Asian Games ಭಾರತದ ಅಥ್ಲೀಟ್ ಪಾರೂಲ್ ಚೌಧರಿ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. 2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾರೂಲ್ ಚೌಧರಿ ಎರಡನೇ ಪದಕವನ್ನು ಗೆದ್ದುಕೊಂಡಿದ್ದು ಈ ಬಾರಿ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ 5000 ಮೀಟರ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾರೂಲ್ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.
ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕ ಗೆದ್ದು 5000 ಮೀ ಸ್ಪರ್ಧೆಗೆ ಕಣಕ್ಕಿಳಿದ ಪಾರುಲ್ ನಿಧಾನವಾಗಿ ಆರಂಭವನ್ನು ಪಡೆದುಕೊಂಡರು. 10-ಲ್ಯಾಪ್ ಓಟದ ಬಹುಪಾಲು ಭಾಗದಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿಯೇ ಇದ್ದರು. ಆದರೆ ಅಂತಿಮ ಹಂತದಲ್ಲಿ ಅದ್ಭುತವಾಗಿ ತಮ್ಮ ವೇಗವನ್ನು ಅವರು ಹೆಚ್ಚಿಸಿಕೊಂಡು ಆರಂಭದಿಂದಲೂ ಮೊದಲು ಸ್ಥಾನದಲ್ಲಿ ಓಡುತ್ತಿದ್ದ ಜಪಾನ್‌ನ ರಿರಿಕಾ ಹಿರೋನಾಕಾ ಅವರ ವೇಗವನ್ನು ಸರಿಗಟ್ಟಿದರು.
Asian Games ಇನ್ನು ಇದಕ್ಕೂ ಮುನ್ನ ಸೋಮವಾರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ 9.27.63 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದುಕೊಂಡಿದ್ದರು. ಈ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಯಾವಿ ವಿನ್‌ಫ್ರೈಡ್ ಏಷ್ಯನ್ ಗೇಮ್ಸ್ ದಾಖಲೆಯನ್ನು ಮುರಿದು 9:18.26 ಸೆಕೆಂಡ್‌ಗಳಲ್ಲಿ ಗುರಿತಲುಪಿ ಚಿನ್ನದ ಪದಕ ಗೆದ್ದುಕೊಂಡಿದ್ದರು.