ಮರಣ ದಂಡನೆ ಶಿಕ್ಷೆಗೆ ಒಳಪಡಿಸಬಹುದಾದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಹೇಗೆ ಮತ್ತು ಯಾವ ಸಂದರ್ಭಗಳಲ್ಲಿ ಶಿಕ್ಷೆಯ ಪ್ರಮಾಣ ತಗ್ಗಿಸಬಹುದು ಎಂಬ ಬಗ್ಗೆ ಮಾರ್ಗಸೂಚಿ ರೂಪಿಸುವ ಕುರಿತ ಸುಮೋಟೊ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ಸೋಮವಾರ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.
ಮರಣ ದಂಡನೆ ಶಿಕ್ಷೆಗೆ ಒಳಪಡಬಹುದಾದ ಅಪರಾಧಿಯ ಶಿಕ್ಷೆಯನ್ನು ಎಂತಹ ಸಂದರ್ಭಗಳಲ್ಲಿ ತಗ್ಗಿಸಬೇಕು ಎಂಬುದರ ಕುರಿತು ಸ್ಪಷ್ಟತೆ ಹಾಗೂ ಏಕರೂಪತೆ ಬೇಕಿದೆ. ಈ ವಿಚಾರದ ಬಗ್ಗೆ ವಿಸ್ತೃತ ಪೀಠದಲ್ಲೇ ವಿಚಾರಣೆ ನಡೆಯುವ ಅಗತ್ಯವಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ದ್ವಿಸದಸ್ಯ ಪೀಠ ಹೇಳಿತು.
ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಎದುರು ಇಡಬಯಸುತ್ತೇನೆ. ಈ ಸಂಬಂಧ ಅವರೇ ಸೂಕ್ತ ಆದೇಶ ಹೊರಡಿಸಲಿ ಎಂದು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರು ತೀರ್ಪು ಪ್ರಕಟಿಸುವಾಗ ತಿಳಿಸಿದರು.
ಆಗಸ್ಟ್ 17ರಂದು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠವು ಮರಣ ದಂಡನೆ ಶಿಕ್ಷೆಯು ಬದಲಾಯಿಸಲು ಆಗದ್ದು. ಹೀಗಾಗಿ ಶಿಕ್ಷೆಯನ್ನು ತಗ್ಗಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವ ಎಲ್ಲಾ ಅವಕಾಶಗಳನ್ನೂ ಅಪರಾಧಿಗೆ ನೀಡಬೇಕು ಎಂದು ಆಗ ಹೇಳಿತ್ತು.