Uttaradi Mutt ಭಗವಂತನಿಗೆ ಭಕ್ತರ ಮೇಲೆ ಅಪಾರವಾದ ಔದಾರ್ಯವಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಅನ್ನ, ವಸ್ತ್ರ, ಜೀವನ ಎಲ್ಲವನ್ನೂ ಕೊಟ್ಟು ಸಲಹಿದ್ದಾನೆ. ಅನ್ನ ಕೊಟ್ಟು ಹೊಟ್ಟೆ ತುಂಬಿಸಿದ್ದಾನೆ. ವಸ್ತ್ರವನ್ನು ನೀಡಿ ಮಾನ ಕಾಪಾಡಿದ್ದಾನೆ. ಜೀವನವನ್ನು ಕೊಟ್ಟು ಸುಖ ಅನುಭವಿಸಲೂ ಅವಕಾಶ ನೀಡಿದ್ದಾನೆ. ಆದರೆ ನಾವು ಎಲ್ಲವನ್ನೂ ದೇವರಿಗೆ ಅರ್ಪಿಸಿ ಅನುಭವಿಸಬೇಕು. ಆ ಕೃತಜ್ಞತೆ ನಮಗೆ ಇರಬೇಕು. ಇಷ್ಟೇ ಅಲ್ಲ ಎಲ್ಲ ಕ್ರಿಯೆಯನ್ನೂ ನಿಯಾಮನ ಮಾಡುತ್ತಾನೆ ಎಂದರು.
ಪ್ರಚವನ ನೀಡಿದ ಪಂಡಿತ ಭಾರತೀರಮಣಾಚಾರ್ಯ ಗಣಾಚಾರ್ಯ, ಜೀವನದಲ್ಲಿ ನಮಗೆ ದೇವರಲ್ಲಿ ಭಕ್ತಿ ಮತ್ತು ವಿಷಯ ಪದಾರ್ಥಗಳಲ್ಲಿ ವೈರಾಗ್ಯ ಇರಬೇಕು. ಆದರೆ ನಾವು ಇದಕ್ಕೆ ವ್ಯತಿರಿಕ್ತವಾಗಿ ಬದುಕುತ್ತೇವೆ. ನಮಗೆ ದೇವರ ಬಗ್ಗೆ ವೈರಾಗ್ಯ ಮತ್ತು ಲೌಖಿಕದಲ್ಲಿ ಆಸಕ್ತಿ ಇರುತ್ತದೆ. ಇದು ನಮ್ಮ ಸಾಧನೆಗೆ ಇರುವ ದೊಡ್ಡ ಪ್ರತಿಬಂಧಕ ಎಂದರು.
ಅರ್ಥವೇ ಇಂದು ಅನರ್ಥಕ್ಕೆ ಕಾರಣ ಆಗುತ್ತಿದೆ. ಒಬ್ಬರಿಗೆ ನೋವು ಕೊಟ್ಟು, ಬಲವಂತದಿಂದ ಪಡೆದ, ಶ್ರಮರಹಿತವಾದ ಹಣ ನಮ್ಮ ಅವನತಿಗೆ ಕಾರಣವಾಗುತ್ತದೆ. ಅದೇರೀತಿ ವಿಷಯ ಕಾಮನೆಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ ಎಂದರು.
Uttaradi Mutt ಬರೋಡದಿಂದ ಆಗಮಿಸಿದ್ದ ವಸಂತಾಚಾರ್ಯ ಜಹಗೀರ್‌ದಾರ್, ಶ್ರೀನಿ ಆಚಾರ್ ಬಲ್ಲರವಾಡಿ ಪ್ರವಚನ ನೀಡಿದರು. ಒರಿಸ್ಸಾದ ಜಗನ್ನಾಥ ಪುರಿ ಕ್ಷೇತ್ರದಿಂದ ನೀಲಮೇಘ ಶ್ಯಾಮ ಮತ್ತು ಜಗನ್ನಾಥನ ಪ್ರಸಾದವನ್ನು ಶ್ರೀಗಳಿಗೆ ಸಮರ್ಪಿಸಿದರು.
ಕೊಪ್ಪರ ನರಸಿಂಹ ದೇವರ ಪ್ರಸಾದವನ್ನು ಕೂಡ ಇದೇವೇಳೆ ಶ್ರೀಗಳಿಗೆ ಸಮರ್ಪಿಸಲಾಯಿತು.
ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಕಾರ್ಯದರ್ಶಿ ಕೆ.ಎನ್. ಗುರುರಾಜ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಮುರಳಿ, ಸತ್ಯನಾರಾಯಣ ನಾಡಿಗ್, ಧೃವಾಚಾರ್, ಗೋಪೀನಾಥ ನಾಡಿಗ್ ಮೊದಲಾದವರಿದ್ದರು.