Uttaradi Mutt ತತ್ವಜ್ಞಾನವೇ ದೊಡ್ಡದಾದ ಆಯುಧ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಮಂಗಳವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ನಾನಾ ವಿಧವಾದ ದುರ್ವಿಚಾರಗಳನ್ನು, ಅನೇಕ ದುರ್ಬುದ್ಧಿಗಳನ್ನು ದೂರ ಮಾಡುವುದಕ್ಕೆ ಶುದ್ಧವಾದ ತತ್ವ ಜ್ಞಾನವೇ ಒಂದು ಆಯುಧ. ಮನಸ್ಸಿನಲ್ಲಿರುವ ಆಸಕ್ತಿಯನ್ನು, ಕಾಮ ಕ್ರೋಧವನ್ನು ದೂರ ಮಾಡುವುದಕ್ಕೂ ತತ್ವಜ್ಞಾನವೇ ಆಯುಧ. ವೈರಾಗ್ಯವನ್ನು ತಂಡುಕೊಡುವುದಕ್ಕೂ ತತ್ವಜ್ಞಾನವೇ ಅಸ್ತ್ರ ಶಸ್ತ್ರ ಮತ್ತು ಆಯುಧ ಎಂದರು.
ಎಲ್ಲ ಜೀವರ ಜ್ಞಾನವೂ ದೇವರಿಗಿದೆ :
ಜಗತ್ತಿನಲ್ಲಿ ಅಸಂಖ್ಯವಾದ ಜೀವರಾಶಿಗಳೇ ಇದ್ದರೂ ಎಲ್ಲ ಜೀವರಾಶಿಯ ಬಗ್ಗೆಯೂ ಚೆನ್ನಾಗಿ ದೇವರಿಗೆ ಗೊತ್ತು. ಗೊತ್ತು ಅಷ್ಟೇ ಅಲ್ಲ, ಎಲ್ಲ ಜೀವರ ನಿಯಾಮನ ಮಾಡುವವನೂ ಅವನೇ. ಎಲ್ಲ ಜೀವರಾಶಿಗಳನ್ನು ತಿಳಿದವ, ಅವರ ಎಲ್ಲ ಕರ್ಮಗಳನ್ನು ತಿಳಿದವ, ಅಷ್ಟೇ ಅಲ್ಲ ಎಲ್ಲ ಜೀವರಾಶಿಗಳ ಬುದ್ದಿ, ಮನಸ್ಸು ಮತ್ತು ಜ್ಞಾನವನ್ನೂ ತಿಳಿದವ ಭಗವಂತ. ಅಂತಹ ಭಗವಂತ ನೀನು ಎಂದು ಕೃಷ್ಣನ ಅವತಾರ ಆದ ಬಳಿಕ ವಸುದೇವ ಸ್ತೋತ್ರ ಮಾಡಿದ್ದಾನೆ. ಇಂತಹ ಶ್ರೀಕೃಷ್ಣ ಮುಂದೆ ಸಾಂದೀಪಿನಿ ಗುರುಕುಲದಲ್ಲಿ ಕಲಿತ ಎಂಬುದು ಲೋಕ ಶಿಕ್ಷಣಕ್ಕಾಗಿ ಮಾತ್ರ. ಆತ ಯಾರಿಂದಲೂ ಕೇಳಿ ತಿಳಿದುಕೊಳ್ಳಬೇಕಾದ ಅಗತ್ಯ ಇಲ್ಲ ಎಂದರು.
Uttaradi Mutt ಶಾಸ್ತ್ರಜ್ಞಾನದಿಂದ ಶುದ್ಧರಾಗಿ :
ಪ್ರವಚನ ನೀಡಿದ ಪಂಡಿತ ರಾಮಕೃಷ್ಣಾಚಾರ್ಯ ರೊಟ್ಟಿ ಮಾತನಾಡಿ, ಕಾಲದಿಂದ ಭೂಮಿ, ಸ್ನಾನದಿಂದ ದೇಹ, ಯಜ್ಞದಿಂದ ಬ್ರಾಹ್ಮಣ, ತಪಸ್ಸಿನಿಂದ ಇಂದ್ರಿಯ, ಗರ್ಭಾದಾನದಿಂದ ಗರ್ಭ, ದಾನದಿಂದ ಸಂಪತ್ತು ಶುದ್ಧವಾಗುತ್ತದೆ. ಆದರೆ ಅಪವಿತ್ರನಾದ ಜೀವ ಶಾಸ್ತçಜ್ಞಾನದಿಂದ ಶುದ್ಧನಾಗುತ್ತಾನೆ ಎಂದರು.
