ಶಿಕ್ಷಣದೊಂದಿಗೆ ಇತರೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ವಿಕಸನಕ್ಕೆ ಮುಖ್ಯವಾಗಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ಅಭಿಪ್ರಾಯಪಟ್ಟರು.
ಕೇಂದ್ರೀಯ ವಿದ್ಯಾಲಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಬೆಂಗಳೂರು ಪ್ರಾದೇಶಿಕ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ತೃತೀಯ ಸೋಪಾನ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದೊಂದಿಗೆ ಇತರೆ ಪಠ್ಯೇತರ ಚಟುವಟಿಕೆಗಳು ಅತಿ ಅವಶ್ಯಕ. ಇವು ಮಕ್ಕಳಲ್ಲಿ ಪ್ರತಿಭೆ, ಕೌಶಲ್ಯವನ್ನು ಅನಾವರಣಗೊಳಿಸಿ, ಶಿಸ್ತನ್ನು ನೀಡುತ್ತವೆ. ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಹಾಗೂ ಮಕ್ಕಳು ಶಿಸ್ತುಬದ್ದ ಮತ್ತು ಸಂಯಮದ ಜೀವನ ನಿರ್ವಹಿಸಲು ಕಲಿಸುತ್ತದೆ.
ಮಕ್ಕಳೇ ದೇಶದ ಮುಂದಿನ ಭವಿಷ್ಯವಾಗಿದ್ದು, ಶಿಕ್ಷಣದ ಮೌಲ್ಯವನ್ನು ಅರಿತು, ಶಿಕ್ಷಣದೊಂದಿಗೆ ಜೀವನದ ಕೌಶಲ್ಯಗಳನ್ನು ತಮ್ಮದಾಗಿಸಿಕೊಂಡು ಮುಂದೆ ಬರಬೇಕು. ಮಕ್ಕಳು ಇಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದೇ ಒಂದು ಪುರಸ್ಕಾರ ಎಂದ ಅವರು ಈ ಮೂರು ದಿನದ ಶಿಬಿರದಲ್ಲಿ ಕಲಿತ ಅಂಶಗಳನ್ನು ಶಿಬಿರಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುಂತೆ ತಿಳಿಸಿ ಶುಭ ಕೋರಿದರು.
ಮೈಸೂರು ಕೇಂದ್ರೀಯ ವಿದ್ಯಾಲಯದ ಹೆಚ್ ಡಬ್ಲ್ಯೂ ಹಾಗೂ ತೃತೀಯ ಸೋಪಾನ ಪರೀಕ್ಷಾ ಶಿಬಿರದ ಲೀಡರ್ ಆಫ್ ಕ್ಯಾಂಪ್ ಆಗಿರುವ ಎಂ.ರಾಜಶೇಖರ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಜೀವನ ಕೌಶಲ್ಯವನ್ನು ವೃದ್ದಿಸುವಲ್ಲಿ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಸಹಕರಿಸುತ್ತದೆ. ಶಿಸ್ತುಬದ್ದ ಜೀವನವನ್ನು ಇದು ಕಲಿಸುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ದಿಯಾಗುತ್ತದೆ ಎಂದ ಅವರು ಸ್ಕೌಟ್ಸ್ ಮತ್ತು ಗೈಡ್ಸ್ನ ಧ್ಯೇಯೋದ್ದೇಶಗಳ ಕುರಿತು ಶಿಬಿರಾರ್ಥಿಗಳಿಗೆ ತಿಳಿಸಿದರು.
ತೃತೀಯ ಸೋಪಾನ ಶಿಬಿರದಲ್ಲಿ ಬೆಂಗಳೂರು ಪ್ರಾದೇಶಿಕ ಮಟ್ಟದ ೧೧ ಕೇಂದ್ರೀಯ ವಿದ್ಯಾಲಯದ ಒಟ್ಟು ೭೧ ಸ್ಕೌಟ್ ಮತ್ತು ಗೈಡ್ ಶಿಬಿರಾರ್ಥಿಗಳುಹಾಗೂ ೧೧ ಜನ ಸ್ಕೌಟ್ ಶಿಕ್ಷಕರು ಹಾಗೂ ನಾಲ್ಕು ಜನ ಪರೀಕ್ಷಾಧಿಕಾರಿಗಳು ಪಾಲ್ಗೊಂಡಿದ್ದರು.
ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಯು.ಪಿ.ಬಿನಾಯ್ ಸ್ವಾಗತಿಸಿದರು. ಮೈಸೂರು ಕೇಂದ್ರೀಯ ವಿದ್ಯಾಲಯದ ಅಡ್ವಾನ್ಸ್ಡ್ ಸ್ಕೌಟ್ ಮಾಸ್ಟರ್ ಮತ್ತು ಪರೀಕ್ಷಾಧಿಕಾರಿ ವಿಜಯ ನರಂಸಿಂಹ, ಹಾಸನ ಕೇಂದ್ರೀಯ ವಿದ್ಯಾಲಯದ ಅಡ್ವಾನ್ಸಡ್ ಸ್ಕೌಟ್ ಮಾಸ್ಟರ್ ಮತ್ತು ಪರೀಕ್ಷಾಧಿಕಾರಿ ವಾಸುದೇವ, ಶಿವಮೊಗ್ಗ ಕೇಂದ್ರೀಯ ವಿದ್ಯಾಲಯದ ಅಡ್ವಾನ್ಸ್ಡ್ ಸ್ಕೌಟ್ ಮಾಸ್ಟರ್ ಗುರುಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.