Uttaradi Math ಹೊಳೆಹೊನ್ನೂರು ಕ್ಷೇತ್ರದಲ್ಲಿ ಸನ್ನಿಹಿತರಾಗಿರುವ ಮಹಾಮಹಿಮರಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದರು ನಮ್ಮಲ್ಲರಿಗೂ ಸತ್ಯವಾದ ಧರ್ಮವನ್ನು ಪರಿಪಾಲನೆ ಮಾಡುವ ಆಸಕ್ತಿ ಮತ್ತು ಶಕ್ತಿಯನ್ನು ನೀಡಲಿ ಎಂದು ಉತ್ತರಾದಿ ಮಠಾಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಪ್ರಾರ್ಥನೆ ಮಾಡಿದರು.
ಮಂಗಳವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ಪುರಪ್ರವೇಶದ ಬಳಿಕ ನಡೆದ ಸಭೆಯಲ್ಲಿ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು.
ನಿಷ್ಕಾಮ ಭಕ್ತಿಯಿಂದ ಭಗವಂತನ ಪ್ರೀತಿಗಾಗಿ ಮಾಡುವ ಧರ್ಮವೇ ಸತ್ಯವಾದ ಧರ್ಮ ಎನಿಸುತ್ತದೆ. ಇಂತಹ ಧರ್ಮದ ಪರಿಪಾಲನೆಯಿಂದ ನಮಗೆ ಮೋಕ್ಷದಂತಹ ಮಹಾಲವೂ ಸಾಧ್ಯವಿದೆ. ಹೀಗಾಗಿ ಮಾನವರಾಗಿ ನಾವು ಸತ್ಯವಾದ ಧರ್ಮದ ಪಾಲನೆ ಮಾಡಬೇಕು ಎಂದರು.
2014ರಲ್ಲೇ ಹೊಳೆಹೊನ್ನೂರಿನಲ್ಲಿ ಚಾತುರ್ಮಾಸ್ಯ ಕೈಗೊಳ್ಳಬೇಕೆಂಬ ಸಂಕಲ್ಪ ಮಾಡಿದ್ದೆವು. ಆದರೆ, ಆಗ ನಿವಾರ್ಯವಾಗಿ ಉಡುಪಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿದ್ದೆವು. ಈ ನಡುವಿನ ಅಂತರದಲ್ಲಿ ಶ್ರೀ ಸತ್ಯಧರ್ಮರ ತೀರ್ಥರ ಗುರುಗಳಾದ ಶ್ರೀ ಸತ್ಯವರರ ಸನ್ನಿಧಾನದಲ್ಲಿ ಚಾತುರ್ಮಾಸ್ಯ ಮುಗಿಸಿದ್ದೇವೆ. ತಮ್ಮ ಗುರುಗಳ ಬಳಿ ಚಾತುರ್ಮಾಸ್ಯ ಹಾಗೂ ಅವರ ಆರಾಧನೆ ಮುಗಿಸಿ ಇಲ್ಲಿಗೆ ಬರಬೇಕೆಂಬ ಅಪೇಕ್ಷೆ ಸತ್ಯಧರ್ಮರ ತೀರ್ಥರದ್ದು ಇರಬಹುದು. ಅದಕ್ಕಾಗಿಯೇ 2014ರ ಚಾತುರ್ಮಾಸ್ಯ 2023ರಲ್ಲಿ ನಡೆದಿದೆ. ಇದು ಕೂಡ ಅವರ ಸಂಕಲ್ಪವೇ ಎಂದರು.
ಈ ಹಿಂದೆ ನಮ್ಮ ಗುರುಗಳು ಶಿವಮೊಗ್ಗದಲ್ಲಿ ಚಾತುರ್ಮಾಸ್ಯ ಕೈಗೊಂಡಾಗ ಅವರ ಜೊತೆ ಒಮ್ಮೆ ಹಾಗೂ ಕೂಡಲಿಯಲ್ಲಿ ನಾವು ಚಾತುರ್ಮಾಸ್ಯ ಕೈಗೊಂಡಾಗ ಮತ್ತೊಮ್ಮೆ ಶ್ರೀ ಸತ್ಯಧರ್ಮರ ಆರಾಧನೆಯಲ್ಲಿ ಭಾಗವಹಿಸಲು ಅವಕಾಶ ಒದಗಿಬಂದಿತ್ತು. ಇದೀಗ ಶ್ರೀ ಸತ್ಯಧರ್ಮರ ಸನ್ನಿಧಾನದಲ್ಲೇ ವ್ರತ ಕೈಗೊಂಡು ಅವರ ಆರಾಧನೆ 3ನೇ ಬಾರಿ ನೆರವೇರಿಸುವ ಮಹಾ ಭಾಗ್ಯ ಗುರುಗಳ ಅನುಗ್ರಹದಿಂದ ಒದಗಿ ಬಂದಿದೆ ಎಂದರು.
ಪಂಡಿತ ನವರತ್ನ ಶ್ರೀನಿವಾಸಾಚಾರ್ಯ ಮಾತನಾಡಿ, ಶ್ರೀ ಸತ್ಯಧರ್ಮ ತೀರ್ಥರು ಉತ್ತರಾದಿ ಮಠದ ಪರಂಪರೆಯಲ್ಲಿ 28ನೇಯವರು, ಶ್ರೀಮಠದಲ್ಲಿ 28ಪ್ರತಿಮೆಗಳಿವೆ. ಇದೀಗ ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯವೂ 28ನೇಯದ್ದು ಇಲ್ಲಿ ನಡೆಯುತ್ತಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಿಂದ ಶ್ರೀಗಳವರಿಗೆ ತಂದಿದ್ದ ಶೇಷವಸ್ತ್ರ ಹಾಗೂ ಮಂತ್ರಾಕ್ಷತೆಯನ್ನು ಸಮರ್ಪಿಸಲಾಯಿತು. ಪ್ರವಚನ ಮಂದಿರದ ನಿರ್ಮಾಣದ ಸಂಪೂರ್ಣ ಸೇವೆ ಮಾಡಿದ ಶ್ರೀನಾಥ ನಗರಗದ್ದೆ, ಅಲಂಕೃತ ವೇದಿಕೆಯ ನಿರ್ಮಾತೃ ಶಿವಮೊಗ್ಗದ ಗುರುರಾಜ್ ಕಟ್ಟಿ ಹಾಗೂ ಪೂಜಾ ಮಂದಿರ ನಿರ್ಮಾಣದ ನಿರ್ವಹಣೆ ಮಾಡಿದ ಬೆಂಗಳೂರಿನ ವರುಣ್ ಅವರನ್ನು ಸನ್ಮಾನಿಸಲಾಯಿತು.
Uttaradi Math ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಡೂರು ಮಧುಸೂಧನಾಚಾರ್ಯ, ಕಲ್ಲಾಪುರ ಜಯತೀರ್ಥಾಚಾರ್ಯ, ಕುಷ್ಟಗಿ ವಾಸುದೇವಮೂರ್ತಿ ಮೊದಲಾದವರಿದ್ದರು.