Saturday, December 6, 2025
Saturday, December 6, 2025

Klive Special Article ಬಿಟ್ಟೆನೆಂದು ಬಿಡದಿ ಮೊಬೈಲ್ ಮಾಯೆ

Date:

Klive Special Article ವಯಸ್ಸು ಹದಿನಾರು ಕಳೆದು 17ಕ್ಕೆ ಕಾಲಿಡುತ್ತಿದ್ದಂತೆ ಮನಸ್ಸು ಇಲ್ಲಸಲ್ಲದನ್ನ ಬೇಡಲು ಶುರುವಿಟ್ಟುಕೊಳ್ಳುತ್ತದೆ. ಇಷ್ಟು ದಿನ ಶಾಲೆಗೆ ಹೋಗಿ ಬೆಸತ್ತ ಮನಸ್ಸಿಗೆ ಕಾಲೇಜಿನ ಚಿತ್ರಣ ಹಾಗೆ ಸುಮ್ಮನೆ ಮುದ ನೀಡುತ್ತದೆ. ಈಗಿನ ಸ್ಮಾರ್ಟ್ ಕಾಲದಲ್ಲಿ ಕಾಲೇಜಿನ ಮೆಟ್ಟಿಲೇರುವ ಯುವ ಮನಸ್ಸುಗಳ ಮೊದಲ ಆದ್ಯತೆ ಸೆಲ್ ಫೋನ್. ಕಂಪ್ಯೂಟರ್ ಯುಗದ ಜಾಯಮಾನದಲ್ಲಿ ಮೊಬೈಲ್ ಫೋನುಗಳದ್ದೇ ಹಾವಳಿ.

ಹತ್ತಾರು ಕನಸುಗಳನ್ನು ಕಟ್ಟಿಕೊಂಡು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತ ಕಾಲೇಜುಗಳನ್ನು ಸೇರುವ ವಿದ್ಯಾರ್ಥಿಗಳ ಮನಸ್ಥಿತಿ ಕಾಲೇಜು ಮುಗಿಸುವವರೆಗೆ ಇರುವುದಿಲ್ಲ. ದೂರದೂರಿನಿಂದ ಓದಿಗಾಗಿಯೇ ಮನೆಯನ್ನು ತೊರೆದು ಹಾಸ್ಟೆಲ್ ನಲ್ಲೋ ಪಿಜಿಯಲ್ಲೋ ಅಥವಾ ರೂಮ್ ಮಾಡಿಕೊಂಡು ಇರುವ ವಿದ್ಯಾರ್ಥಿಗಳು ಸಹ ತಮ್ಮ ಸುತ್ತಮುತ್ತಲಿನ ವಾತಾವರಣದ ಪ್ರಭಾವದಿಂದ ವಿಚಲಿತರಾಗುತ್ತಾರೆ . ಮನೆ ಪರಿಸ್ಥಿತಿ ಹೇಗೇ ಇದ್ದರೂ ಸ್ಮಾರ್ಟ್ ಫೋನ್ ಗಳೇ ಬೇಕು ಎಂದು ಹಠ ಹಿಡಿಯುತ್ತಾರೆ. ಬೆರಳುಗಳು ಮೊಬೈಲ್ ನ ಕೀಲ ಮಣಿಗಳ ಮೇಲೆ ಹರಿದಾಡುತ್ತಿದ್ದರೆ ಅದೇನೋ ಸಿಕ್ಕಂತ ಭಾವ. ಕೆಲವೊಮ್ಮೆ ಗಂಟೆಗಟ್ಟಲೆ ಮೆಸೇಜ್ ಗಳಲ್ಲಿ ಕಳೆದುಹೋಗುವ ಸುಖವೇ ಬೇರೆ ಎಂದೆನಿಸುತ್ತದೆ. ಆದರೆ ಅತಿಯಾದರೆ ಅಮೃತವು ವಿಷ ಎನ್ನುವಂತೆ ಮೊಬೈಲ್ ಬಳಕೆಯಲ್ಲಿಯೂ ಇದು ಅನ್ವಯವಾಗುತ್ತದೆ. ಸುಮ್ಮನೆ ಕುಳಿತು ಯೋಚಿಸಿದರೆ ತಾತ್ಕಾಲಿಕ ಸಂತೋಷಕ್ಕಿಂತ ಶಾಶ್ವತ ಪರಿಹಾರವೇ ಲೇಸು ಎಂದನಿಸುತ್ತದೆ.

