ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ನಾವು ಜನರಿಗೆ ಉತ್ತರದಾಯಿಗಳಾಗಿರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವಿರುವ ನಮ್ಮ ದೇಶದಲ್ಲಿ ಮಾಧ್ಯಮಗಳಿಗೆ ಮುಕ್ತ ಕಾರ್ಯನಿರ್ವಹಣೆಗೆ ಅವಕಾಶ ಇದೆ. ಪೊಲೀಸ್ ಇಲಾಖೆ ಹಾಗೂ ಮಾಧ್ಯಮಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ ಇಲಾಖೆಗೆ ಸಾರ್ವಜನಿಕರ ಸಮಸ್ಯೆಗಳ ಅರಿವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಮಾಡಿರುವ ಈ ಅವಧಿಯಲ್ಲಿ ಶಿವಮೊಗ್ಗದ ಮಾಧ್ಯಮವಲಯದ ಸಹಕಾರ ತೃಪ್ತಿದಾಯಕವಾಗಿತ್ತು ಎಂದು ನಿರ್ಗಮಿತ ಎಸ್ಪಿ ಲಕ್ಷ್ಮೀಪ್ರಸಾದ್ ಅವರು ಹೇಳಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ನೂತನ ಎಸ್‌ಪಿಗೆ ಸ್ವಾಗತ ಮತ್ತು ವರ್ಗಾವಣೆಗೊಂಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಗೆ ವಿದಾಯ ಕೋರುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪತ್ರಕರ್ತ ಯಾವುದೇ ಒಂದು ವಿಷಯವನ್ನು ಜನರಿಗೆ ತಲುಪಿಸುವುದು ಮುಖ್ಯ. ಮಾಧ್ಯಮ ಸಂಪರ್ಕ ಸಾಧನವಾಗಿದೆ. ಅದರಲ್ಲೂ ವಿಶೇಷವಾಗಿ ಅಂಕಿ ಸಂಖ್ಯೆಗಳ ಆಧಾರವನ್ನಿಟ್ಟುಕೊಂಡು ಕೆಲಸ ಮಾಡುವುದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಜಿಲ್ಲೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಸಮಾಧಾನವಿದೆ. ಇಲಾಖೆಗೆ ಮುಂದೆಯೂ ಇದೇ ಸಹಕಾರ ಇರಲಿ ಎಂದು ತಿಳಿಸಿದ್ದಾರೆ.
ನೂತನ ಪೊಲೀಸ್ ವರಿಷ್ಠ ಜಿ.ಕೆ ಮಿಥುನ್‌ಕುಮಾರ್ ಮಾತನಾಡಿ, ಪತ್ರಕರ್ತರ ವರದಿಯಲ್ಲಿ ಸತ್ಯಾಂಶವಿರಬೇಕು. ಸತ್ಯಾಂಶ ಹೊರಬರುವಂತಹ ವರದಿ ಮಾಡಬೇಕು. ಜನರಿಗೆ ಸತ್ಯ ತಲುಪಿಸುವ ಕೆಲಸ ಆಗಬೇಕು. ಪತ್ರಿಕೋದ್ಯಮವನ್ನು 4ನೇ ಯ ಅಂಗವೆಂದು ಕರೆಯಲಾಗುತ್ತಿದೆ. ಆದರೆ ಪತ್ರಿಕೋದ್ಯಮ ಸಮಾಜದಲ್ಲಿ ಇನ್ನೂ ಉತ್ತಮ ಕೆಲಸ ಮಾಡಬೇಕಿದೆ. ಜನರು ಇಟ್ಟ ವಿಶ್ವಾಸ ನಿಜವಾಗಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ ಮಾತನಾಡಿ, ಹಿಂದಿನ ಎಸ್ಪಿ ಅವರ ಉತ್ತಮ ಕೆಲಸ ನೂತನ ಎಸ್ಪಿಯವರ ಎದುರು ಇರುವ ಸವಾಲುಗಳ ಕುರಿತು ಹೇಳಿದರು.ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಎಸ್. ಚಂದ್ರಕಾಂತ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಉಪಸ್ಥಿತರಿದ್ದರು. ಟ್ರಸ್ಟ್ ಕಾರ್‍ಯದರ್ಶಿ ನಾಗರಾಜ್ ನೇರಿಗೆ ಸ್ವಾಗತಿಸಿ ಕಾರ್‍ಯಕ್ರಮ ನಿರೂಪಿಸಿದರು.
