Teachers’ Day ಶಿಕ್ಷಕ ವೃತ್ತಿ ಸಂಕೀರ್ಣವಾಗುತ್ತಿದೆ ಎಂದು ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಡಾ. ಹೆಚ್.ಟಿ. ಕೃಷ್ಣಮೂರ್ತಿ ಹೇಳಿದರು.
ಶಿವಮೊಗ್ಗ
ನಗರದ ಗುರುಪುರದಲ್ಲಿರುವ ಬಿಜಿಎಸ್ ಶಾಲೆ ಮತ್ತು ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಶಿಕ್ಷಕರನ್ನು ಮಕ್ಕಳಿಂದ ಹಿಡಿದು ಪೋಷಕರವರೆಗೆ ಹಾಗೂ ಸಮಾಜ ಮತ್ತು ಆಡಳಿತ ಮಂಡಳಿ ಸೇರಿದಂತೆ ಎಲ್ಲರೂ ಕೂಡ ಗಮನಿಸುತ್ತಾರೆ ಎಂದರು.
ದೀಪ ತಾನು ಉರಿದು ಮನೆಗೆ ಬೆಳಕು ಕೊಟ್ಟಂತೆ ಶಿಕ್ಷಕರು ತಮ್ಮ ವೃತ್ತಿ ಬದುಕಿನಲ್ಲಿ ಮಕ್ಕಳಿಗೆ ಶಿಕ್ಷಣದ ಜ್ಞಾನವನ್ನು ತುಂಬುವ ಮೂಲಕ ಸಮಾಜಕ್ಕೆ ಹಾಗೂ ದೇಶಕ್ಕೆ ಬೆಳಕನ್ನು ನೀಡುತ್ತಿದ್ದಾರೆ. ಇದು ವೃತ್ತಿಯಲ್ಲ ಸೇವೆ ಎಂದು ಹೇಳಿದರು.
ಶಿಕ್ಷಣಕ್ಕೆ ಅತ್ಮಜ್ಞಾನ ಮತ್ತು ಭೌತಿಕ ಜ್ಞಾನ ಎಂಬ ಎರಡು ಭಾಗಗಳಿವೆ. ಓರ್ವ ಸಮರ್ಥ ಗುರು ಇದ್ದರೆ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲು ಸಾಧ್ಯ. ನಕಾರಾತ್ಮ ಭಾವನೆಯನ್ನು ತೊಡೆದು ಹಾಕಿ ಸಕಾರಾತ್ಮಕ ಅಂಶವನ್ನು ತುಂಬುವ ಮೂಲಕ ವಿದ್ಯಾರ್ಥಿಗಳನ್ನು ದೇಶದ ಸತ್ಪ್ರಜೆಗಳಾಗಿ ನಿರ್ಮಿಸುವ ಕಾರ್ಯವನ್ನು ಶಿಕ್ಷಕ ಸಮುದಾಯ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಮಾತನಾಡಿ, ಭಾರತದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಶಿಕ್ಷಕ ಸಮುದಾಯಕ್ಕೆ ಅತ್ಯಂತ ಮಹತ್ವದ ದಿನವಾಗಿದೆ ಎಂದು ಹೇಳಿದರು.
ಶಿಕ್ಷಕರಾದ ನಾವುಗಳು ಪ್ರತಿನಿತ್ಯ ಅಭ್ಯಾಸ ಮಾಡಿದಾಗ ಮಕ್ಕಳಿಗೆ ಹೊಸ ಹೊಸ ವಿಷಯಗಳನ್ನು ಹೇಳಲು ಸಾಧ್ಯವಾಗುತ್ತದೆ ಎಂದ ಅವರು, ಎಲ್ಲಾ ತರಹದ ಮಕ್ಕಳಿಗೂ ಅನುಕೂಲವಾಗುವ ರೀತಿಯಲ್ಲಿ ನಮ್ಮ ಪಾಠ ಪ್ರವಚನಗಳು ನಡೆಯುತ್ತಿವೆ ಎಂದು ಹೇಳಿದರು.
Teachers’ Day ಸಮಾರಂಭದಲ್ಲಿ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ಮಕ್ಕಳಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು.
ಬಿಜಿಎಸ್ ಗುರುಕುಲ ಶಾಲೆ ಮತ್ತು ಕಾಲೇಜಿನ ಶಿಕ್ಷಕವರ್ಗದವರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.