ಮೊದಲಾದರೆ ಸ್ನೇಹಿತರು ಕಂಡೊಡನೆ ಸಂತೋಷದಿಂದ ನಕ್ಕು ಮಾತನಾಡುತ್ತಿದ್ದವರು ಈಗ ಮಾತು ಶುರುವಾಗುತ್ತಲೇ ಮೊಬೈಲ್ ತೆಗೆದು ಪೋಟೋ ಕ್ಲಿಕ್ಕಿಸಿಕೊಂಡು ಹೊರಟು ಬಿಡುತ್ತಾರೆ .ಮೊದಲೆಲ್ಲ ರಜೆಯಂದು ಅಜ್ಜಿಯ ಮನೆಗೋ ನೆಂಟರ ಮನೆಗೆ ಹೋದರೆ ಎಲ್ಲರೂ ಒಟ್ಟುಗೂಡಿ ಕಥೆ ಕೇಳುವುದು, ಎಲ್ಲ ಮನೆಯವರೊಂದಿಗೆ ಕಾಲ ಕಳೆಯುತ್ತದ್ದರು‌. ಆದರೆ ಈಗ ತಮ್ಮ ತಮ್ಮ ರೂಮಿನಲ್ಲಿ ಕುಳಿತು ಮೊಬೈಲ್ ನೋಡುತ್ತಾ ಒಬ್ಬೋಬ್ಬರೆ ನಗುವುದು, ಬೇಸರಗೊಳ್ಳುವುದು ಮಾಡುತ್ತಾರೆ. ಯಾರಾದರೂ ಸಿಕ್ಕರೆ ಡಿಪಿ, ಪ್ರೊಫೈಲ್ ಪಿಕ್, ಚೆನ್ನಾಗಿದೆಯೇ , ನಿನ್ನೆ ಹಾಕಿದ ವಾಟ್ಸಪ್ ಸ್ಟೇಟಸ್ ಹೇಗಿತ್ತು ?ಹೊಸ ಪೋಸ್ಟ್ ಹೇಗಿದೆ ಎಂದು ಕೇಳುತ್ತಾರೆ ಹೊರತು ಸಿಕ್ಕವರ ಯೋಗ ಕ್ಷೇಮ ವಿಚಾರಿಸುವ ಗೋಜಿಗೆ ಹೋಗುವುದು ಕಡಿಮೆ. ಕಾಲೇಜು ಆವರಣದಲ್ಲಿ ಯಾರಾದರೂ ವಿದ್ಯಾರ್ಥಿಗಳು ಶಿಕ್ಷಕರಿಗೆ ಬೆಳಗಿನ ಶುಭಾಶಯಗಳನ್ನೋ ಅಥವಾ ನಮಸ್ಕಾರವನ್ನು ಮಾಡುತ್ತಾರೆಂದರೆ ಅವರ ಕಿವಿಯಲ್ಲಿದ್ದ ಏರ್ ಫೋನ್ ತೆಗೆದಿದ್ದಾರೆ ಎಂದರ್ಥ.

ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕಾದ ಈ ಸಂದರ್ಭದಲ್ಲಿ ಪುಸ್ತಕ ಎಂಬ ಒಳ್ಳೆಯ ಸ್ನೇಹಿತನ ಅವಶ್ಯಕತೆ ನಮಗಿದೆ. ಹೊರತಾಗಿ ಆಕರ್ಷಕ ಬದುಕಿನ ಮೊಬೈಲ್ ಅಲ್ಲ. ಮೊಬೈಲ್ ನಮ್ಮೆಲ್ಲರ ಕೈ ಸೇರಿದಾಗಿನಿಂದ ಕಾಲೇಜಿನ ನೋಟಿಸ್ ಬೋರ್ಡ್ ನಲ್ಲಿ ಹಾಕಿದ ಮಾಹಿತಿಯನ್ನು ಓದುವ ವ್ಯವಧಾನವೂ ನಮಗಿಲ್ಲ. ಸುಮ್ಮನೆ ಪೋಟೋ ಕ್ಲಿಕಿಸಿ ಮೊಬೈಲನ್ನು ಜೇಬಿಗೆ ಇಳಿಸಿ ಹೊರಟುಬಿಡುತ್ತೇವೆ. ನಂತರ ಎಂದೋ ಮೊಬೈಲ್ ಮೆಮೊರಿ ತುಂಬಿ ಹೋದಾಗ ಆ ಮಾಹಿತಿಯ ಫೋಟೋ ಡಿಲೀಟ್ ಮಾಡುತ್ತೇವೆ. ನಮಗಾಗಿಯೇ ಇದ್ದ ಒಳ್ಳೆಯ ಮಾಹಿತಿಯ ಪ್ರತಿ ಅಳಿಸಿ ಹೋಗುತ್ತದೆ. ಇದರಿಂದ ನಷ್ಟ ಯಾರಿಗೆ ? ನಮಗೆ ತಾನೆ?..

ಕಾಲೇಜು ಆವರಣದಲ್ಲಿ ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು ನಡೆ ನಿನಗಾಗುವ ಅರಿವೇ ಬೇರೆ. ನಿನ್ನಡೆಗೆ ತೋರಿ ಬರುವ ಗೌರವವೇ ಬೇರೆ ಎಂಬ ಮಾತನ್ನು ಪ್ರಾದ್ಯಾಪಕರು ಹಿರಿಯರು ಹೇಳಿದ್ದರೂ ಅದನ್ನ ತಿಳಿಯುವ ತಾಳ್ಮೆ ಈಗಿನ ಯುವ ಮನಸ್ಸುಗಳಿಲ್ಲ.

ಕೆಲವು ವರ್ಷಗಳ ಹಿಂದೆ ಕೇವಲ ಅವಶ್ಯಕತೆಗಳಿಗಾಗಿ ತಯಾರಾದ ಮೊಬೈಲ್ ಫೋನ್ ಗಳು ಈಗ ಅನಿವಾರ್ಯವಾಗಿ ಬಿಟ್ಟಿವೆ. ಅಂಗೈಯಲ್ಲೇ ಜಗತ್ತನ್ನ ನೋಡುವ ಸಾಧನವಾಗಿ ಮಾರ್ಪಟ್ಟಿದೆ. ಮನೋರಂಜನೆ, ವ್ಯವಹಾರ, ಮಾಹಿತಿ ಸಂಗ್ರಹ, ವಸ್ತುಗಳ ಖರೀದಿ ಎಲ್ಲವೂ ಈಗ ಫೋನ್ ಒಳಗೆ ಸಿಗುವಂತಾಗಿದೆ. ಆದ್ದರಿಂದ ನಾವೆಲ್ಲರೂ ಮೊಬೈಲ್ ಫೋನ್ಗಳ ಮೇಲೆ ಅವಲಂಬಿತರಾಗಿದ್ದೇವೆ.

ಕೆಲವರಂತೂ ವ್ಯಾಯಮಕ್ಕೆಂದು ಪಾರ್ಕ್ಗಳಿಗೆ ತೆರಳಿದರೂ , ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋದರೂ ಮೊಬೈಲ್ ಸ್ಕ್ರೀನ್ ಗಳನ್ನು ಉಜ್ಜುವುದನ್ನ ಬಿಡುವುದಿಲ್ಲ. ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಪರಿವೇ ಇಲ್ಲದೆ ಫೋನಿನೊಳಗೊಂದು ಲೋಕವನ್ನ ಸೃಷ್ಟಿಸಿ ಕೂತುಬಿಡುತ್ತಾರೆ…

