Voting ಯುವ ಮತದಾರರನ್ನು ಗುರುತಿಸಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಹಾಗೂ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಸ್ಥಳಗಳನ್ನು ಗುರುತಿಸಿ ವಿಶೇಷ ಮತದಾನ ಅರಿವು ಕಾರ್ಯಕ್ರಮ ಮಾಡುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಾ.03 ರಂದು ಮತದಾನ ಜಾಗೃತಿ ಮತ್ತು ಚುನಾವಣಾ ತಯಾರಿಕೆ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ಮತದಾನ ಪ್ರಮಾಣ ಹೆಚ್ಚಳದ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಶೇಷ ತರಬೇತಿ ನೀಡಿದ ಅವರು, ವಿಶೇಷವಾಗಿ ಮತಗಟ್ಟೆ ಮಟ್ಟದಲ್ಲಿ ಮತದಾನ ಅರಿವು ಮೂಡಿಸಲು ತಂಡಗಳನ್ನು ರಚಿಸಿ ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಚುನಾವಣಾ ಜಾಗೃತಿ ಬಗ್ಗೆ ಶಾಲಾ, ಕಾಲೇಜು ಹಂತದಲ್ಲಿ ಯುವ ಮತದಾರರನ್ನು ಗುರುತಿಸಿ ಚುನಾವಣೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಶಾಲಾ ಹಾಗೂ ಕಾಲೇಜುಗಳಲ್ಲಿ ಸ್ಥಾಪಿಸಲಾಗಿರುವ ಎಲ್ಲ ಎಲೆಕ್ಟೊರಲ್ ಲಿಟರಸಿ ಕ್ಲಬ್ ಗಳಲ್ಲಿ ಮತದಾನ ಅರಿವು ಮೂಡಿಸುವ ಕಾರ್ಯವಾಗಬೇಕು. ಎಲ್ಲ ತಾಲ್ಲೂಕುಗಳ ಇಓ, ತಹಶೀಲ್ದಾರ್, ಬಿಇಓ ಗಳು ಸ್ವೀಪ್ ಸಮಿತಿ ಮೂಲಕ ಮತದಾನ ಜಾಗೃತಿ ವೇದಿಕೆಗಳನ್ನು ಸಕ್ರಿಯಗೊಳಿಸಿ, ಜನರಲ್ಲಿ ಮತದಾನದ ಅರಿವನ್ನು ಮೂಡಿಸಿ ಹೆಚ್ಚು ಮತದಾನವಾಗುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು.
ಎಲ್ಲಾ ತಾಲ್ಲೂಕುಗಳಲ್ಲಿ ಇವಿಎಂ/ವಿವಿ ಪ್ಯಾಟ್ ಮತದಾನ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯನ್ನು ಭಾಗವಹಿಸಿ ಮತದಾನ ಯಂತ್ರದ ಬಳಕೆ ಬಗ್ಗೆ ತಿಳಿದುಕೊಳ್ಳುವಂತೆ ಅವರು ಕೋರಿದರು.
Voting ಇದೇ ವೇಳೆ ಭಾರತ ಚುನಾವಣಾ ಆಯೋಗ ಹೊರತಂದಿರುವ 2023 ರ ಚುನಾವಣೆ ಮತದಾನ ಜಾಗೃತಿ ಭಿತ್ತಿಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದರ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಇಓ ಗಳು, ಡಿಡಿಪಿಐ, ಸ್ವೀಪ್ ನೋಡಲ್ ಅಧಿಕಾರಿಗಳು, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.