ಪಂಡಿತ ವಾದಿರಾಜಾಚಾರ್ಯ ಕರಣಮ್ ಅವರ ಶ್ರೀ ಸತ್ಯಪ್ರಿಯ ಅಷ್ಟಕ ಮತ್ತು ಶ್ರೀ ಸತ್ಯಧರ್ಮ ಅಷ್ಟಕದ ಕನ್ನಡದ ಅನ್ವಯಾರ್ಥ ಮತ್ತು ಭಾವಾರ್ಥ ಸಹಿತ ತಿಳಿಸಿರುವ ಪುಸ್ತಕವನ್ನು ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಲೋಕಾರ್ಪಣೆಗೊಳಿಸಿದರು.
ವಿಶ್ವ ಮಾಧ್ವ ಮಹಾಪರಿಷತ್ ಮತ್ತು ಚಾತುರ್ಮಾಸ್ಯ ಸಮಿತಿ ಈ ಪುಸ್ತಕವನ್ನು ಬಿಡುಗಡೆ ಮಾಡಿದೆ. ಈ ಪುಸ್ತಕ ಮುದ್ರಣ ಕಾರ್ಯಕ್ಕೆ ಕಿಶನ್‌ರಾವ್ ಕಟಾವ್ಕರ್ ವಿಶೇಷ ಆರ್ಥಿಕ ನೆರವು ನೀಡಿದ್ದಾರೆ.
ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು.
ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ ೨೮ನೇ ಚಾತುರ್ಮಾಸ್ಯದ ಅಂಗವಾಗಿ ಆ.13ರ ಭಾನುವಾರದಂದು ಸಾರ್ವಜನಿಕರಿಗೆ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಮಹಾರಾಷ್ಟ್ರದ ಸಿಂಧುದುರ್ಗದ ವೈದ್ಯರಾದ ಡಾ.ಆರ್.ಎಸ್. ಕುಲಕಣಿ ನೇತೃತ್ವದ 23 ಜನ ತಜ್ಞ ವೈದ್ಯರ ತಂಡ ಈ ಶಿಬಿರವನ್ನು ನಡೆಸಿಕೊಡಲಿದೆ.
ಶ್ರೀ ಸತ್ಯಾತ್ಮ ತೀರ್ಥರು ಭಾನುವಾರ ಬೆಳಗ್ಗೆ 09 ಗಂಟೆಗೆ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ನಂತರ ನಡೆಯುವ ವೈದ್ಯಕೀಯ ತಪಾಸಣಾ ಶಿಬಿರವು ಸಂಜೆ 07 ಗಂಟೆಯವರೆಗೆ ಹೊಳೆಹೊನ್ನೂರಿನ ಬಸ್ ನಿಲ್ದಾಣ ಸಮೀಪದ ಭಗೀರಥ ಸಭಾ ಭವನದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಉದರ ತಜ್ಞರು, ಕಿವಿ, ಮೂಗು ಮತ್ತು ಗಂಟಲು ತಜ್ಞರು, ಮಕ್ಕಳ ತಜ್ಞರು, ಜನರಲ್ ಫಿಸಿಷಿಯನ್, ನರರೋಗ ತಜ್ಞರು, ಶ್ವಾಸಕೋಶ ತಜ್ಞರು, ನೇತ್ರ ತಜ್ಞರು, ಶ್ರವಣಶಾಸ ತಜ್ಞರು, ಸೀರೋಗ ತಜ್ಞರು, ರೋಗಶಾಸ ತಜ್ಞರು ಮತ್ತು ಕ್ರಿಟಿಕಲ್ ಕೇರ್ ತಜ್ಞರು ಇರಲಿದ್ದಾರೆ.
ಇದೇ ಸಂದರ್ಭದಲ್ಲಿ ಉಚಿತವಾಗಿ ಅಗತ್ಯ ಔಷಧಗಳನ್ನು ಕೂಡ ವಿತರಿಸಲಾಗುವುದು. ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲ ನಾಗರಿಕರು ಪಡೆದುಕೊಳ್ಳುವಂತೆ ಉತ್ತರಾದಿ ಮಠದ ವತಿಯಿಂದ ತಿಳಿಸಲಾಗಿದೆ.
