Wednesday, December 17, 2025
Wednesday, December 17, 2025

ಜನನಿ ಆಸ್ಪತ್ರೆಯಲ್ಲಿ ಒಂದು ಅನನ್ಯ ಅನುಭವ

Date:

ಇಂದು ನಮ್ಮ ಜನನಿ ನ್ಯೂಲೈಫ್ ಆಸ್ಪತ್ರೆಯಲ್ಲಿ ಸಂಜೆ 6ರ ಸುಮಾರಿಗೆ ಹೆತ್ತವರ ಇಚ್ಛೆಗನುಗುಣವಾಗಿ ಒಂದು ಸುಂದರ ಆರೋಗ್ಯವಂತ ಹೆಣ್ಣು ಮಗು ಜನಿಸಿದ್ದು, ಕೇವಲ ಗಂಡು ಮಕ್ಕಳೇ ಹೇರಳವಾಗಿದ್ದ ಆ ಸುಂದರ ಕುಟುಂಬಕ್ಕೆ ಸಹಜವಾಗಿ ಇನ್ನಿಲ್ಲದ ಸಂತಸವನ್ನು ತಂದಿತ್ತು. ಹೆರಿಗೆಯ ಆಸ್ಪತ್ರೆಯಲ್ಲಿ ಇದು ಸರ್ವೇ ಸಾಮಾನ್ಯವಲ್ಲವೇ? ಇದರಲ್ಲೇನಿದೆ ವಿಶೇಷ ಎನ್ನುವಿರೋ…! ಕೇಳಿ….

ಮೊದಲಿಗೆ ನಾನೂ ಹಾಗೇ ಅಂದುಕೊಂಡಿದ್ದೆ. ಆ ನವಜಾತ ಶಿಶುವಿನ ತಂದೆಯದೋ ಕಟ್ಟು ಮಸ್ತಾದ ದೇಹ. ಊರ್ಧ್ವ ಮುಖಿಯಾಗಿ ಹೆಮ್ಮೆಯಿಂದ ಎದ್ದು ನಿಂತು ಬೀಗುತ್ತಿರುವ ಮೀಸೆ…ಯಾವ ಗಂಡೂ ಕೂಡಾ ಸದಾಕಾಲ ಬಯಸುವಂಥ ದೇಹದಾರ್ಢ್ಯ. ಏಕೋ…ಈತ ಯೋಧನಿರಬಹುದೇ ಎಂಬ ಒಂದು ಪ್ರಬಲವಾದ ಗುಮಾನಿ ನನ್ನನ್ನು ಕಾಡತೊಡಗಿತು.

ಹೆಣ್ಣು ಮಗುವಿನ ಜನನದ ಆ ಕ್ಷಣದಲ್ಲಿ ಆತನ ಮುಖದಲ್ಲಿ ಖುಷಿ ಇದ್ದರೂ ತೇವಗೊಂಡ ಕಣ್ಣುಗಳು ಮಾತ್ರ ಏನನ್ನೋ ಕಳೆದುಕೊಂಡ ವಿಷಾದದ ದ್ಯೋತಕವಾಗಿ ನಿಸ್ತೇಜಗೊಂಡು ಸೊರಗಿ ಹೋಗಿದ್ದವು.

ಹೇಳಿಕೇಳಿ ನಾನೋ ಭಾವಜೀವಿ. ತಡೆಯಲಾರದೇ ಕೇಳಿಯೇ ಬಿಟ್ಟೆ…ಏನ್ರೀ ನೀವು ಬಯಸಿದ್ದೇ ಆಯ್ತಲ್ಲಾ….ಸುಂದರವಾದ ಆರೋಗ್ಯವಂತ ಹೆಣ್ಣು ಮಗು…ಆದ್ರೂ ಸಂತೋಷ ಆಗಿಲ್ವೇ…ಎಂದು ಕೇಳಿದೆ.

