ಯುರೋಪಿನಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೋವಿಡ್-19 ಸೋಂಕಿನ ಮತ್ತೊಂದು ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಆಯಂಡ್ ಕಂಟ್ರೋಲ್ ಎಚ್ಚರಿಕೆ ನೀಡಿದೆ.
ಯುರೋಪ್‌ನಲ್ಲಿ ಅಕ್ಟೋಬರ್ 2ಕ್ಕೆ ಅಂತ್ಯಗೊಳ್ಳುವ ವಾರದಲ್ಲಿ ಕೋವಿಡ್ ಸೋಂಕು ಪ್ರಕರಣಗಳಲ್ಲಿ, ಇದಕ್ಕೂ ಹಿಂದಿನ ವಾರಕ್ಕೆ ಹೋಲಿಸಿದರೆ 8% ಹೆಚ್ಚಳವಾಗಿದೆ. ಲಸಿಕೆ ಪಡೆಯುವಲ್ಲಿನ ಹಿಂಜರಿಕೆ ಮತ್ತು ಲಭ್ಯ ಲಸಿಕೆಯ ಕುರಿತ ಗೊಂದಲವು ಈ ವಲಯದಲ್ಲಿ ಬೂಸ್ಟರ್ ಲಸಿಕೆ ಸೇವನೆಯನ್ನು ಮಿತಿಗೊಳಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಯುರೋಪ್‌ನಲ್ಲಿ ಕೋಟ್ಯಾಂತರ ಮಂದಿ ಇನ್ನೂ ಕೋವಿಡ್ ಲಸಿಕೆ ಪಡೆದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇಸಿಡಿಸಿ ವರದಿ ಮಾಡಿದ್ದು, ಕಾಲೋಚಿತ ಸಾಂಕ್ರಾಮಿಕ ಶೀತಜ್ವರದ ಪ್ರಕರಣಗಳಲ್ಲಿ ನಿರೀಕ್ಷಿತ ಹೆಚ್ಚಳ ಕಂಡುಬರುವ ಮೊದಲೇ ಜನತೆಗೆ ಫ್ಲೂ ಮತ್ತು ಕೋವಿಡ್-19 ಲಸಿಕೆ ಹಾಕುವಂತೆ ಯುರೋಪಿಯನ್ ದೇಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಆಗ್ರಹಿಸಿದೆ.
ಒಂದು ವರ್ಷದ ಹಿಂದೆ ಇದ್ದಂತಹ ಪರಿಸ್ಥಿತಿಯಲ್ಲಿ ಈಗ ನಾವು ಇಲ್ಲದಿದ್ದರೂ, ಕೋವಿಡ್-19 ಸಾಂಕ್ರಾಮಿಕ ಇನ್ನೂ ತೊಲಗಿಲ್ಲ ಎಂಬುದು ಅಷ್ಟೇ ಸ್ಪಷ್ಟವಾಗಿದೆ.
ದುರದೃಷ್ಟವಶಾತ್ ಯುರೋಪ್‌ನಲ್ಲಿ ಮತ್ತೆ ಸೋಂಕು ಉಲ್ಬಣಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು ಇದು ಮತ್ತೊಂದು ಅಲೆಯ ಸಂಕೇತವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ವಲಯದ ನಿರ್ದೇಶಕ ಹ್ಯಾನ್ಸ್ ಕ್ಲೂಗ್ ಮತ್ತು ಇಸಿಡಿಸಿಯ ನಿರ್ದೇಶಕಿ ಆಯಂಡ್ರಿಯಾ ಅಮನ್ ಅವರು ತಿಳಿಸಿದ್ದಾರೆ.