ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಮಂಗಳವಾರ ಸಾಗರದ ಶ್ರೀ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸಿ ನಂತರ ಮರ ಕಡಿಯುವ ಶಾಸ್ತ್ರಕ್ಕೆ ಚಾಲನೆ ನೀಡಲಾಯಿತು.
2023ರ ಸಾಗರದ ಶ್ರೀ ಮಾರಿಕಾಂಬ ಜಾತ್ರೆ ಹಿನ್ನೆಲೆಯಲ್ಲಿ ಪೂಜಾ ವಿಧಾನಗಳು ಆರಂಭವಾಗಿದೆ.
ಮಂಗಳವಾರ ಬೆಳಗ್ಗೆ ಪೋತರಾಜ ರವಿ ಪೂಜಾರ್ ಮನೆಯಲ್ಲಿ ಸಾಂಪ್ರದಾಯಿಕ ಪೂಜೆಯ ಮೂಲಕ ಜಾತ್ರೆಗೆ ವಿದ್ಯುಕ್ತವಾಗಿ ಆರಂಭಗೊಂಡಿತು. ನಂತರ ದೇವಸ್ಥಾನಕ್ಕೆ ತೆರಳಿ ಸಕಲ ಭಕ್ತರ ಸಮ್ಮುಖದಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಯಿತು.
ಸಾಗರದ ಶ್ರೀ ಮಾರಿಕಾಂಬ ದೇವಸ್ಥಾನದ ಆವರಣದಿಂದ ಹೊರಟ ಮೆರವಣೀಗೆಯು ರೈಲ್ವೇ ಗೇಟ್ ಸಮೀಪದಲ್ಲಿ ಇರುವ ಹಲಸಿನ ಮರವನ್ನು ಪೋತರಾಜ ಆಯ್ಕೆ ಮಾಡಿಕೊಂಡು ಮರ ಕಡಿಯುವ ಶಾಸ್ತ್ರ ನಡೆಸಲಾಯಿತು. ಸಹಸ್ರಾರು ಭಕ್ತರು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡಿದ್ದರು.
ಮರ ಕಡಿಯುವ ಶಾಸ್ತ್ರದ ನಂತರ ದೇವಸ್ಥಾನದ ಆವರಣದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅರ್ಚಕ ಮಧುಕರ್ ಭಟ್, ರಮೇಶ್ ಭಟ್ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಪೋತರಾಜನ ಮನೆಯಲ್ಲಿ ನಡೆದ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡು, ರಾಜ್ಯದ ಅತ್ಯಂತ ಪ್ರಸಿದ್ಧ ಜಾತ್ರೆಗಳಲ್ಲಿ ಸಾಗರದ ಮಾರಿಕಾಂಬಾ ಜಾತ್ರೆ ಪ್ರಮುಖವಾಗಿದೆ. ಮಲೆನಾಡು ಸೇರಿದಂತೆ ಅನೇಕ ಜಿಲ್ಲೆ, ರಾಜ್ಯ, ದೇಶಗಳಿಂದಲೂ ಜನರು ಆಗಮಿಸುತ್ತಾರೆ. ಜಾತ್ರೆ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಡಿವೈಎಸ್‌ಪಿ ರೋಹನ್ ಜಗದೀಶ್, ಕೆಪಿಸಿಸಿ ಮುಖಂಡರಾದ ಡಾ. ರಾಜನಂದಿನಿ ಕಾಗೋಡು, ಇನ್ಸಪೆಕ್ಟರ್ ಸೀತಾರಾಮ್, ಸಾಗರದ ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ್‌ಸಿಂಗ್, ರಾಮಪ್ಪ, ಎಂ.ಡಿ.ಆನಂದ್,ವಿ.ಶಂಕರ್, ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರರಾವ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಖಜಾಂಚಿ ನಾಗೇಂದ್ರ ಕುಮಟ, ವಿವಿಧ ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.