ಹಾಗೆ ಕೇಳಬಾರದಿತ್ತೇನೋ…ಆತನ ಮುಂದಿನ ಮಾತುಗಳು ನನ್ನನ್ನು ತೀವ್ರವಾಗಿ ಕಾಡುತ್ತಿವೆ…”ಸಾರ್ ನಾನು INDIAN ARMYನಲ್ಲಿ Frontline Soldier. ಸಿಯಾಚಿನ್ ಪ್ರದೇಶದ ರಕ್ಷಣೆಯ ಹೊಣೆ ಹೊತ್ತ ೧೦ ಸೈನಿಕರ ತುಕಡಿ ನಮ್ಮದು. ಎರಡು ದಿನಗಳ ಹಿಂದೆಯಷ್ಟೇ ಪತ್ನಿಯ ಹೆರಿಗೆಯ ನಿಮಿತ್ತ ಸಿಯಾಚಿನ್ ಗಡಿಯಿಂದ ಮರಳಿದ್ದೆ. ಇಂದು ಮಧ್ಯಾಹ್ನ ೪ ಘಂಟೆ ಸುಮಾರಿಗೆ ನಮ್ಮ ತುಕಡಿಯ 2 ಯೋಧರು ಪಾಪಿ ಭಯೋತ್ಪಾದಕರ ಗುಂಡಿಗೆ ವೀರಗತಿಯನ್ನು ಹೊಂದಿದರು.

ನನ್ನ ಹೆಂಡತಿ ಮತ್ತು ಹೆತ್ತವರಿಗಿಂತ ಹೆಚ್ಚಿನ ಸಮಯವನ್ನು ನಾನು ಕಳೆದ ನನ್ನ ಆ ಕುಟುಂಬದ 2 ಜನರನ್ನು ಕಳೆದುಕೊಂಡದ್ದಕ್ಕೆ ಅಳಬೇಕೋ, ಅಥವಾ ಈ ಕುಟುಂಬದಲ್ಲಿ ಮಗು ಹುಟ್ಟಿದ್ದಕ್ಕೆ ಸಂಭ್ರಮಿಸಬೇಕೋ ತಿಳಿಯುತ್ತಿಲ್ಲ….ಛೇ…ಅಲ್ಲಿ ನಾನಿದ್ದರೆ ಹೀಗಾಗಲು ನಾನು ಬಿಡ್ತಾ ಇರಲಿಲ್ಲ…” ಎಂದು ಅವುಡುಕಚ್ಚಿ ನೋವನ್ನು ನುಂಗಿ ಮಂದಸ್ಮಿತನಾಗಲು ಆತ ಪಡುತ್ತಿದ್ದ ಪಾಡು ನೋಡಿ ನನ್ನ ಕಣ್ಣುಗಳೂ ತೇವಗೊಂಡವು.

ಆತ ತನ್ನ ಬೆಟಾಲಿಯನ್ನಿನ ಕಥೆಗಳನ್ನು ಒಂದೊಂದಾಗಿ ಹೇಳುತ್ತಿದ್ದರೆ ನಾವು ಮೈಯೆಲ್ಲಾ ಕಣ್ಣಾಗಿ ಕೇಳುತ್ತಿದ್ದೆವು… ಸಮಯ ರಾತ್ರಿ 10 ಆದರೂ ಹಸಿವೆಯೇ ಇಂದು ಬತ್ತಿ ಹೋದಂತಿತ್ತು. ಆತನನ್ನು ಅಪ್ಪಿಕೊಂಡು ಭಾವನೆಗಳನ್ನು ಹಂಚಿಕೊಂಡೆ. ಸ್ವಲ್ಪ ಮನಸ್ಸು ಹಗುರವಾದಂತೆನಿಸಿತು.

