ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣಕ್ಕೆ ಇಡೀ ದೇಶಕ್ಕೇ ಮಾದರಿ ರಾಜಕಾರಣಿಯಾಗಿದ್ದ ಶಾಂತವೇರಿ ಗೋಪಾಲಗೌಡರ ಹೆಸರು ಇಡಬೇಕೆಂದು ಒತ್ತಾಯಿಸಿ ನವಕರ್ನಾಟಕ ನಿರ್ಮಾಣ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಹೆಸರಿಡಬೇಕೆಂದು ಕೆಲವರು, ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಹೆಸರಿಡಬೇಕೆಂದು ಹಲವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂದು ವಿಶ್ವಮಾನ್ಯರಾಗಿದ್ದಾರೆ.
ರಾಷ್ಟ್ರಕವಿ ಕುವೆಂಪು ಹಾಗೂ ಎಸ್.ಬಂಗಾರಪ್ಪ ಅವರ ಹೆಸರುಗಳೂ ದೇಶಾದ್ಯಂತ ಪ್ರಚಲಿತದಲ್ಲಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ರಾಜಕಾರಣಿಗಳು ಎಂದರೆ ಭ್ರಷ್ಟರು, ಸ್ವಜನ ಪಕ್ಷಪಾತಿಗಳು, ಸುಳ್ಳರು, ಸ್ವಾರ್ಥಿಗಳು ಎಂಬ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದ ಶಾಂತವೇರಿ ಗೋಪಾಲಗೌಡರು ಗೇಣಿ ಪದ್ಧತಿ ವಿರುದ್ಧ ಹೋರಾಟ ನಡೆಸಿ, ಉಳುವವನೇ ಭೂಮಿ ಒಡೆಯ ಕಾನೂನು ಜಾರಿಯಾಗಲು ಪ್ರಮುಖ ಪಾತ್ರ ವಹಿಸಿದ್ದರು. ಆ ಮೂಲಕ ದಲಿತರು, ಹಿಂದುಳಿದವರು, ನಿಜವಾದ ಶ್ರಮಜೀವಿಗಳು ಭೂಮಿಯ ಮಾಲೀಕರಾಗಲು ಕಾರಣರಾದವರು.
ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ಬಾರಿ ಶಾಸಕರಾಗಿ, ಜಾತ್ಯತೀತವಾಗಿ ತಮ್ಮ ಸಿದ್ಧಾಂತಗಳಿಗೆ ಬದ್ಧವಾಗಿ, ಸ್ವಾರ್ಥರಹಿತ ಕೆಲಸ ಮಾಡಿ, ಇಡೀ ದೇಶಕ್ಕೇ ಮಾದರಿ ರಾಜಕಾರಣಿಯಾಗಿದ್ದಾರೆ. ಇತ್ತೀಚಿಗೆ ರಾಜಕಾರಣದಲ್ಲಿ ಇಂತಹ ಸಿದ್ಧಾಂತ ಕಣ್ಮರೆಯಾಗುತ್ತಿದೆ. ರಾಜಕಾರಣದಲ್ಲಿ ಪ್ರಾಮಾಣಿಕ, ನಿಸ್ವಾರ್ಥ ರಾಜಕಾರಣಿಗಳು ಇದ್ದರು. ಅವರು ಶಿವಮೊಗ್ಗ ಜಿಲ್ಲೆಯವರೇ ಆಗಿದ್ದರು ಎನ್ನುವುದನ್ನು ಮುಂದಿನ ಪೀಳಿಗೆಗೆ ತಿಳಿಸುವ ಅನಿವಾರ್ಯತೆ ಇದೆ. ಹಾಗಾಗಿ ಶಾಂತವೇರಿ ಗೋಪಾಲಗೌಡರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಮನವಿದಾರರು ಒತ್ತಾಯಿಸಿದರು.
ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಂಡ ಪ್ರತಿ ರೈತರಿಗೂ ನಿವೇಶನ ಹಾಗೂ ಉದ್ಯೋಗ ನೀಡಬೇಕು. ವಿಮಾನ ನಿಲ್ದಾಣದಲ್ಲಿ ಕೆಳ ಹಂತದ ಹುದ್ದೆಯಿಂದ ಉನ್ನತ ಹುದ್ದೆಯವರೆಗೂ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನವಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್‍ಗೌಡ, ಜಿಲ್ಲಾಧ್ಯಕ್ಷ ಸಂತೋಷ್, ಪ್ರಮುಖರಾದ ನಯನ ರಾಜು, ಪುಷ್ಪ, ಫಯಾಜ್, ರಾಜು ಗುಜ್ಜರ್, ನಾಗರಾಜ್, ರಾಜುನಾಯ್ಕ, ವೀರೇಶ್, ಮಂಜೇಗೌಡ್ರು ಡಿ., ವಾಣಿ ಮಂಜೇಗೌಡ್ರು, ಮಂಜು ಟಿ.ಆರ್., ಶಿವಯೋಗಿ, ಪ್ರವೀಣ್ ಸೇರಿದಂತೆ ಹಲವರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.