Chamber Of Commerce Shivamogga ವೃತ್ತಿಯ ಜತೆಯಲ್ಲಿ ಸಮಾಜಮುಖಿ ಸೇವೆಯು ತುಂಬಾ ಮುಖ್ಯ. ವೈದ್ಯರ ಸೇವೆಯು ಅಜರಾಮರ. ಜೀವ ಉಳಿಸುವ ಮಹಾತ್ಕಾರ್ಯ ನಡೆಸುವವರು ವೈದ್ಯರು ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ವಿ.ನಾಗರಾಜ್ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಷ್ಟದಲ್ಲಿ ಇರುವವರಿಗೆ ನೆರವಾಗುವ ಕೆಲಸವನ್ನು ಪ್ರತಿಯೊಬ್ಬರು ನಡೆಸಬೇಕು ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ವತಿಯಿಂದ ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಶರಣ್ಯ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಸೇವೆ ನೀಡುತ್ತಿರುವ ಸರಳ ವ್ಯಕ್ತಿ ಡಾ. ತಾನಾಜಿ ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
Chamber Of Commerce Shivamogga ಇದೇ ಸಂದರ್ಭದಲ್ಲಿ ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಎಸ್.ದತ್ತಾತ್ರಿ ಮಾತನಾಡಿ, ವೈದ್ಯರ ಸೇವೆ ಮತ್ತು ಕೊಡುಗೆಯನ್ನು ವಿಶೇಷವಾಗಿ ಗುರುತಿಸುವ ಕೆಲಸ ಆಗಬೇಕು. ವೈದ್ಯರ ಮೇಲೆ ಹಲ್ಲೆ ನಡೆಸುವುದು ಖಂಡನೀಯ.
ತಾನಾಜಿ ಅವರಂತಹ ವೈದ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಡಾ. ತಾನಾಜಿ ಮಾತನಾಡಿ, ಸೇವೆ ನಮ್ಮನ್ನು ಸದಾ ಕಾಪಾಡುತ್ತದೆ. ಆನರ ಪ್ರೀತಿ, ವಿಶ್ವಾಸ ನಮಗೆ ಶ್ರೀರಕ್ಷೆ. ವೈದ್ಯಕೀಯ ಸೇವೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿಯೂ ಕೈಲಾದ ಸೇವೆಯನ್ನು ಪ್ರಾಮಾಣಿಕವಾಗಿ ನಡೆಸುತ್ತೇನೆ ಎಂದು ತಿಳಿಸಿದರು.
ಕಾರ್ಯದರ್ಶಿ ಆರ್.ಎಸ್.ಗೋಪಾಲಕೃಷ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಲತಾ ರಮೇಶ್, ಮಾಜಿ ಅಧ್ಯಕ್ಷ ಜಿ.ವಿಜಯ್‌ಕುಮಾರ್, ಎಂ.ಎನ್.ವೆಂಕಟೇಶ್, ನಿಯೋಜಿತ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ವೆಂಕಟೇಶ್, ಧನರಾಜ್, ಮಲ್ಲಿಕಾರ್ಜುನ ಕಾನೂರು, ಮಾಜಿ ಅಧ್ಯಕ್ಷರು, ಸದಸ್ಯರು, ನಿರ್ದೇಶಕರು ಉಪಸ್ಥಿತರಿದ್ದರು.