ದಾವಣಗೆರೆ: ತರ,ತಮ, ಉಚ್ಚ, ನೀಚ, ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಕೂಡಿ ಬಾಳುವುದು ಹಾಗೂ ಹಂಚಿ ತಿನ್ನುವುದು ಇವು ನಮ್ಮ ಭಾರತೀಯ ಸಂಸ್ಕೃತಿಯ ಮೂಲ ತತ್ವವಾಗಿದ್ದು ಸಾಮೂಹಿಕವಾಗಿ ಆಚರಿಸುವ ಧಾರ್ಮಿಕ ಕಾರ್ಯಕ್ರಮಗಳು ಇದಕ್ಕೆ ಪೂರಕವಾಗಿವೆ ಎಂದು ಕಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ್ ಅಭಿಪ್ರಾಯ ಪಟ್ಟರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದೇವನಗರಿ ತಾಲ್ಲೂಕು ಹಾಗು ಕುಕ್ಕುವಾಡ ಮತ್ತು ಕೈದಾಳೆ ವಲಯಗಳ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಕುಕ್ಕವಾಡದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಏರ್ಪಾಡಾಗಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭೆಯ ಪ್ರಧಾನ ಉಪನ್ಯಾಸಕರಾಗಿ ಮಾತನಾಡುತ್ತಾ ಸತ್ಕಾರ್ಯಗಳಲ್ಲಿ ಶ್ರದ್ಧೆ ಹಾಗೂ ಪ್ರತಿಫಲ ಅಪೇಕ್ಷೆ ಇಲ್ಲದ ಭಗವದ್ಭಕ್ತಿ ಇವು ಎರಡು ಆಧ್ಯಾತ್ಮಿಕ ಕಾರ್ಯಗಳಲ್ಲಿ ಅತ್ಯವಶ್ಯವಾಗಿದ್ದು ಸಾಮೂಹಿಕವಾಗಿ ಮಾಡುವ ಇಂತಹ ಕಾರ್ಯಕ್ರಮಗಳಿಂದ ನೂರಾರು ಮನಸ್ಸುಗಳು ಒಂದಾಗಿ “ನಾನು” ಎನ್ನುವ ಅಹಂ ಭಾವ ದೂರಾಗಿ “ನಾವು” ಎನ್ನುವ ಹೃದಯ ವೈಶಾಲ್ಯ ಸಾಕಾರವಾಗುತ್ತದೆ, ಭಾರತದ ಅಭಿವೃದ್ಧಿಯು ಗ್ರಾಮೀಣಾಭಿವೃದ್ಧಿಯನ್ನು ಅವಲಂಬಿಸಿದ್ದು ಗ್ರಾಮಗಳಲ್ಲಿನ ಸಾಮಾಜಿಕ ಸಾಮರಸ್ಯಕ್ಕೆ ಸಾಮೂಹಿಕವಾದ ಶ್ರದ್ಧಾ ಕಾರ್ಯಗಳು ಅವಶ್ಯಕ ಎಂದು ಅಭಿಪ್ರಾಯ ಪಟ್ಟ ಎಚ್. ಬಿ. ಮಂಜುನಾಥ್ ಸ್ತ್ರೀಯರಲ್ಲಿ ಧಾರಣ ಶಕ್ತಿಯು ಪುರುಷರಿಗಿಂತ ಅಧಿಕವಾಗಿದ್ದು ಮಹಿಳೆಯರ ಚಿಂತನೆಗಳನ್ನು ಉಪೇಕ್ಷಿಸದೆ ಸಮಾನ ಅವಕಾಶಗಳನ್ನು ಒದಗಿಸಿದಲ್ಲಿ ಕೇವಲ ಕೌಟುಂಬಿಕ ಅಭಿವೃದ್ಧಿ ಅಷ್ಟೇ ಅಲ್ಲ ನಿಜವಾದ ಸಾಮಾಜಿಕ ಅಭಿವೃದ್ಧಿಯೂ ಸಾಧ್ಯ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ಡಾಡಿದ ಸಂಸ್ಥೆಯ ಯೋಜನಾಧಿಕಾರಿ ಬಾಬುರವರು ಹೃದಯ ಶ್ರೀಮಂತಿಕೆ ಇದ್ದಲ್ಲಿ ಎಲ್ಲ ಕಾರ್ಯಗಳೂ ಯಶಸ್ವಿಯಾಗುತ್ತವೆ, ಶ್ರದ್ಧೆ ಮತ್ತು ಭಕ್ತಿ ಇರುವವರ ಸಂಕಲ್ಪಗಳನ್ನು ಭಗವಂತ ಈಡೇರಿಸುತ್ತಾನೆ, ಆರ್ಥಿಕ ಭದ್ರತೆ, ಸ್ವಾವಲಂಬನೆ ಮೂಲಕ ವ್ಯಕ್ತಿ, ಕುಟುಂಬ ಮತ್ತು ಗ್ರಾಮಗಳ ಅಭಿವೃದ್ಧಿಯು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಕುಕವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಕೆ. ವೈ.ಮಂಜುಳಾರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ಬೆಸ್ಕಾಂನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುಧೀರ್ ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಕ್ಷ್ಮಿ ದೇವಿ, ಕುಕ್ಕುವಾಡ ಗ್ರಾಮದ ಗಣ್ಯರಾದ ಡಿ. ಮಲ್ಲೇಶಪ್ಪ, ಜಿ.ಎಂ.ರುದ್ರೇಗೌಡ, ಕೆ. ಟಿ. ಮಹಾಂತಪ್ಪ, ಒಕ್ಕೂಟದ ಅಧ್ಯಕ್ಷೆ ಎ. ಪಿ. ಲತಾ ಮುಂತಾದವರು ಮಾತುಗಳ ನಾಡಿದರು. ಉಪನ್ಯಾಸಕರಾದ ಕೆ. ಎಂ. ಕುಮಾರಸ್ವಾಮಿ, ಜಿಲ್ಲಾ ಜನಾಜಾಗ್ರತಿ ವೇದಿಕೆ ಸದಸ್ಯರಾದ ಮಲ್ಲಿಕಾರ್ಜುನ ವೈ.ಟಿ ವೈದ್ಯರಾದ ಪರಮಶಿವಯ್ಯ, ಆನಂದಪ್ಪ, ಶಂಕರ್ ಮಹಾದೇವಪ್ಪ, ಕೈದಾಳೆ ಮಲ್ಲಿಕಾರ್ಜುನಪ್ಪ, ನಾಗರಾಜ್, ಕಾಂತೇಶ್, ರೂಪ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಭರತ್ ಮಾಡಿದರೆ ಪ್ರಾರ್ಥನೆಯನ್ನು ಅನಿತಾ ಹಾಡಿದರು, ಶಿಕ್ಷಕ ವೀರೇಶ್ ಸ್ವಾಗತ ಕೋರಿದರು, 350ಕ್ಕೂ ಹೆಚ್ಚು ಸ್ತ್ರೀ ಪುರುಷರು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿದರೆ ಗ್ರಾಮದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.