಲ್ ಬ್ಯಾಡ್ಮಿಂಟನ್ ರ‌್ಯಾಂಕಿಂಗ್ ನಲ್ಲಿ 1ನೇ ಸ್ಥಾನದಲ್ಲಿದ್ದು, 17 ವರ್ಷ ವಯೋಮಿತಿಯೊಳಗಿನ ಷಟಲ್ ರ‌್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನದಲ್ಲಿರುವುದು ಮತ್ತೊಂದು ವಿಶೇಷ.
Shuttle badminton ಈ ಪ್ರತಿಭೆಗಳು ಶಿವಮೊಗ್ಗದ ಪುರಲೆಯ ವೆಂಕಟೇಶ ನಗರದಲ್ಲಿ ವಾಸವಿರುವ ಸುರೇಶ್ ಮತ್ತು ಶಕುಂತಲಾ ದಂಪತಿಗಳ ಪುತ್ರ ರಾಗಿರುತ್ತಾರೆ. ಇವರು ಪ್ರಸ್ತುತ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, ಶ್ರೀ ವಿನೋದ್ ಕುಮಾರ್ ಅವರ ಗರಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಕ್ರೀಡೆಯ ಜೊತೆಗೆ ಓದಿನಲ್ಲೂ ಪ್ರತಿಭಾನ್ವಿತ ರಾಗಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ, ಪೋಷಕರು, ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ.