Channabasappa ಆಟದಲ್ಲಿ ಎಲ್ಲರೂ ಗೆಲ್ಲಲೇಬೇಕು. ಇದು ಕ್ರೀಡಾಪಟುವಿನ ಮನದಿಂಗಿತದ ಬಯಕೆ. ಆದರೆ ಕೆಲ ತೊಡರುಗಳಿಂದ ಸೋತಾಕ್ಷಣ ಯಾವುದೇ ಕ್ರೀಡಾಪಟುಗಳು ನೊಂದುಕೊಳ್ಳಬಾರದು, ಇಂದಿನ ಸೋಲು ನಾಳಿನ ಗೆಲುವಿಗೆ ಮುನ್ನುಡಿಯಾಗುತ್ತದೆ ಎಂದು ಶಾಸಕ ಚನ್ನಬಸಪ್ಪ ಇಂದಿಲ್ಲಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಿವಮೊಗ್ಗ.ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ತಾಲ್ಲೂಕು 17 ವರ್ಷ ವಯೋಮಿತಿಯೊಳಗಿನ ಪ್ರೌಢ ಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟವನ್ನು ನೆಹರೂ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾ ಮನೋಸ್ಥಿತಿಯೇ ಸೋಲು ಹಾಗೂ ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತದೆ ಅಂತಹ ಭಾವನೆ ನಿಮ್ಮಲ್ಲಿ ಬರಲಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣಕ್ಕೆ ಆದ್ಯತೆ ನೀಡಿದಷ್ಟೆ ಪ್ರಮಾಣದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಬೆಂಬಲಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಕಂಡ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಜೊತೆಗೆ ಗೆಲುವಿಗೆ ಹುರುದುಂಬಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪರಮೇಶ್ವರಪ್ಪ ಸಿ. ಆರ್. ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡಾ ಮನೋಭಾವದ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾ ಕ್ಷೇತ್ರದ ಉತ್ತಮ ಸಾಧನೆ ಮಾಡಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ್. ಪಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ. ಹೆಚ್. ನಿರಂಜನ್ ಮೂರ್ತಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.
Channabasappa ಇದೇ ಸಂದರ್ಭದಲ್ಲಿ ವಿವಿಧ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕಾಳಾನಾಯ್ಕ ಎಸ್. ಇನ್ನೂ ಮುಂತಾದವರು ಉಪಸ್ಥಿತರಿದ್ದರು.