Saturday, November 23, 2024
Saturday, November 23, 2024

Klive Special Article ಮಳೆ ಮತ್ತು ಮನುಷ್ಯ … ಒಂದು ಸಂವಾದ

Date:

Klive Special Article ಮಳೆ ಮಳೆ ಮಳೆ….

ಇದು ಮಾಡುತ್ತಿರುವ ಅನಾಹುತ ನೋಡಿ ತುಂಬಾ ಕೋಪ ಬಂತು.

ಇದೇನಿದು, ಪ್ರಕೃತಿಯೇ ದೇವರು ಎಂದು ಬಹಳ ಜನ ನಂಬಿದ್ದಾರೆ. ಈಗ ಆ ದೇವರೇ ಅನೇಕ ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಈಗ ನಾವು ಪ್ರಶ್ನೆ ಮಾಡಲೇ ಬೇಕಲ್ಲವೇ ? ಅದಕ್ಕಾಗಿ ಮಳೆಗೆ ಕೇಳಿದೆ…….

ಯಾಕಪ್ಪ ಮಳೆರಾಯ…..

ಕೊಬ್ಬು ಜಾಸ್ತಿಯಾಯ್ತ ನಿನಗೆ…..

ಇಷ್ಟ ಬಂದಾಗ ಎಲ್ಲೆಂದರಲ್ಲಿ ಮಳೆ ಸುರಿಸಿ ಪ್ರವಾಹ ಸೃಷ್ಟಿಸಿ ನಮ್ಮ ಜನಗಳಿಗೆ ತೊಂದರೆ ಕೊಡುತ್ತಿರುವೆ,

ಬೇಸರವಾದಾಗ ಈ ಕಡೆ ವರ್ಷಗಟ್ಟಲೆ ತಲೆ ಹಾಕುವುದಿಲ್ಲ………

ನೀನೇನು ರಾಜಕಾರಣಿಯೇ,
ಕುಡುಕನೇ,
ಹುಚ್ಚನೇ……..

ಒಂದಷ್ಟು ಜವಾಬ್ದಾರಿ ಬೇಡವೇ ?

ತಲತಲಾಂತರದಿಂದ ಅಣ್ಣ ತಮ್ಮಂದಿರಾದ ನೀನು, ಚಳಿ, ಗಾಳಿ, ಬಿಸಿಲು ಕಾಲಕಾಲಕ್ಕೆ ತಕ್ಕಂತೆ ಜವಾಬ್ದಾರಿ ನಿರ್ವಹಿಸುತ್ತಿದ್ದವರು ಈಗೇನು ನಿಮಗೆ ದಾಡಿ……

ಅವನು ಚಳಿ ಇದ್ದಕ್ಕಿದ್ದಂತೆ ನಡುಗಿಸಿಬಿಡುತ್ತಾನೆ. ಮೀಟರ್ ಲೆಕ್ಕದಲ್ಲಿ ಹೇಳುವುದಾದರೆ ಮೈನಸ್ ಡಿಗ್ರಿಗೆ ಇಳಿದು ಬಿಡುತ್ತಾನೆ. ಶೀತಗಾಳಿಗೆ ಎಷ್ಟೋ ಜನ ಬೀದಿ ಹೆಣವಾಗುತ್ತಾರೆ. ಏನೋ ಕೆಲವರು ಕಾಫಿ ಟೀ ಎಣ್ಣೆ ಹೊಡೆದು ಮೈ ಬೆಚ್ಚಗೆ ಮಾಡಿಕೊಂಡು ಮತ್ತು ಬೆಂಕಿ ಕಾಯಿಸಿಕೊಂಡು ಸ್ವಲ್ಪ ಸುಧಾರಿಸಿಕೊಳ್ಳುತ್ತಾರೆ. ಬಡವರ ಪಾಡೇನು ?…….

ಆ ಬೇಸಿಗೆಯವನು ಈಗೀಗ ಬೆಂಕಿಯುಗುಳಿ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ಕೆಲವರು ಸತ್ತೇ ಹೋಗುತ್ತಾರೆ. ಉಳ್ಳವರು ಹೇಗೋ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಅಡಗಿ ಅವನನ್ನು ದೂರ ಇಡುತ್ತಾರೆ. ಇಲ್ಲದವರ ಗತಿ ಏನು ?

ಮಳೆರಾಯ ನಿನ್ನದು ಅತಿಯಾಯಿತು. ನೀನಿರೋದು ನಮ್ಮನ್ನು ಬದುಕಿಸಲಿಕ್ಕೋ ಸಾಯಿಸಲಿಕ್ಕೋ…..

