Rotary Club Shivamogga ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಅತ್ಯಂತ ಮುಖ್ಯ. ಮಕ್ಕಳ ಮನಸ್ಸು ಹೂವಿನ ಹಾಗೆ ಇರುತ್ತದೆ. ಉತ್ತಮವಾದ ವಿಚಾರಗಳನ್ನು ಮಕ್ಕಳ ಮನಸ್ಸಿಗೆ ನೀಡುವುದರಿಂದ ಮಕ್ಕಳ ಮನಸ್ಸು ಅರಳುತ್ತದೆ ಎಂದು ಮನೋವೈದ್ಯ ಲೇಖಕಿ ಕಲಾವಿದೆ ಡಾ. ಕೆ.ಎಸ್ ಪವಿತ್ರ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಸದಾ ಒಳ್ಳೆಯ ವಿಚಾರಗಳು ಹಾಗೂ ಉತ್ತಮ ಜೀವನ ಕೌಶಲ್ಯಗಳು, ಉತ್ತಮ ಆರೋಗ್ಯ ಹಾಗೂ ದೈಹಿಕ ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಬೇಕು. ಒಳ್ಳೆಯ ಸ್ನೇಹಿತನ ಸಹವಾಸ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ತಿಳಿಸಿದರು.
ತಂತ್ರಜ್ಞಾನ ಯುಗದಲ್ಲಿ ಮಕ್ಕಳನ್ನು ಟಿವಿ ಹಾಗೂ ಮೊಬೈಲ್ ಗಳಿಂದ ದೂರ ಇಡಬೇಕು. ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಕಲಿಸಬೇಕು. ಹಿಂಸಾತ್ಮಕ ಪ್ರವೃತ್ತಿಯನ್ನು ಪ್ರಚೋದಿಸುವ ಹಲವು ಆಟಗಳು ದೃಶ್ಯಾವಳಿಗಳು ಇಂದಿನ ಮಕ್ಕಳ ಬಾಲ್ಯವನ್ನು ಸಂಕೀರ್ಣವಾಗಿಸಿವೆ. ಅವುಗಳನ್ನು ಪೋಷಕರು ಹೇಗೆ ನಿಭಾಯಿಸಬೇಕು ಎನ್ನುವ ಗೊಂದಲ ಎಲ್ಲೆಡೆ ಇದೆ ಎಂದರು.
ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್ ಮಾತನಾಡಿ, ಡಾ. ಪವಿತ್ರ ಅವರು ರೋಟರಿ ಶಾಲೆಯ ಹಿರಿಯ ವಿದ್ಯಾರ್ಥಿ ಆಗಿದ್ದು, ಇಂದು ಅವರು ಬರೆದ 55ನೇ ಕೃತಿ “ಮಗು ಬೆರಗು” ಪುಸ್ತಕವನ್ನು ವಿದ್ಯಾರ್ಥಿಗಳಿಂದ ಬಿಡುಗಡೆಗೊಳಿಸಿರುವುದು ಅತ್ಯಂತ ಶ್ಲಾಘನೀಯ. ಮಕ್ಕಳ ಮಾನಸಿಕ ಸ್ಥಿತಿಯನ್ನು ನಾವು ಹಾಗೂ ಶಿಕ್ಷಕರು ಅರಿತು ನಡೆದುಕೊಳ್ಳಬೇಕು ಎಂದು ಹೇಳಿದರು.
Rotary Club Shivamogga ಇದೇ ಸಂದರ್ಭದಲ್ಲಿ ಡಾ. ಕೆ.ಆರ್.ಶ್ರೀಧರ್ ಮಾತನಾಡಿ, ಸಂಸ್ಕಾರ, ಯೋಗ, ಪ್ರಾಣಾಯಾಮ, ಧ್ಯಾನ ಮಕ್ಕಳ ಮನಸ್ಸಿಗೆ ಪೂರಕವಾದ ಆಹಾರ. ನಗರದ ರೋಟರಿ ಶಾಲೆ ಉತ್ತಮ ಸಂಸ್ಕಾರ ಕಲಿಸುತ್ತದೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಹಾಗೂ ಸಕಾಲದಲ್ಲಿ ಸರಿಯಾದ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಕಾರ್ಯದರ್ಶಿ ಎಸ್.ಸಿ ರಾಮಚಂದ್ರ ಮಾತನಾಡಿ, ಮಕ್ಕಳ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಪುಸ್ತಕ ಆಗಿರುವುದರಿಂದ ಮಕ್ಕಳ ಕೈಯಿಂದಲೇ ಮಕ್ಕಳ ಎದುರು ಬಿಡುಗಡೆ ಮಾಡಿರೋದು ತುಂಬಾ ಸೂಕ್ತವಾಗಿದೆ. ಇಂತಹ ಕೃತಿಗಳನ್ನು ಮಕ್ಕಳು ಮನನ ಮಾಡಿ ಬುದ್ಧಿ ಹಾಗೂ ತಿಳುವಳಿಕೆ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಇಂಟರಾಕ್ಟ್ ಕ್ಲಬ್ ಅಧ್ಯಕ್ಷ ಹರ್ಷಿತ್ ಹಾಗೂ ಕಾರ್ಯದರ್ಶಿ ಗಾನವಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಸೂರ್ಯನಾರಾಯಣ, ಮುಖ್ಯ ಶಿಕ್ಷಕಿ ಜಯಶೀಲ ಬಾಯಿ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.