DC Shivamogga ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ನೀರು, ರಸ್ತೆ, ವಿದ್ಯುತ್ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ 187 ನೇ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದರು.
ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ 150 ಪ್ಲಾಟ್‍ಗಳಿದ್ದು, ಇದಕ್ಕೆ ಸರಿಹೊಂದುವಂತೆ ಸಬ್ ಸ್ಟೇಷನ್ ನಿರ್ಮಿಸುವ ಸಂಬಂಧ ಮೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ಲೈನ್ ಅಸೆಸ್‍ಮೆಂಟ್ ಮಾಡಿ ಒಂದು ವಾರದ ಒಳಗೆ ವರದಿ ನೀಡುವಂತೆ ಸೂಚನೆ ನೀಡಿದರು.
DC Shivamogga ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವೈಜ್ಞಾನಿಕವಾಗಿ ಇ-ತ್ಯಾಜ್ಯ ನಿರ್ವಹಣೆಗಾಗಿ ಹಾಗೂ ಇ-ಮಾಲಿನ್ಯ ತಡೆಗಾಗಿ ನಗರದ ಹೊರವಲಯದಲ್ಲಿ 5 ಎಕರೆಯಷ್ಟು ಜಮೀನನ್ನು ಗುರುತಿಸಿ, ಅದನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಲೀಸ್ ಆಧಾರದಲ್ಲಿ ನೀಡಲು ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ದೇವಕಾತಿಕೊಪ್ಪದ ಕೈಗಾರಿಕಾ ಪ್ರದೇಶಕ್ಕೆ ಗ್ರಾಮೀಣ ನೀರು ಸರಬರಾಜು ಯೋಜನೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ನೀರು ಒದಗಿಸಲು ಯೋಜಿನೆ ರೂಪಿಸಲಾಗಿದ್ದು ಈ ಕುರಿತಾದ ಡಿಪಿಆರ್ ತಾಂತ್ರಿಕ ಪರಿಶೀಲನೆ ಹಂತದಲ್ಲಿದೆ ಎಂದು ತಿಳಿಸಿದರು.
ನಿದಿಗೆ ಕೈಗಾರಿಕಾ ಪ್ರದೇಶದಲ್ಲಿರುವ ಮೆ|| ಶಾಹಿ ಎಕ್ಸ್‍ಪೋರ್ಟ್ ಪ್ರೈ.ಲಿ ನಿಂದ ಮಾಲಿನ್ಯ ಉಂಟಾಗುತ್ತಿದ್ದು ಕೈಗಾರಿಕಾ ಪ್ರದೇಶದ ಘಟಕಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ಈಗಾಗಲೇ ನೋಟಿಸ್ ನೀಡಿರುತ್ತಾರೆ. ಆದರೂ ಮಾಲಿನ್ಯ ನಿಯಂತ್ರಣವಾಗಿಲ್ಲದ ಕಾರಣ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಮಾಲಿನ್ಯ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಗಾನೆ ಕೈಗಾರಿಕಾ ಪ್ರದೇಶ ಅಭಿವೃದ್ದಿಪಡಿಸುವ ಸಂಬಂಧ ಅನಧಿಕೃತ ಸಾಗುವಳಿ, ಜಮೀನು ಹಸ್ತಾಂತರ, ಕೋರ್ಟ್ ಪ್ರಕರಣಗಳು ಇತರೆ ಸಮಸ್ಯೆಗಳಿದ್ದು ಇದನ್ನು ಸರಿಪಡಿಸಲು ಎಸಿ, ತಹಶೀಲ್ದಾರ್, ಎಸ್‍ಎಲ್‍ಎಓ, ಕೆಐಎಡಿಬಿ ಅಧಿಕಾರಿ ಇತರರ ಒಂದು ಸಮಿತಿ ರಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಆಟೋ ಕಾಂಪ್ಲೆಕ್ಸ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಮಾತನಾಡಿ ಆಟೋ ಕಾಂಪ್ಲೆಕ್ಸ್ ಬಳಿ ವಾಹನ ಸಂದಣಿ ಹೆಚ್ಚಿದೆ. ಹಾಗೂ ಶೌಚಾಲಯದ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ತಾವು ಪಾಲಿಕೆ ಕಾರ್ಯಪಾಲಕ ಅಭಿಯಂತರರೊಂದಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು. ಹಾಗೂ ಆಟೋ ಕಾಂಪ್ಲೆಕ್ಸ್‍ನಲ್ಲಿ ಸ್ಥಳ ಗುರುತಿಸಿ ನೀಡಿದಲ್ಲಿ ಸುಲಭ ಶೌಚಾಲಯದ ವತಿಯಿಂದ ಶೌಚಾಲಯ ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಸಾಗರ ರಸ್ತೆ ಕೆಎಸ್‍ಎಸ್‍ಐಡಿಸಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಉಮೇಶ್ ಶಾಸ್ತ್ರಿ ಸಾಗರ ರಸ್ತೆ ಕೈಗಾರಿಕಾ ವಸಾಹತು ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು ಮಧ್ಯರಸ್ತೆಯಲ್ಲಿ ಒಂದು ವಾಹನ ಹೋಗುವುದು ಕಷ್ಟವಾಗಿದ್ದು ಇದನ್ನು ಸರಿಪಡಿಸಬೇಕೆಂದು ಕೋರಿದರು.
ಜಿಲ್ಲಾಧಿಕಾರಿಗಳು ಈ ಕುರಿತು ತಾವು ಭೇಟಿ ನೀಡಿ, ಎಸ್‍ಪಿಯವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಈಗಾಗಲೇ ಅನುಮೋದನೆ ಪಡೆದು ಹೆಚ್ಚುವರಿ ಮತ್ತು ಬದಲಿ ಉತ್ಪನ್ನ ತಯಾರಿಕೆಗಾಗಿ ಪ್ರಸ್ತಾವನೆ ಸಲ್ಲಿಸಿದ ಕೈಗಾರಿಕೆಗಳಿಗೆ ಮಾಲಿನ್ಯ ಮಂಡಳಿ ಎನ್‍ಓಸಿ ಪಡೆದು ಬದಲಾಯಿಸಲು ಅನುಮೋದನೆ ನೀಡಿದರು.
ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಾದ ಕುಡಿಯುವ ನೀರು(24*7) ಬೀದಿ ದೀಪಗಳು, ಚರಂಡಿ, ವಿದ್ಯುತ್, ಪಾರ್ಕಿಂಗ್ ಇತರೆ ಸೌಲಭ್ಯಗಳ ಕುರಿತಾದ ಕೈಗಾರಿಕೋದ್ಯಮಿಗಳ ಮನವಿ ಮತ್ತು ಅಹವಾಲುಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ನಾರಾಯಣ್, ಡಿಐಸಿ ಜಂಟಿ ನಿರ್ದೇಶಕ ಗಣೇಶ್, ಮಹಾನಗರಪಾಲಿಕೆ ಕಾ.ಅಭಿಯಂತರ ನಟೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರು, ಇತರೆ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಜರಿದ್ದರು.