Uttaradi Mutt ಶ್ರೀ ಸತ್ಯಧರ್ಮ ತೀರ್ಥರು ಸುಗಮ ಹಾಗೂ ದುರ್ಗಮ ಎರಡೂ ಶೈಲಿಯಲ್ಲಿ ವ್ಯಾಖ್ಯಾನವನ್ನು ಮಾಡುವಲ್ಲಿ ಸಿದ್ಧಹಸ್ತರು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಶನಿವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶ ನೀಡಿದರು.
ಶ್ರೀಮದ್ಭಾಗವತಕ್ಕೆ ಅತ್ಯಂತ ಗಂಭೀರವಾಗಿ ಮತ್ತು ಪ್ರಾಸಬದ್ಧವಾಗಿ ವ್ಯಾಖ್ಯಾನ ಮಾಡುವ ಶ್ರೀ ಸತ್ಯಧರ್ಮ ತೀರ್ಥರು, ಮಹಾಭಾರತದ ವಿರಾಟಪರ್ವ ಮತ್ತು ಉದ್ಯೋಗ ಪರ್ವಕ್ಕೆ ವ್ಯಾಖ್ಯಾನ ಮಾಡುವಾಗ ಅತ್ಯಂತ ಸುಲಭವಾದ ಶೈಲಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.
ಆ ಮೂಲಕ ಎರಡು ರೀತಿಯಲ್ಲೂ ವ್ಯಾಖ್ಯಾನ ಸಾಧ್ಯವಿದೆ ಎಂದವರು ಜಗತ್ತಿಗೆ ತೋರಿಸಿದ್ದಾರೆ ಎಂದರು.
ಮಹಾಭಾರತವೇ ದೊಡ್ಡ ಸಂದೇಶ :
ನೈತಿಕ ಸಂದೇಶ, ಧಾರ್ಮಿಕ ಸಂದೇಶ ಮತ್ತು ತಾತ್ವಿಕ ಸಂದೇಶಗಳು ಮಹಾಭಾರತದಲ್ಲಿ ಇವೆ. ನಿತ್ಯ ಜೀವನಕ್ಕೆ ಬೇಕಾದ ಹಲವಾರು ಉಪಯುಕ್ತ ಸಂದೇಶವನ್ನು ವೇದವ್ಯಾಸ ದೇವರು ಮಹಾಭಾರತದ ಮೂಲಕ ನಮಗೆ ತಿಳಿಸಿದ್ದಾರೆ.
ಗುರುಗಳ ಸೇವೆ ಮಾಡಿ :
ಪ್ರವಚನ ನೀಡಿದ ವ್ಯಾಸೇಂದು ಆಚಾರ್ಯ ನಾಗರಹಳ್ಳಿಘಿ, ಗುರುಗಳ ಕರ್ಮಾನುಷ್ಠಾನಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ನಾವು ಸೇವೆ ಮಾಡಬೇಕು. ಅವರು ನೀಡುವ ಸಂದೇಶವನ್ನು ಕೇಳಬೇಕು. ಅವರಿಂದ ದೇವರ ಗುಣಗಾನವನ್ನು ಕೇಳಬೇಕು. ಈ ಸೇವೆಯಿಂದ ದೇವರು ಪ್ರೀತನಾಗುತ್ತಾನೆ. ಇದರಿಂದ ನಮಗೆ ಮಹಾಬಲವಿದೆ ಎಂದರು.
Uttaradi Mutt ವಿಜಯೀಭವ ಎಂಬ ಶ್ರೀ ಸತ್ಯವಿಜಯ ತೀರ್ಥರ ವಿಜಯಗಾಥೆ, ತ್ರಿವೇದಿ ಉಂಡಾರು ಶ್ರೀನಿವಾಸಾಚಾರ್ಯ ಸಂಗ್ರಹ ಮಾಡಿದ ಪರತತ್ವಪ್ರಕಾಶಿಕ ಸಾರ ಸಂಗ್ರಹದ ಕನ್ನಡಾನುವಾದ ಹಾಗೂ ಶ್ರೀ ದುರ್ಗಾ ಸ್ತೋತ್ರ ಸಂಗ್ರಹದ ಕನ್ನಡಾನುವಾದ ಪುಸ್ತಕಗಳನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ಸಾತೇನಹಳ್ಳಿಯ ಶಾಂತೇಶನ ಪ್ರಸಾದವನ್ನು ಶ್ರೀಪಾದಂಗಳಿಗೆ ಸಮರ್ಪಿಸಲಾಯಿತು.
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ವಿದ್ಯಾ Ãಶಾಚಾರ್ಯ ಗುತ್ತಲ, ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಪ್ರಕಾಶಾಚಾರ್ಯ, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ, ಸತ್ಯಬೋಧಾಚಾರ್ಯ ರಟ್ಟಿಹಳ್ಳಿ ಮೊದಲಾದವರಿದ್ದರು.