ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರತಿಯೊಂದು ಕುಟುಂಬಕ್ಕೂ ಸಿಹಿ ಸುದ್ದಿ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿನ ಪ್ರತಿಯೊಂದು ಕುಟುಂಬಕ್ಕೂ ಮಾಸಿಕ ಹತ್ತು ಸಾವಿರ ಲೀಟರ್ ಕುಡಿಯುವ ನೀರನ್ನು ಉಚಿತವಾಗಿ ಕೊಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.
ಹೊಸ ವರ್ಷ ಜನವರಿಗೆ ಹೊಸ ಕೊಡುಗೆ ನೀಡಲು ಉದ್ದೇಶಿಸಿದ್ದು, ಮುಂದಿನ ಚುನಾವಣೆಯನ್ನು ಗಮನದಲ್ಲಿ ಟ್ಟುಕೊಂಡು ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ.
ರಾಜ್ಯದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡುವ ‘ಜಲ ಜೀವನ್ ಮಿಷನ್’ನ ಹರ್ಘರ್ ಜಲ್ ಯೋಜನೆ ಜಾರಿಗೆ ಬರುತ್ತಿದೆ. ಅಂದಾಜು 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಯೋಜನೆಗಳು ಭರದಿಂದ ನಡೆದಿವೆ.
ಇದೇ ಯೋಜನೆಯಲ್ಲಿ ಉಚಿತ ನೀರು ಪೂರೈಕೆ ಯೋಜನೆ ಜಾರಿಗೆ ತಂದರೆ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಏನೂ ಬರುವುದಿಲ್ಲವೆಂಬುದು ಸರ್ಕಾರದ ಲೆಕ್ಕಾಚಾರ. ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಇದೇ ರೀತಿಯ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ಲಿ ಜನಪ್ರಿಯ ಕಾರ್ಯಕ್ರಮವಾಗಿದ್ದು, ಪಕ್ಷದ ಪರವಾಗಿ ಜನರ ಅಭಿಪ್ರಾಯ ಮೂಡಿಸಿದೆ.
ಆದ್ದರಿಂದಲೇ ರಾಜ್ಯದಲ್ಲಿಯೂ ಚುನಾವಣೆಗೆ ಹೋಗುವ ಮುನ್ನ ಇಂಥದ್ದೊಂದು ಯೋಜನೆಯನ್ನು ತರುವುದು ಒಟ್ಟಾರೆ ಆಶಯವಾಗಿದೆ.
ಕರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾಲ ಹೆಚ್ಚು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಾಲ್ಕು ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ಸ್ಥಳೀಯ ಸಂಸ್ಥೆಗಳ ಆದಾಯ ವೃದ್ದಿ ಮಾಡಿಕೊಳ್ಳುವುದು ಒಂದಾಗಿತ್ತು.
ಆ ಸಂದರ್ಭದಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳು ತೆರಿಗೆ ದರ ಹೆಚ್ಚಿಸಿದ್ದವು. ಅದರಲ್ಲಿ ನೀರಿನ ದರವೂ ಸೇರಿತ್ತು. ಆದರೆ, ಸಂಗ್ರಹ ಕಡಿಮೆಯಾಗುವುದರ ಜತೆಗೆ ದೂರುಗಳು ಹೆಚ್ಚಾಗಿದ್ದವು.
ನಗರಾಭಿವೃದ್ದಿ ಇಲಾಖೆ ಯೋಜನೆ: ಸ್ಥಳೀಯ ಸಂಸ್ಥೆಗಳಲ್ಲಿ ದೂರುಗಳು ಹೆಚ್ಚಾಗಿ ಕೇಳಿಬಂದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ಮುಂದಿನ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಿದ್ದಾರೆ. ಯೋಜನೆಯನ್ನು ಮೊದಲಿಗೆ ಪ್ರಕಟಿಸಿ ಮುಂದಿನ ಬಜೆಟ್ನಲ್ಲಿ ಅನುದಾನ ಹೊಂದಾಣಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಬೆಂಗಳೂರು ಹೊರತುಪಡಿಸಿದರೆ ಉಳಿದ ನಗರ ಮತ್ತು ಗ್ರಾಮೀಣ ಭಾಗಕ್ಕೆ ವಾರ್ಷಿಕ ಅಂದಾಜು 250 ಕೋಟಿ ರೂ.ಗಳಷ್ಟು ಮಾತ್ರ ವೆಚ್ಚ ಆಗಬಹುದೆಂದು ಅಂದಾಜು ಮಾಡಲಾಗಿದೆ. ಹತ್ತು ಸಾವಿರ ಲೀಟರ್ಗಿಂತ ಹೆಚ್ಚು ಬಳಕೆ ಮಾಡುವವರಿಗೆ ಸ್ಲ್ಯಾಬ್ ರೀತಿಯಲ್ಲಿ ಶುಲ್ಕ ವಿಧಿಸುವುದು. ಅದರಲ್ಲಿ ಮೊದಲ ಐದು ಸಾವಿರ ಲೀಟರ್ಗೆ ಒಂದು ಮೊತ್ತವಿದ್ದರೆ, ಐದು ಸಾವಿರ ಲೀಟರ್ ಮೀರಿದ ನಂತರ ಹೆಚ್ಚಿನ ಶುಲ್ಕ ವಿಧಿಸುವ ಮೂಲಕ ಸರ್ಕಾರ ವೆಚ್ಚ ಮಾಡುವ ಮೊತ್ತದ ಬಹುಭಾಗ ವಾಪಾಸು ಬರುತ್ತದೆ ಎಂಬ ಅಂದಾಜು ಇದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 10 ಸಾವಿರ ಲೀಟರ್ಗಿಂತ ಹೆಚ್ಚಿನ ಪ್ರಮಾಣದ ನೀರು ಬಳಕೆದಾರರು ದೊಡ್ಡ ಪ್ರಮಾಣದಲ್ಲಿದ್ದಾರೆ ಎನ್ನಲಾಗಿದೆ.