ನಾವು CIVILIAN ಜೀವನದಲ್ಲಿ ಎಷ್ಟೇ ಶ್ರಮ ಪಟ್ಟರೂ ಅದು ಯೋಧರು ಪಡುವ ಕಷ್ಟಗಳ ಸಾವಿರದ ಒಂದು ಭಾಗಕ್ಕೂ ಸಮನಾಗದು. ಮಲೆನಾಡಿನ 13ಡಿಗ್ರಿಯ ಚಳಿಗೇ ಥರಗುಟ್ಪುವ ನಮ್ಮೀ ಶರೀರ, ಸಿಯಾಚಿನ್ನಿನ ಚಳಿಯ ಕಲ್ಪನೆ ಮಾತ್ರದಿಂದಲೇ freeze ಆದೀತೇನೋ. ಇಂಥವರ ಸೇವೆ ಮಾಡುವ ಅವಕಾಶವನ್ನು ನೀಡಿದ ಭಗವಂತನಿಗೆ ನಾನು ಮನಸ್ಸಿನಲ್ಲೇ ಧನ್ಯವಾದಗಳನ್ನು ಅರ್ಪಿಸಿದೆ.

ಯೋಧನ ಮಗುವಿಗೆ ಸಲ್ಲಿಸಿದ ಸೇವೆಯನ್ನೇ ಈಶ್ವರನ ಪೂಜೆ ಎಂದೇ ಭಾವಿಸಿ ಕೃತಾರ್ಥನಾದೆ…. ಮನಸ್ಸು ಗಡಿಯಲ್ಲಿನ ಸೈನಿಕನಿಗೆ ಒಂದು ಮೌನ ಸಲಾಂ ಹೊಡೆಯುತ್ತಿತ್ತು.

ಮನೆಗೆ ಬಂದು ಟಿವಿ ಹಾಕಿದ್ರೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನೊಬ್ಬ ಸೈನಿಕರ ಕುರಿತು ಅವಹೇಳನಕಾರಿ ಭಾಷೆಯ ಪ್ರಯೋಗವನ್ನು ಮಾಡುತ್ತಿರುವುದನ್ನು ಕಂಡು ನನ್ನ ರಕ್ತ ಕುದಿಯತೊಡಗಿತು. ಇಂಥ ನಾ(ಲಾ)ಯಕರನ್ನು ಪಡೆದ ನಾವೇ ಧನ್ಯರು.

ಇಂಥವರು ಅಪ್ಪಿ ತಪ್ಪಿ ಇಸ್ರೇಲಿನಲ್ಲಿ ಏನಾದರೂ ಹುಟ್ಟಿದ್ದರೆ ಬಂದೂಕಿನ ನಳಿಕೆಗೆ ಇವರನ್ನು ಕಟ್ಟಿ ಢಂ ಎನ್ನಿಸಿಬಿಡುತ್ತಿದ್ದರೇನೋ…ಥೂ ನಿಮ್ಮ ಜನ್ಮಕ್ಕಿಷ್ಟು… ಇದರಿಂದ ದೇಶಕ್ಕೆ ಮತ್ತು ನಮ್ಮ ಧ್ವಜದ ಗೌರವದ ರಕ್ಷಣೆಗೆ ಪ್ರಾಣವನ್ನು ಒತ್ತೆಯಿಟ್ಟು ಗಡಿಯಲ್ಲಿ ನಿಂತಿರುವ ಕಟ್ಟ ಕಡೆಯ ಸೈನಿಕನ ಆತ್ಮ ವಿಶ್ವಾಸಕ್ಕೆ ಎಷ್ಟು ಆಘಾತವಾದೀತು… ಎಂದಾದರೂ ಹೀಗೆ ಯೋಚಿಸಿದ್ದೀರಾ…

