DSS Chikkamagaluru ಚಿಕ್ಕಮಗಳೂರು ನಗರದ ಪವಿತ್ರವನ ಸಮೀಪ ಮದ್ಯದ ಅಂಗಡಿ ತೆರೆಯದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಬಣ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ದಸಂಸ ಪದಾಧಿಕಾರಿಗಳು ನಗರದ ಜಿ.ಪಂ. ಸಮೀಪವಿರುವ ಪವಿತ್ರವನದ ಸುತ್ತಮುತ್ತಲು ಯಾವುದೇ ಮದ್ಯದಂಗಡಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಗೆರೆ ಮೋಹನ್‌ಕುಮಾರ್ ಇತ್ತೀಚೆಗೆ ಎಸ್ಟಿ, ಎಸ್ಟಿ ಕುಂದುಕೊರತೆಯ ಸಭೆಯಲ್ಲಿ ಮದ್ಯದ ಅಂಗಡಿಗೆ ಪರವಾನಿಗೆ ನೀಡಬಾರದೆಂದು ಅಬಕಾರಿ ಉಪನಿರೀಕ್ಷಕರು ಮತ್ತು ಪೊಲೀಸ್ ವರಿಷ್ಟಾಧಿಕಾರಿಗಳ ಸಮ್ಮುಖದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದರು.
DSS Chikkamagaluru ಪವಿತ್ರವನದ ಸಮೀಪದ ಪ.ಜಾತಿ ಮತ್ತು ಪ.ಪಂಗಡದ ಬಾಲಕರ ವಿದ್ಯಾರ್ಥಿನಿಲಯ ಮತ್ತು ಅಕ್ಕಪಕ್ಕದಲ್ಲಿ ಸರ್ಕಾರಿ ಇಲಾಖೆ, ಶಾಲೆಗಳಿವೆ. ಮದ್ಯದಂಗಡಿ ತೆರೆದರೆ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ ಮತ್ತು ಬಡಮಕ್ಕಳು ದುಶ್ಚಟಕ್ಕೆ ಬಲಿಯಾಗುವ ಸಂಭವವಿದೆ ಎಂದು ತಿಳಿಸಿದರು.
ಹಲವು ಬಾರಿ ಮದ್ಯದಂಗಡಿ ತೆರೆಯದಂತೆ ಅರ್ಜಿ ನೀಡಿದರೂ ಪವಿತ್ರವನ ಸಮೀಪ ರಿಲಕ್ಸ್ ಬಾರ್ ಅಂಡ್ ರೆಸ್ಟೋರೆಂಟ್ ತೆರೆದಿದ್ದು ಇದನ್ನು ಕೂಡಲೇ ತೆರವುಗೊಳಿಸಬೇಕು. ಒಂದು ತೆರವಿಗೆ ವಿಳಂಭ ನೀತಿ ಅನುಸರಿಸಿದರೆ ಸ್ವಾತಂತ್ರö್ಯ ದಿನಾಚರಣೆ ದಿನಂದು ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಅರುಣಾಕ್ಷಿ, ವಿಭಾಗೀಯ ಸಂಚಾಲಕ ಟಿ.ಎಲ್.ಗಣೇಶ್, ಮುಖಂಡ ನಂಜುಂಡಪ್ಪ ಹಾಜರಿದ್ದರು.