ಅಳಿದು ಹೋದ/ಅಳಿವಿನ ಅಂಚಿನ ಪ್ರಾಣಿ ಪುನರುತ್ಥಾನ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಈ ಯೋಜನೆಯ ಅಂಗವಾಗಿ ಪುನಃ ಚೀತಾವನ್ನು ಭಾರತಕ್ಕೆ ಪರಿಚಯಿಸಲಾಗುತ್ತಿದೆ. ತಜ್ಞರ ಪ್ರಕಾರ ‘ಚೀತಾ’ ಪದವು ಸಂಸ್ಕೃತದ ‘ಚಿತ್ರಕಾ’ ಎಂಬ ಪದದಿಂದ ಬಂದಿದೆ.
ಇದರ ಅರ್ಥ ‘ಚುಕ್ಕೆಗಳಿರುವಂತಹದ್ದು’ ಎಂದಾಗಿದೆ.
ಚೀತಾ, ಚಿರತೆ, ಜಾಗ್ವಾರ್… ಇವು ಮೇಲ್ನೋಟಕ್ಕೆ ನೋಡಲು ಒಂದೇ ಎನ್ನಿಸಿದರೂ ಬೇರೆ ಬೇರೆ ಪ್ರಾಣಿಗಳು. ಜಾಗ್ವಾರ್, ಚೀತಾಗೆ ಹೋಲಿಸಿದರೆ ಚೀತಾ ಸಪೂರವಾಗಿದೆ. ಚೀತಾ ಮುಖದ ಮೇಲೆ 2 ಗೆರೆ ಇರುತ್ತವೆ ಹಾಗೂ ಚುಕ್ಕೆ ಕಮ್ಮಿ ಇರುತ್ತವೆ. ಚಿರತೆ ಮುಖದ ಮೇಲೆ ಗೆರೆ ಇರಲ್ಲ.
ಚುಕ್ಕೆಗಳಲ್ಲೂ ವ್ಯತ್ಯಾಸವಿದೆ. ಚೀತಾಗಿಂತ ಚಿರತೆ ಬಲಿಷ್ಠ ಎನ್ನಲಾಗಿದೆ.
ನಮೀಬಿಯಾ ದೇಶದಿಂದ 8 ಚೀತಾ ತರಿಸಿಕೊಳ್ಳಲಾಗುತ್ತಿದೆ. ಇದರಲ್ಲಿ 5 ಹೆಣ್ಣು, 3 ಗಂಡು. ಇವುಗಳಲ್ಲಿ ಜೋಡಿಯಲ್ಲೇ ಬೇಟೆಯಾಡುವ 2 ಗಂಡು ಸಹೋದರ ಚೀತಾಗಳು ಹಾಗೂ ಇತ್ತೀಚಿನ ಕಾಡ್ಗಿಚ್ಚಿನಲ್ಲಿ ಸಂರಕ್ಷಿಸಲ್ಪಟ್ಟ ಹೆಣ್ಣು ಚೀತಾ ಮರಿ ಕೂಡಾ ಇವೆ.
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಭೇದ ಎನಿಸಿದ ಏಷಿಯಾಟಿಕ್ ಸಿಂಹಗಳಿದ್ದು, ಅವುಗಳ ವಾಸಕ್ಕೆ ಅನುಕೂಲಕರ ಪರಿಸರವಿದೆ. ಇದು ಚೀತಾ ವಾಸಕ್ಕೂ ಯೋಗ್ಯವೆನಿಸಿದ ಕಾರಣ ಇಲ್ಲಿಯೇ ಚೀತಾಗಳನ್ನು ಇರಿಸಲಾಗುವುದು. ಚೀತಾಗಳ ಬೇಟೆಗಾಗಿ ಚಿಂಕಾರ, ಜಿಂಕೆ ಹಾಗೂ ಕೃಷ್ಣಮೃಗಗಳು ಇಲ್ಲಿ ವ್ಯಾಪಕ ಸಂಖ್ಯೆಯಲ್ಲಿ ಇವೆ.