ವರುಣ ದೇವ – ಜೀವಜಲ ಎಂದು ನಿನ್ನನ್ನು ದೇವರಂತೆ ಗೌರವಿಸಿ ಪೂಜೆ ಮಾಡಿದರೆ ಹೀಗಾ ಮಾಡುವುದು…..

ಜನ ಜಾನುವಾರು ಮನೆ ಮಠ ಬೆಳೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿರುವೆಯಲ್ಲ ನಿನಗೆ ಮಾನ ಮರ್ಯಾದೆ ಇದೆಯಾ……

ನಿನಗೆ ಶಕ್ತಿ ಇದೆ ಎಂದ ಮಾತ್ರಕ್ಕೆ ಪಾಪ ಮುಗ್ಧ ಅಸಹಾಯಕ ಜನರನ್ನು ಹೀಗಾ ಭಯಪಡಿಸುವುದು…….

ನಾಚಿಕೆಯಾಗಬೇಕು ನಿನಗೆ ಮಳೆರಾಯ. ಶೇಮ್ ಶೇಮ್ ಶೇಮ್…….

ಅದಕ್ಕೆಮಳೆರಾಯ ಸಹ ಉತ್ತರ ಕೊಟ್ಟಿದ್ದಾನೆ, ದಯವಿಟ್ಟು ಗಮನಿಸಿ ………….

” ಅಯ್ಯಾ ಮನುಜ, ದಯವಿಟ್ಟು ನಿಲ್ಲಿಸು ನಿನ್ನ ಬೈಗುಳ……… ನಾನು ಕೇಳಲಾರೆ…….
ನಿಜ ನನ್ನಿಂದ ನಿಮಗೆ ಬಹಳ ತೊಂದರೆಯಾಗುತ್ತಿದೆ. ಅದು ನನಗೂ ಅರ್ಥವಾಗುತ್ತಿದೆ. ಆದರೆ ಏನು ಮಾಡಲಿ ನಾನು ಅಸಹಾಯಕ……..

ಅದಕ್ಕೆ ಕಾರಣ ಮಾತ್ರ ನೀವೇ……..

ನಾನು ನನ್ನ ಮೂಲ ಗುಣ ಸ್ವಭಾವದಂತೆ ಹುಟ್ಟಿನಿಂದಲೂ ಶತಶತಮಾನಗಳ ಕಾಲ ವರ್ತಿಸುತ್ತಿದ್ದೆ. ಕೆಲವೊಮ್ಮೆ ಹುಷಾರಿಲ್ಲದಿದ್ದಾಗ ಮಾತ್ರ ಒಂದಷ್ಟು ವ್ಯತ್ಯಾಸವಾಗುತ್ತಿತ್ತು…..

ದಟ್ಟ ಕಾಡುಗಳು, ಗಿರಿ ಶಿಖರಗಳು, ಬಯಲು ಮರುಭೂಮಿಗಳು, ಹಿಮಾಚ್ಛಾದಿತ ಪ್ರದೇಶಗಳು ಮುಂತಾದ ವೈವಿಧ್ಯಮಯ ಸೃಷ್ಟಿಯಲ್ಲಿ ನಾನು ನನ್ನ ಜವಾಬ್ದಾರಿಯನ್ನು ಸರಿಯಾಗಿಯೇ ನಿರ್ವಹಿಸುತ್ತಿದ್ದೆ. ಬೆಟ್ಟಗಳ ಮೇಲೆ ನಿತ್ಯ ಹರಿದ್ವರ್ಣದ ಕಾಡುಗಳ ಮೇಲೆ ನಾನು ಚಲಿಸುವಾಗ ಸಂತೋಷದಿಂದ ಮಳೆ ಸುರಿಸುತ್ತಿದ್ದೆ. ಅಲ್ಲಿಂದ ಹರಿದು ನದಿ ಕಣಿವೆಗಳಲ್ಲಿ ಸಾಗಿ ಅಲ್ಲಲ್ಲಿ ಒಟ್ಟಾಗಿ ಸೇರಿ ಸಾಗುವಾಗ ಕೆರೆ ಕುಂಟೆ ಬಾವಿಗಳನ್ನು ಒಳಗೊಳಗೆ ತುಂಬಿಸಿ ಸಾಗರದ ಮಡಿಲು ಸೇರುತ್ತಾ ಆನಂದದಿಂದ ಇದ್ದೆ‌…….