ಒಂದು ಸಮಯದಲ್ಲಿ ಕೇವಲ ಮಾತಿನ ಮಧ್ಯಮವಾಗಿ ರೂಪುಗೊಂಡಿದ್ದ ಮೊಬೈಲ್ ಫೋನ್ ಗಳು ಈಗ ನಮ್ಮ ಬದುಕನ್ನೇ ನಿಯಂತ್ರಿಸುವ ಮಟ್ಟಿಗೆ ಬಂದಿವೆ ಎಂದರೆ ತಪ್ಪಾಗಲಾರದು.

ಹೀಗೆ ಬಾಲ್ಯವನ್ನ ನೆನಪಿಸಿಕೊಂಡಾಗ ಮೊದಲಿಗೆ ತಲೆಗೆ ಹೊಳೆಯುವುದು ಮೈದಾನದಲ್ಲಿ ಆಟ ಮಾಡುತ್ತಿದ್ದ ಸವಿ ನೆನಪು.. ಈಗ ಬಹಳಷ್ಟು ಜನ ಮೈದಾನದ ಕಡೆಗೆ ಹೋಗುವುದೇ ಇಲ್ಲ.. ಮೊಬೈಲ್ ಗೇಮ್ ನಲ್ಲಿ ಮುಳುಗಿ ಹೋಗುತ್ತಾರೆ. ಎಂದೋ ಒಮ್ಮೆ ಬಿಡುವು ಮಾಡಿಕೊಂಡು ಸ್ನೇಹಿತರೊಂದಿಗೊ, ಕುಟುಂಬದವರೊಂದಿಗೋ ಟ್ರಿಪ್ ಗೆಂದು ಹೋದರೂ ಅಲ್ಲಿಯ ನಿಸರ್ಗದ ಸೌಂದರ್ಯವನ್ನು ಅನುಭವಿಸುವ ಬದಲು ಮೊಬೈಲ್ ನಲ್ಲಿ ಪೋಟೊ ತೆಗೆಯುವುದು ,ವಿಡಿಯೋ ಮಾಡುವುದರಲ್ಲೇ ಕಾಲ ಕಳೆಯುತ್ತಾರೆ.

ಕಾಲ ಎಷ್ಟು ಬದಲಾಗಿದೆ ನೋಡಿ, ಬೆಳಗ್ಗೆದ್ದು, ಕರಾಗ್ರೆ ವಸತೆ ಲಕ್ಷ್ಮಿ, ಕರ ಮಧ್ಯೆ ಸರಸ್ವತಿ, ಕರ ಮೂಲೆ ಸ್ಥಿತಾ ಗೌರಿ ,ಪ್ರಭಾತೆಕರದರ್ಶನಂ ಎಂದು ಕಣ್ಣುಜ್ಜುತ್ತಿದ್ದವರು ಈಗ ಮೊಬೈಲ್ ಸ್ಕ್ರೀನ್ ಉಜ್ಜುವುದರಲ್ಲೇ ನಿರತರಾಗಿದ್ದೇವೆ.

ಮೊಬೈಲ್ ನೋಡುತ್ತಾ ಅದೆಷ್ಟೋ ಜನ ಪೇಚಿಗೆ ಸಿಲುಕಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ.
2016ರಲ್ಲಿ ಪಾರ್ಕಿಂಗ್‌ನಿಂದ ಕಾರ್ ತೆಗೆಯುವಾಗ ಮೊಬೈಲ್ ಕಡೆ ಗಮನ ನೀಡಿದ್ದ ಮಹಿಳೆ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ಕಾರ್ ಚಲಾಯಿಸಿದ ಭೀಕರ ಘಟನೆ ಚೀನಾದಲ್ಲಿ ನಡೆದಿತ್ತು..
ಇದಲ್ಲದೇ , ಇತ್ತೀಚೆಗೆ ಮಂಗಳೂರಿನಲ್ಲಿ 09 ವರ್ಷದ ಬಾಲಕ ರಾತ್ರಿಯೆಲ್ಲ ಮೊಬೈಲ್ ನೋಡುತ್ತಿದ್ದ ಎಂದು ಬೈದ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇದರಂತೆ ಮೊಬೈಲ್ ಬಳಕೆಯಿಂದ ಹಲವಾರು ಅವಾಂತರಗಳು ಸೃಷ್ಟಿಯಾಗಿರುವ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ.. ಆದರೂ ತಪ್ಪು ಸರಿಗಳ ಬಗ್ಗೆ ನಮಗೆ ಅರಿವಿದ್ದೂ ಕೆಲವೊಮ್ಮೆ ತಪ್ಪುಗಳನ್ನೇ ನಾವು ಅನುಸರಿಸುತ್ತೇವೆ.

