Brahmashri Narayana Guru ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳು ಬೆಳೆಯುತ್ತಿರುವ ಮಕ್ಕಳಿಗೆ ಮತ್ತು ಸಮಾಜಕ್ಕೆ ಅತಿ ಅವಶ್ಯವಿದೆ. ಹಾಗಾಗಿ ಪಠ್ಯಪುಸ್ತಕಗಳಲ್ಲಿ ಅವರ ತತ್ವಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘ ಮತ್ತು ಜಿಲ್ಲಾ ಕೊರಮ ಹಾಗೂ ಕೊರಚ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಮತ್ತು ಶರಣಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಸುಧಾರಕರೂ, ತತ್ವಜ್ಞಾನಿಗಳೂ ಆದ ನಾರಾಯಣಗುರುಗಳ ಜಯಂತಿ ಆಚರಣೆ ಮಾಡುವಾಗ ಅವರ ತತ್ವಗಳ ಬಗ್ಗೆ ತಿಳಿಯದೇ ಇದ್ದರೆ ಅದರ ಪ್ರಯೋಜನ ಇರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ಅವರ ತತ್ವಗಳನ್ನು ತಿಳಿಯಬೇಕು ಮತ್ತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
Brahmashri Narayana Guru ನಿವೃತ್ತ ಕರ್ನಾಟಕ ಬ್ಯಾಂಕ್‍ನ ವ್ಯವಸ್ಥಾಪಕರು ಹಾಗೂ ಮಂಗಳೂರು ಅಖಿಲ ಭಾರತ ಬಿಲ್ಲವರ ಸಂಘದ ಕಾರ್ಯದರ್ಶಿ ಸೀತಪ್ಪ ಕೂಡೂರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ‘ಒಂದು ಜಾತಿ, ಒಂದು ಧರ್ಮ, ಎಲ್ಲಾರಿಗೂ ಒಂದೇ ದೇವರು’ ಎಂಬ ಅವರ ಮಾತಿನಂತೆಯೇ ಜಾತಿ, ಧರ್ಮದ ಭೇದವಿಲ್ಲದೇ ಪ್ರತಿಯೊಬ್ಬರಿಗೂ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ಹಕ್ಕಿದೆ ಎಂದು ಹೇಳಿದ್ದಾರೆ. 79 ದೇವಸ್ಥಾನಗಳನ್ನು ನಿರ್ಮಿಸಿದ ಅವರು ಆತ್ಮ ಮತ್ತು ಸಮಾಜದ ಉನ್ನತಿ ಆಗಬೇಕು ಎಂದಿದ್ದಾರೆ. ಅವರು ಚಿಕ್ಕಂದಿನಿಂದಲೂ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಬಗ್ಗೆ ತೀವ್ರ ಅಸಮ್ಮತಿಯನ್ನು ಹೊಂದಿದ್ದಾರೆ. ನಮ್ಮಲ್ಲಿ ಭಾಂದವ್ಯವಿದ್ದರೆ ನಾವು ಸಂಘಟನೆಗೆ ಒಳಗಾಗುತ್ತೇವೆ, ನಮ್ಮಲ್ಲಿ ಸಂಘಟನೆ ಇಲ್ಲದಾಗ ನಾವು ಶೋಷಣೆಗೆ ಒಳಗಾಗುತ್ತೇವೆ ಎಂದು ಸಮಾಜದಲ್ಲಿ ಶೋಷಣೆಗೆ ಒಳಗಾದವರಿಗೆ ಗೌರವ ಸಿಗುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಸಹ್ಯಾದ್ರಿ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಬಿ.ಎಂ ಚಂದ್ರಶೇಖರ್ ಮಾತನಾಡಿ, ನುಲಿಯ ಚಂದಯ್ಯ ಕಾಯಕ ಯೋಗಿ ಶರಣರು. ಅವರ ಕಾಯಕವೇ ಹಗ್ಗವನ್ನು ಹೊಸೆಯುವುದು, ನೂಲುವುದು, ನೇಯುವುದು. ನಾವು ಯಾವುದೇ ಕೆಲಸ ಮಾಡಿದರೂ ಅದು ಕಾಯಕವೇ ಎಂಬುದು ಅವರ ಅಭಿಮತವಾಗಿತ್ತು. ಕಾಯಕದ ಮೂಲಕವೇ ಆದರ್ಶ ಬದುಕನ್ನು ರೂಪಿಸಿಕೊಳ್ಳಬೇಕು ಎನ್ನುವಂತೆ ಅವರು ಕಾಯಕದ ಮೂಲಕವೇ ಸಮಾಜವನ್ನು ಕಟ್ಟುವ ಪ್ರಯತ್ನ ಮಾಡುತ್ತಾರೆ. ಭಕ್ತಿ ಎಂಬುದು ಪರಿಶುದ್ಧ ಜೀವನ. ಧ್ಯಾನ ಮಾಡುವ ಮನಸ್ಸು, ಗುಣ ನಮ್ಮಲ್ಲಿ ಇರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್.ಹೆಚ್, ಆರ್ಯ ಈಡಿಗರ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಆರ್. ಶ್ರೀಧರ್ ಹುಲ್ತಿಕೊಪ್ಪ, ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪಕೀರಪ್ಪ ಭಜಂತ್ರಿ, ಜಿಲ್ಲಾ ಕುಳುವ ಮಹಾಸಭಾದ ಅಧ್ಯಕ್ಷ ಅನಿಲ್ ಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.