ಅಲ್ಲಿಂದ ಮತ್ತೆ ಆವಿಯಾಗಿ ಮೇಲೆ ಹಾರಿ ಮೋಡವಾಗಿ ಚಲಿಸುತ್ತಾ ನಿತ್ಯ ಕರ್ಮಗಳನ್ನು ಮಾಡುತ್ತಿದ್ದೆ. ನೀನು ಕೂಡ ನಾನು ಹರಿಯುವ ಎರಡೂ ಬದಿಯಲ್ಲಿ ಎತ್ತರದ ಅನುಕೂಲಕರ ಪ್ರದೇಶದಲ್ಲಿ ವಾಸಿಸುತ್ತಾ ಆಹಾರಕ್ಕಾಗಿ ಕೃಷಿ ಮಾಡುತ್ತಾ ಜಾನುವಾರುಗಳೊಂದಿಗೆ ಆರಾಮವಾಗಿ ಇದ್ದೆ. ನಾನು ಕೆಲವೊಮ್ಮೆ ಬರುವುದು ತಡವಾದರೂ ಅಥವಾ ಒತ್ತಡಕ್ಕೆ ಒಳಗಾಗಿ ಹೆಚ್ಚು ಸುರಿಸಿದರೂ ನಿಮಗೆ ಅಂತಹ ದೊಡ್ಡ ತೊಂದರೆಯೇನು ಆಗುತ್ತಿರಲಿಲ್ಲ…….

ಯಾಕೋ ಬರಬರುತ್ತಾ ನಿಮಗೆ ದುರಾಸೆ ಹೆಚ್ಚಾಯಿತೋ ಅಥವಾ ನಿಮ್ಮ ಸಂಖ್ಯೆ ಜಾಸ್ತಿಯಾಗಿ ನಿಮಗೆ ಅನಿವಾರ್ಯವಾಯಿತೋ ಗೊತ್ತಿಲ್ಲ. ಆದರೆ ನೀವೇ ನನ್ನ ಮೇಲೆ ದೌರ್ಜನ್ಯ ಮಾಡಲು ಪ್ರಾರಂಭಿಸಿದಿರಿ. ನಿಮ್ಮ ಅನುಕೂಲಕ್ಕಾಗಿ ನನ್ನ ಸಹಜ ಸ್ವಾಭಾವಿಕ ಹರಿವಿಗೆ ಅಡ್ಡಗಾಲು ಹಾಕಿ ಜಲಾಶಯ ನಿರ್ಮಿಸಿ ನನಗೆ ತೊಂದರೆ ಕೊಟ್ಟಿರಿ. ಮಾನಸಿಕ ಹಿಂಸೆ ನೀಡಿದಿರಿ…..

ಅದಕ್ಕಿಂತ ಹಿಂಸೆಯಾದದ್ದು ಎಂದರೆ ನನ್ನ ನರನಾಡಿಯಂತಿದ್ದ ನಾನು ಹನಿಯುದುರಿಸಲು ನನ್ನಲ್ಲಿ ಉತ್ಸಾಹ ತುಂಬಿಸುತ್ತಿದ್ದ ಬೆಟ್ಟ ಗುಡ್ಡ ಕಾಡುಗಳನ್ನು ನೀವು ಕ್ರಮೇಣ ನಾಶಮಾಡುತ್ತಾ ಬಂದಿರಿ, ಅದು ನನ್ನ ಹೃದಯ ಭಾಗಕ್ಕೇ ಚಾಕುವಿನಿಂದ ಇರಿದಂತಾಯಿತು…..

ಕಾರ್ಖಾನೆಗಳ – ವಾಹನಗಳ – ಕಟ್ಟಡಗಳ ದೂಳು ಹೊಗೆ ಎಲ್ಲವೂ ಸೇರಿ ಇಡೀ ನಮ್ಮ ಸಂಸಾರದ ವಾತಾವರಣವನ್ನೇ ಹದಗೆಡಿಸಿಬಿಟ್ಟಿರಿ. ಇದು ನಮ್ಮ ಕುಟುಂಬದ ಅಸಹನೆಗೆ ಕಾರಣವಾಯಿತು. ಇದರಿಂದ ಆಗಾಗ ಘರ್ಷಣೆಗಳು, ವಿಕೋಪಗಳು ಪ್ರಾರಂಭವಾದವು……

ನಾನು ಹರಿಯುವ ಜಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀವು ವಾಸಿಸುತ್ತಾ ನೆಮ್ಮದಿಯಾಗಿರದೆ ಯಾರ ಮಾತಿಗೋ ಕಿವಿಗೊಟ್ಟು ನನ್ನ ಅನುಮತಿ ಇಲ್ಲದೆ ನನ್ನ ಮನಸ್ಸಿಗೆ ವಿರುದ್ದವಾಗಿ ಎತ್ತ ಕಡೆ ಬೇಕೋ ಅತ್ತ ಕಡೆ ನನ್ನನ್ನು ತಿರುಗಿಸತೊಡಗಿದಿರಿ. ಆಗಿನಿಂದ ನನ್ನ ಮಾನಸಿಕ ಸ್ಥಿತಿ ಸರಿಯಿಲ್ಲ. ನನ್ನ ಮನಸ್ಸು ನನ್ನ ನಿಯಂತ್ರಣದಲ್ಲಿ ಇಲ್ಲ……