Klive Special Article ಇನ್ನು ಹೆಚ್ಚಿನವರಿಗೆ ಮಲಗುವ ಸಮಯದಲ್ಲಿ, ಬಹಳಷ್ಟು ಹೊತ್ತು ಮೊಬೈಲ್ ನೋಡುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಮೊಬೈಲ್‌ಗಳನ್ನು ಬಳಸುವುದು ಬಹಳ ಅಪಾಯಕಾರಿ.

ಮೊಬೈಲ್ ನೋಡುತ್ತಾ ಆಹಾರವನ್ನು ತಿನ್ನುವುದು ಹಲವಾರು ಕಾರಣಗಳಿಗಾಗಿ ಸಮಸ್ಯೆಯಾಗಿದೆ. ಮೊದಲನೆಯದಾಗಿ, ನಿಮ್ಮ ಫೋನ್‌ನಿಂದ ನೀವು ವಿಚಲಿತರಾದಾಗ, ನೀವು ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ನೀವು ಗಮನ ಹರಿಸುವುದು ಕಡಿಮೆ.ಇದು ಅತಿಯಾಗಿ ತಿನ್ನುವುದು ಮತ್ತು ಕಳಪೆ ಜೀರ್ಣಕ್ರಿಯೆಗೆ ಕಾರಣವಾಗಬಹುದು. ಎರಡನೆಯದಾಗಿ, ತಿನ್ನುವಾಗ ನಿಮ್ಮ ಫೋನ್ ಅನ್ನು ನೋಡುವುದರಿಂದ ಕಣ್ಣಿನ ಆಯಾಸ ಮತ್ತು ತಲೆನೋವು ಉಂಟಾಗುತ್ತದೆ. ಅಂತಿಮವಾಗಿ, ಮೊಬೈಲ್ ಪರದೆಯಿಂದ ಹೊರಸೂಸುವ ನೀಲಿ ಬೆಳಕು ನಿಮ್ಮ ನಿದ್ರೆಯ ಮಾದರಿಯನ್ನು ಅಡ್ಡಿಪಡಿಸುತ್ತದೆ, ರಾತ್ರಿಯಲ್ಲಿ ನಿದ್ರಿಸುವುದು ಕಷ್ಟವಾಗುತ್ತದೆ ಎಂಬುದನ್ನು ವೈದ್ಯರು ಹೇಳುತ್ತಿರುತ್ತಾರೆ…