ಈ ದೇಶ ನಮ್ಮದು ಎಂಬ ಭಾವನೆಯೇ ಇಲ್ಲದಿದ್ದರೆ ಹಾಗೊಂದು ಸಂವೇದನೆ ಜಾಗೃತವಾಗುವುದು ಸಾಧ್ಯವೇ? ಇಂಥವರಿಂದ ದೇಶ ಪ್ರೇಮ ನನ್ನು ಬಯಸುವುದೂ… ಬಂಜೆಯಿಂದ ಕೂಸನ್ನು ಬಯಸುವುದೂ ಎರಡೂ….ಒಂದೇ…

ತನ್ನ ಎದೆಯಲ್ಲಿ 8 ವರ್ಷಗಳ ಹಿಂದೆ ಹೊಕ್ಕ 29 ಗುಂಡುಗಳ ಗುರುತುಗಳನ್ನು ತೋರಿಸುತ್ತಿದ್ದಂತೆ, ಜಗದ ಎಲ್ಲಾ ಕಷ್ಟಗಳನ್ನು ಒತ್ತಟ್ಟಿಗಿಟ್ಟರೂ ಅದು ಸೈನಿಕರ ಪರಿಸ್ಥಿತಿಯ ಮುಂದೆ ಕೇವಲ ತೃಣಸಮಾನ ಎಂದೆನಿಸಿತ್ತು… ವೀರಸ್ವರ್ಗವನ್ನಪ್ಪಿದ ಆತ್ಮಗಳಿಗೆ ಸದ್ಗತಿಯನ್ನು ಬೇಡುತ್ತಾ ಆ ಯೋಧನ ಕುಟುಂಬಕ್ಕೆ ಶುಭ ಹಾರೈಸಿ ರಸ್ತೆಗೆ ಬರುವಷ್ಟರಲ್ಲಿ ಕಣ್ಣುಗಳು ಆರ್ದ್ರ ಗೊಂಡಿದ್ದವು…ಕಾಲುಗಳು ಭಾರವೆನಿಸತೊಡಗಿದ್ದವು….ಕಂಠ ಬಿಗಿದು ಬಂದಿತ್ತು…ಮನೆಗೆ ಬಂದ ಮೇಲೂ ಆತನ ಮಾತುಗಳೇ ಇನ್ನೂ ನನ್ನನ್ನು ಕಾಡುತ್ತಿವೆ… ಸಾಲದೆಂಬಂತೆ ನಿದ್ರೆಯೂ ಹತ್ತುತ್ತಿಲ್ಲ… ದೇವರೇ ಯಾರಿಗೂ ಇಂತಹಾ ಪರಿಸ್ಥಿತಿ ತಂದೊಡ್ಡದಿರು… ಇನ್ನೇನೂ ಬರೆಯಲಾಗುತ್ತಿಲ್ಲ…

ಇದೀಗ ಬಂದ ವರದಿ…. ನಮ್ಮ ಜವಾನ್ ಮತ್ತೆ ಗಡಿಯಿಂದ ತುರ್ತಾಗಿ ಬುಲಾವ್ ಬಂದ ಹಿನ್ನೆಲೆಯಲ್ಲಿ ಎರಡು ದಿನದ ಹಸುಳೆಯನ್ನು ಬಿಟ್ಟು ನಾಳೆ ಮತ್ತೆ ಗಡಿಯತ್ತ ಮರಳುತ್ತಾನೆ. ಮತ್ತೆ ಮುಂದಿನ ಭೇಟಿ…2023 ಸೆಪ್ಟೆಂಬರ್…. I sincerely wish he comes back to reunite with his baby & family. ಇಂಥ ನಡೆದಾಡುವ ದೇವರುಗಳಿಗೊಂದು ಮೌನ ಸಲಾಂ….ಜೈ ಜವಾನ್

ಜೈ ಹಿಂದ್….

ಡಾ.ರಾಘವೇಂದ್ರ ವೈಲಾಯ.ನವಜಾತ ಶಿಶು ಪರಿಣಿತರು.
ಜನನಿ ಆಸ್ಪತ್ರೆ.ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...