ನಾನು ಚಲಿಸುವ ದಾರಿಗಳನ್ನೆಲ್ಲಾ ಮುಚ್ಚಿ ರಸ್ತೆ, ಸೇತುವೆ, ಮೈದಾನ ಕಟ್ಟಡಗಳನ್ನು ನಿರ್ಮಿಸಿ ನನಗೆ ಅವಮಾನ ಮಾಡಿರುವಿರಿ……

ಒಮ್ಮೊಮ್ಮೆ ಈ ಕಡೆ ತಲೆ ಹಾಕಲೇ ಬಾರದು ಎನಿಸುತ್ತದೆ. ಆದರೂ ನಿಮ್ಮ ಗೋಳು ನೋಡದೆ ಬರುತ್ತೇನೆ. ಇಲ್ಲಿ ಬಂದಾಗ ಬರಿದಾದ ಬೆಟ್ಟ ಗುಡ್ಡ ಕಾಡು ನೋಡಿ ನನ್ನ ಹುಚ್ಚು ಕೆರಳಿ ಮನಸ್ಸು ಉದ್ವೇಗದಿಂದ ಎಲ್ಲೆಂದರಲ್ಲಿ ಮಳೆ ಸುರಿಸಿ ಬಿಡುತ್ತೇನೆ. ಈ ಖಾಯಿಲೆ ಏನೇ ಮಾಡಿದರೂ ವಾಸಿಯಾಗುತ್ತಿಲ್ಲ…..

ಕಾರಣ ಅದಕ್ಕೆ ಔಷಧಿ ನೀಡಬೇಕಾದ ನೀವು ನನ್ನನ್ನು ನಿರ್ಲಕ್ಷಿಸಿ ಮತ್ತಷ್ಟು ಘಾಸಿ ಮಾಡುತ್ತಿರುವಿರಿ. ಈಗ ನಿಮಗೆ ತೊಂದರೆಯಾದಾಗ ನನ್ನನ್ನು ಶಪಿಸಿ ಬಾಯಿ ಬಡಿದುಕೊಳ್ಳುತ್ತಿರುವಿರಿ……

ಏ ಮಾನವ,
ದಯವಿಟ್ಟು ಇನ್ನಾದರೂ ತಾಳ್ಮೆಯಿಂದ ಯೋಚಿಸಿ ನನಗೆ ತೊಂದರೆ ಕೊಡುವುದನ್ನು ನಿಲ್ಲಿಸಿರಿ. ನನ್ನ ಆರೋಗ್ಯ ಸುಧಾರಿಸಲು ಅವಕಾಶ ಮಾಡಿಕೊಡಿ. ಆಗ ನನ್ನಿಂದ ನಿಮಗೆ ಹೆಚ್ಚಿನ ತೊಂದರೆ ಇರುವುದಿಲ್ಲ. ಇಲ್ಲದಿದ್ದರೆ ನನ್ನ ಮಾನಸಿಕ ರೋಗ ಉಲ್ಬಣವಾಗಿ ಸಂಪೂರ್ಣ ಹುಚ್ಚು ಹಿಡಿಯಬಹುದು. ಆಗ ಆಗುವ ಅನಾಹುತಕ್ಕೆ ನಾನು ಜವಾಬ್ದಾರನಲ್ಲ.
ದಯವಿಟ್ಟು ನನ್ನನ್ನು ಕ್ಷಮಿಸು…….”

ಇದನ್ನು ಕೇಳಿ ಮನುಷ್ಯ ಎಲ್ಲಾ ಮುಚ್ಚಿಕೊಂಡು, ಬಾಯಿ ತೆರದು ಲಭಲಭಲಭ ಅಂತ ಕಿರುಚಿಕೊಂಡು ಓಡತೊಡಗಿದ……..

ಸರ್ಕಾರ ಸ್ಥಾಪಿಸಲು ಹರ ಸಾಹಸ ಮಾಡುವ ರಾಜಕಾರಣಿಗಳು, ತನ್ನ ದುರಾಸೆಗೆ ಪ್ರಕೃತಿಯ ಮೇಲೆಯೇ ದಾಳಿ ಮಾಡುವ ಜನಗಳು……

ಅಬ್ಬಾ ಯಾರಿಗೆ ಹೇಳುವುದು ಪ್ರವಾಹದಿಂದ ನರಳುತ್ತಿರುವ ನಮ್ಮ ಜನಗಳ ಗೋಳನ್ನು………. ಛೆ….ಛೆ……

Klive Special Article ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...