ಮೊನ್ನೆ ಗೆಳತಿಯ ಮನೆಗೆ ಅಪರೂಪಕ್ಕೆಂದು ಹೋಗಿದ್ದೆ. ಊಟಕ್ಕೆಂದು ಎನಾದರೂ ಸ್ಪೆಷಲ್ ಮಾಡುವ ಎಂದು ಯು ಟ್ಯೂಬ್ ನಲ್ಲಿ ಅಡಿಗೆ ನೋಡಿ ವೆಜ್ ಪುಲಾವ್ ಮಾಡುತ್ತಿದ್ದಾಗ ಮೊಬೈಲ್ ನೋಡುತ್ತಾ ಮುಳುಗಿ ಹೋಗಿದ್ದ ಗೆಳತಿ ಅವಸರದಲ್ಲಿ ತರಕಾರಿಗಳನ್ನು ಕುಕ್ಕರ್ ಗೆ ಹಾಕುವ ಬದಲು ಕಸದ ಬುಟ್ಟಿಗೆ ಹಾಕಿ , ಈರುಳ್ಳಿ ಸಿಪ್ಪೆ, ತರಕಾರಿ ಸಿಪ್ಪೆಗಳನ್ನು ಕುಕ್ಕರ್ ನಲ್ಲಿ ಹಾಕಿ ಬಿಟ್ಟಿದ್ದಳು! … ಅಂದು ಮೊಸರನ್ನವೇ ಗತಿಯಾಯಿತು.. ಮೊಬೈಲ್ ನಿಂದ ಆಗುವ ಅವಾಂತರಗಳು ಒಂದೆರಡಲ್ಲ..

ವಾಟ್ಸಪ್, ಫೇಸ್ಬುಕ್ ನಲ್ಲಿ ನಿಮ್ಮ ಅಮೂಲ್ಯ ಸಮಯವನ್ನು ಕಳೆಯುವ ಮುನ್ನ ಕೊಂಚ ಯೋಚಿಸಿ. ನಮಗೆ ಮೊಬೈಲ್ ಅವಶ್ಯಕತೆ ಇದೆ ನಿಜ. ಆದರೆ ಮೊಬೈಲ್ ಬದುಕಲ್ಲ. ನಾವು ಚೆನ್ನಾಗಿ ಓದಿ ಒಳ್ಳೆ ಕೆಲಸಕ್ಕೆ ಸೇರಿ ತಂದೆ ತಾಯಿಯ ಕನಸಿನ ಸಹಕಾರ ಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ನಮ್ಮ ಕಾಲು ಮೇಲೆ ನಿಂತಾಗ ಹೆತ್ತವರಿಗೂ ಹೊಟ್ಟೆ ಬಟ್ಟೆ ಕಟ್ಟಿ ಓದಿಸಿದ್ದಕ್ಕೂ ಸಾರ್ಥಕ ಭಾವ. ತಾವು ಹತ್ತು ರೂಪಾಯಿ ಖರ್ಚು ಮಾಡಬೇಕಾದ ಸಂದರ್ಭದಲ್ಲಿ 10 ಸಲ ಯೋಚಿಸುವವರು ನಮ್ಮ ಅಗತ್ಯಗಳನ್ನು ಕಷ್ಟವಾದರೂ ಪೂರೈಸುತ್ತಾರೆ. ನಮಗಾಗಿ ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.

ಎಲ್ಲೇಂದರಲ್ಲಿ ಮೊಬೈಲ್ನಲ್ಲಿ ಮುಳುಗಿ ಹೋಗುವುದರಿಂದ ಹತ್ತಿರದ ಸಂಬಂಧಗಳು ನಶಿಸಿ ಹೋಗಬಹುದು. ನಮಗೆ ನೋವಾದಾಗ ಸೋತಾಗ ಈ ಯಂತ್ರ ನಮ್ಮ ಸಹಾಯ ಮಾಡಲಾರದು. ನಮಗೆ ಆತ್ಮೀಯರ ಕುಟುಂಬದವರ ಅವಶ್ಯಕತೆ ಇದೆ. ಹಾಗಾಗಿ ಮೊಬೈಲ್ ನಲ್ಲಿ ಕಳೆದು ಹೋಗುವ ಬದಲು ಆತ್ಮೀಯರೊಂದಿಗೆ ಒಂದಷ್ಟು ಸಮಯ ಕಳೆಯಿರಿ ನಿಮ್ಮ ಮನಸ್ಸಿಗೂ ಹಿತವೆನಿಸುತ್ತದೆ . ಸತತ ಹವ್ಯಾಸದಿಂದ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುವುದು ನೆನಪಿರಲಿ.

ಬರಹ: ಅಂಜುಮ್ ಬಿ.ಎಸ್.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...