ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳನ್ನು ವಿಲೀನಗೊಳಿಸುವ ಪ್ರಸ್ತಾಪವು ಅನೇಕ ವರ್ಷಗಳಿಂದಲೂ ರಾಜ್ಯ ಸರ್ಕಾರದ ಮುಂದೆ ಇದೆ. ಕೃಷಿಗೆ ಸಂಬಂಧಪಟ್ಟ ಹಾಗೂ ಏಕರೂಪದ ಕಾರ್ಯನಿರ್ವಹಣೆ ಇರುವ ಈ ಇಲಾಖೆಗಳನ್ನು ವಿಲೀನಗೊಳಿಸುವುದು ಆಡಳಿತಾತ್ಮಕ ಸಮತೋಲನ ಹಾಗೂ ಮಿತವ್ಯಯ ಸಾಧಿಸುವ ದೃಷ್ಟಿಯಿಂದ ಸಮ್ಮತವಾದುದು ಎಂಬ ಅಭಿಪ್ರಾಯ ದಟ್ಟವಾಗಿದ್ದರೂ ಇದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಆದರೀಗ ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳ ಸಚಿವಾಲಯ ಮಟ್ಟದ, ಉನ್ನತ ಹಾಗೂ ಹಿರಿಯ ಶ್ರೇಣಿಯ ಎರಡು ಸಾವಿರ ಹುದ್ದೆಗಳನ್ನು ರದ್ದುಪಡಿಸಲು ಸಚಿವ ಸಂಪುಟದ ಉಪಸಮಿತಿಯು ಶಿಫಾರಸು ಮಾಡಿರುವುದು ಈ ನಿಟ್ಟಿನಲ್ಲಿ ಕೈಗೊಂಡ ಮೊದಲ ಹೆಜ್ಜೆ ಎನ್ನಬಹುದಾಗಿದೆ.
ಈ ಇಲಾಖೆಗಳಲ್ಲಿನ ಸಚಿವಾಲಯ ಮಟ್ಟದ, ಉನ್ನತ ಅಧಿಕಾರಿಗಳ ಹುದ್ದೆಗಳನ್ನು ತೆಗೆದುಹಾಕಬೇಕು ಹಾಗೂ ಕೆಲಸದ ಅಗತ್ಯಕ್ಕೆ ಅನುಗುಣವಾಗಿ ಕೆಳಹಂತದ ಸಿಬ್ಬಂದಿ ಮುಂದುವರಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯ ಸಚಿವ ಸಂಪುಟದ ಉಪಸಮಿತಿಯು ಮಾಡಿರುವ ಶಿಫಾರಸು ಅತ್ಯಂತ ಸೂಕ್ತವಾಗಿದೆ.
ಸರ್ಕಾರವು ವಿಳಂಬಕ್ಕೆ ಎಡೆ ಮಾಡಿಕೊಡದೆ ಈ ನಿಟ್ಟಿನಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವ ಮೂಲಕ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ, ತಮ್ಮತೆರಿಗೆ ಹಣವು ಅಪವ್ಯಯವಾಗುವುದನ್ನು ತಡೆಯಬೇಕು ಎಂಬ ನಿರೀಕ್ಷೆ ಸಾರ್ವಜನಿಕರದ್ದಾಗಿದೆ.
ಮೈಸೂರು ತಂಬಾಕು ಕಂಪನಿ, ಕರ್ನಾಟಕ ಕೃಷಿ ಕೈಗಾರಿಕಾ ನಿಗಮ, ಕರ್ನಾಟಕ ಆಹಾರ ನಿಗಮಗಳನ್ನು ಕೃಷಿ ಇಲಾಖೆಯಡಿ ಸೇರ್ಪಡೆ ಮಾಡುವುದು; ಮುದ್ರಣ, ಲೇಖನ ಸಾಮಗ್ರಿ, ಪ್ರಕಟಣೆ ಇಲಾಖೆಯನ್ನು ಶಿಕ್ಷಣ ಇಲಾಖೆಯಲ್ಲಿ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ವಿಲೀನಗೊಳಿಸುವುದು; ರೇಷ್ಮೆ ಬೆಳೆಯದ ಜಿಲ್ಲೆಗಳಲ್ಲಿನ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳ ಹುದ್ದೆಗಳು.
ಕೆಳಹಂತದ ಸಿಬ್ಬಂದಿಯನ್ನು ಕೃಷಿ ಇಲಾಖೆಗೆ ಹಸ್ತಾಂತರಿಸುವುದು – ಈ ರೀತಿಯ ಶಿಫಾರಸುಗಳನ್ನು ಕೂಡ ಉಪಸಂಪುಟ ಸಮಿತಿ ಮಾಡಿದ್ದು, ಇವು ಅತ್ಯಂತ ಯೋಗ್ಯ ಸಲಹೆಗಳಾಗಿವೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ – 2 ತನ್ನ ಮೊದಲ ವರದಿಯನ್ನು 2021ರ ಜುಲೈ ತಿಂಗಳಲ್ಲಿಯೇ ಸಲ್ಲಿಸಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅಧ್ಯಕ್ಷತೆಯ ಈ ಸಮಿತಿಯು ರಾಜ್ಯದ ನಾಲ್ಕೂ ಪ್ರಾದೇಶಿಕ ಆಯುಕ್ತರ ಕಾರ್ಯಾಲಯವನ್ನು ರದ್ದು ಮಾಡಲು ಶಿಫಾರಸು ಮಾಡಿದೆ. ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮ ಅಧಿಕಾರಿಗಳಾಗಿ ಮರುನಾಮಕರಣ ಮಾಡಬೇಕು ಎಂದೂ ಹೇಳಿದೆ.
ನಂತರ ಇದೇ ವರ್ಷದ ಫೆಬ್ರವರಿಯಲ್ಲಿ 2 ಮತ್ತು 3ನೇ ವರದಿಯನ್ನೂ ಈ ಸಮಿತಿ ನೀಡಿದೆ. ಸಾರ್ವಜನಿಕ ಉದ್ಯಮಗಳ ಇಲಾಖೆಯನ್ನು ಆರ್ಥಿಕ ಇಲಾಖೆಯಲ್ಲಿ ವಿಲೀನಗೊಳಿಸಬೇಕು ಎಂದು ಇದರಲ್ಲಿ ಸಲಹೆ ನೀಡಿದೆ. ವಿವಿಧ ಕಚೇರಿಗಳಲ್ಲಿ ಕಾರ್ಯಭಾರ ಆಧಾರದ ಮೇಲೆ ಹುದ್ದೆಗಳನ್ನು ಸ್ಥಳಾಂತರ ಮಾಡಬಹುದು ಎಂದೂ ಅದು ಹೇಳಿದೆ.