ತಂತ್ರಜ್ಞಾನದ ಮೂಲಕ ಇತ್ತೀಚಿನ ದಿನಗಳಲ್ಲಿ ಅಪರಾಧ ಕೂಡ ಹೆಚ್ಚಾಗುತ್ತಿದೆ. ಅದೇ ತಂತ್ರಜ್ಞಾನ ಅಪರಾಧವನ್ನು ಪತ್ತೆಹಚ್ಚಲು ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ರಾಜಭವನದ ಗಾಜಿನ ಅರಮನೆಯಲ್ಲಿ ನಡೆದ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇಲಾಖೆಯ ನೇಮಕಾತಿ ವೇಳೆ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಮುಂದಾಗಬೇಕೆಂದು ಸಿಎಂ ಸೂಚನೆ ನೀಡಿದರು.
ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ವೇಳೆ ಒಂದಿಲ್ಲೊಂದು ಎಡವಟ್ಟುಗಳಿಂದಾಗಿ ಅಕ್ರಮಗಳು ನಡೆದಿರುವುದು ಇಲಾಖೆಗೆ ಶೋಭೆ ತರುವುದಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಗೃಹ ಇಲಾಖೆಗೆ ಇನ್ನು ಹೆಚ್ಚಿನ ತಂತ್ರಜ್ಞಾನ ಅಗತ್ಯವಿದೆ ಎಂಬುದು ನನಗೆ ಗೊತ್ತಾಗಿದೆ. ನಿಮಗೆ ಬೇಕಾದ ಪರಿಣಿತರನ್ನು ಸೇರಿಸಿಕೊಳ್ಳಿ. ಅದಕ್ಕೆ ಬೇಕಾದ ಅನುದಾನವನ್ನು ಮುಂದಿನ ಬಜೆಟ್‍ನಲ್ಲಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ವಿಧಿವಿಜ್ಞಾನ ಪ್ರಯೋಗಾಲಯ ಸದ್ಯಕ್ಕೆ ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇದು ಕನಿಷ್ಟ ಪಕ್ಷ ವಲಯದಲ್ಲಾದರೂ ಇರಬೇಕೆಂದು ಅಧಿಕಾರಿಗಳು ನನಗೆ ಸಲಹೆ ನೀಡಿದ್ದಾರೆ. ಎರಡು ವಿಧಿವಿಜ್ಞಾನ ಪ್ರಯೋಗಾಲಯ ತೆರೆಯಲು ಸರ್ಕಾರ ಸಿದ್ದವಿದೆ ಎಂದು ತಿಳಿಸಿದರು.
ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಎಂತಹ ಅಪರಾಧವಿರಲಿ, ಅಕ್ರಮವೇ ಇರಲಿ ಕಾಲಮಿತಿ ಯೊಳಗೆ ಪತ್ತೆಹಚ್ಚಬಹುದು. ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೇಮಕಾತಿಯಲ್ಲಿ ಉಂಟಾಗುವ ಲೋಪದೋಷಗಳಿಗೆ ಕಡಿವಾಣ ಹಾಕಬೇಕು, ಅಧಿಕಾರಿಗಳು ಗಂಭೀರ ಚಿಂತನೆ ನಡೆಸಬೇಕೆಂದು ಸಲಹೆ ಮಾಡಿದರು.