Samanvaya Trust ವಿಧಾನಸಭೆ ಚುನಾವಣೆಯು ಮೇ 10ರಂದು ನಡೆಯಲಿದೆ. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಮತ ಚಲಾಯಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಡಿವೈಎಸ್‌ಪಿ ರೋಹನ್ ಜಗದೀಶ್ ಅವರು ಹೇಳಿದರು.
ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, 2023ರ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯು ಮತದಾನ ಪ್ರಮಾಣದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗಿಂತ ಹೆಚ್ಚಿರಬೇಕು. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಆಗಿರುವ ಯುವಮತದಾರರು ಮತದಾನ ಮಹತ್ವದ ಬಗ್ಗೆ ಅರಿವು ಹೊಂದಬೇಕು ಎಂದು ತಿಳಿಸಿದರು.
ಸಮನ್ವಯ ಟ್ರಸ್ಟ್ ಮತದಾನ ಜಾಗೃತಿ ವಿಷಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಕಳೆದ ಚುನಾವಣೆಯಲ್ಲಿಯು ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಮಾರ್ಗದರ್ಶನದಲ್ಲಿ ಮನೆ ಮನೆಗೂ ತೆರಳಿ ಮತದಾನದ ಜಾಗೃತಿ ಮೂಡಿಸಿದ್ದರು. ಇದರಿಂದ ಮತದಾನ ಪ್ರಮಾಣದಲ್ಲಿ ಹೆಚ್ಚಳ ಆಗಿತ್ತು. ಈ ಬಾರಿಯು ಸಮನ್ವಯ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ನಮ್ಮ ಸಂಸ್ಥೆಯು ಮತದಾನ ಜಾಗೃತಿ ವಿಷಯದಲ್ಲಿ ವಿಶೇಷ ಪ್ರಯತ್ನ ಮಾಡುತ್ತಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಗ್ರಾಮ ಗ್ರಾಮಗಳಲ್ಲಿ, ಕಾಲೇಜುಗಳಲ್ಲಿ ಮತದಾನ ಜಾಗೃತಿ ಮಾಡಲಿದ್ದಾರೆ. ನನ್ನ ಮತ ಮಾರಾಟಕ್ಕಿಲ್ಲ ಎಂಬ ವಿಷಯದ ಬಗ್ಗೆ ತಿಳವಳಿಕೆ ನೀಡಲಿದ್ದಾರೆ ಎಂದು ಹೇಳಿದರು.
Samanvaya Trust ಸಮನ್ವಯ ಟ್ರಸ್ಟ್ ಶಿವಮೊಗ್ಗ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದೆ. ಮೊದಲ ಸಲ ಮತದಾನದ ಹಕ್ಕು ಪಡೆದ ಪ್ರತಿ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡಲು ಮುಂದಾಗಬೇಕು. ಕುಟುಂಬದ ಎಲ್ಲ ಸದಸ್ಯರು ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ರಾಜೇಶ್ವರಿ, ಕಾಲೇಜಿನ ಪುರುಷೋತ್ತಮ್, ಸೋಮಶೇಖರ್, ಸಮನ್ವಯ ಟ್ರಸ್ಟ್ ಸ್ವಯಂ ಸೇವಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.