ಹಿಂದೂಗಳ ಪವಿತ್ರ ಗ್ರಂಥಕ್ಕೆ ವಿದೇಶದಲ್ಲಿ ಮತ್ತೊಂದು ಮನ್ನಣೆ ಲಭಿಸಿದೆ. ಮಾರಿಷಸ್ ಮತ್ತು ಲಂಡನ್ ಬಳಿಕ ಕೆನಡಾದ ಸಂಸತ್ತಿನಲ್ಲಿ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಸ್ಥಾಪಿಸಲು ಇಲ್ಲಿನ ಸರ್ಕಾರ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
ಕೆನಡಾದ ಸಂಸತ್ತಿನ ಕ್ವೀನ್ಸ್ ಪಾರ್ಕ್‌ನಲ್ಲಿ ಗೀತಾ ಗ್ರಂಥವನ್ನು ಸ್ಥಾಪಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ.
ಗೀತಾ ಪಾರ್ಕ್ ಭೂಮಿ ಪೂಜೆಯು ಒಂಟಾರಿಯೊದ ಬ್ರಾಂಪ್ಟನ್ ನಗರದಲ್ಲಿ ನಡೆಯಲಿದೆ.
ಭಗವದ್ಗೀತೆಯನ್ನು ವಿದೇಶಿ ನೆಲದಲ್ಲಿ ಸ್ಥಾಪಿಸುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ ಯುಕೆಯ ಲಂಡನ್ ಸಂಸತ್ತಿನಲ್ಲಿ ಮತ್ತು ಮಾರಿಷಸ್ ಅಧ್ಯಕ್ಷರ ಮನೆಯಲ್ಲಿ ಕೂಡ ಹಿಂದುಗಳ ಪವಿತ್ರ ಗ್ರಂಥವಾದ ಗೀತಾವನ್ನು ಸ್ಥಾಪಿಸಲಾಗಿದೆ.
ಬ್ರಾಂಪ್ಟನ್ ಕೌನ್ಸಿಲ್ ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದೆ ಮತ್ತು ಪಾರ್ಕ್ ನಲ್ಲಿ ಕೃಷ್ಣ-ಅರ್ಜುನ ರಥವನ್ನು ಸಹ ಸ್ಥಾಪಿಸಲಾಗುವುದು ಎಂದು ಹೇಳಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಛಾಬ್ರಾ, ಸ್ವಾಮಿ ಜ್ಞಾನಾನಂದರು ಸುಮಾರು ಎರಡು ತಿಂಗಳ ಹಿಂದೆ ಕೆನಡಾಕ್ಕೆ ಹೋಗಿದ್ದರು ಮತ್ತು ಪಾರ್ಕ್‌ಗೆ ಗೀತಾ ಪಾರ್ಕ್ ಎಂದು ಹೆಸರಿಸಲು ಬ್ರಾಂಪ್ಟನ್‌ನ ಮೇಯರ್ ಮತ್ತು ಕೌನ್ಸಿಲರ್‌ಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಕುರುಕ್ಷೇತ್ರವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಮತ್ತು ಪವಿತ್ರ ಗ್ರಂಥ ಗೀತೆಯ ಉಪದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಕುರುಕ್ಷೇತ್ರ, ಹರಿಯಾಣ ಮಾತ್ರವಲ್ಲದೆ ಮಾರಿಷಸ್, ಲಂಡನ್, ಕೆನಡಾ ಮುಂತಾದ ದೇಶಗಳಲ್ಲಿ ಅಂತರಾಷ್ಟ್ರೀಯ ಗೀತಾ ಉತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಪ್ರಪಂಚದಾದ್ಯಂತ ಪವಿತ್ರ ಗ್ರಂಥ, ಭಗವದ್ಗೀತೆಯ ಅನುಕರಣೆ ಹೆಚ್ಚುತ್ತಿದ್ದು ಅದರ ಮೌಲ್ಯ ಕೂಡ ಹೆಚ್ಚುತ್ತಿದೆ. ಮಹಾಭಾರತ ಯುದ್ಧದಲ್ಲಿ ಅರ್ಜುನನು ತನ್ನ ಬಂಧುಗಳನ್ನು ಎದುರಿಗೆ ನೋಡಿ ಹತಾಶನಾಗುತ್ತಿದ್ದಾಗ, ಶ್ರೀಕೃಷ್ಣನು ಆ ಸಮಯದಲ್ಲಿ ಅವನಿಗೆ ಉಪದೇಶ ಮಾಡಿದ್ದನು. ಈ ಬೋಧನೆಯನ್ನೇ ಭಗವದ್ಗೀತೆ ಎಂದು ಕರೆಯಲಾಗುತ್ತದೆ.
ಮಹಾಭಾರತ ಯುದ್ದವು ಹರಿಯಾಣದ ಕುರುಕ್ಷೇತ್ರದ ನೆಲದಲ್ಲಿ 18 ದಿನಗಳ ಕಾಲ ನಡೆಯಿತು.