ಅರಣ್ಯ ಹುತಾತ್ಮರ ಕುಟುಂಬಕ್ಕೆ ಸ್ಥಿರತೆ ಮತ್ತು ಭದ್ರತೆ ನೀಡುವ ದೃಷ್ಟಿಯಿಂದ 30 ಲಕ್ಷ ರೂ.ಗಳಿದ್ದ ಪರಿಹಾರದ ಮೊತ್ತವನ್ನು 50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಅರಣ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 2022 ರಲ್ಲಿ ಭಾಗವಹಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಹುತಾತ್ಮರಿಗೆ 20 ಲಕ್ಷ ರೂ.ಗಳಿದ್ದ ಪರಿಹಾರವನ್ನು 30 ಲಕ್ಷ ರೂ.ಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೆಚ್ಚಿಸಿದ್ದರು.
ಹುತಾತ್ಮರ ನೇಮಕಾತಿ, ಕಲ್ಯಾಣ ಎಲ್ಲವನ್ನೂ ಸರ್ಕಾರ ಅತ್ಯಂತ ಸಹಾನುಭೂತಿಯಿಂದ ಮಾಡಲಿದೆ. ನೀವು ಅರಣ್ಯ ರಕ್ಷಣೆ ಮಾಡಿ, ಸರ್ಕಾರ ನಿಮ್ಮ ರಕ್ಷಣೆ ಮಾಡುತ್ತದೆ ಎಂದರು.
ರಾಜ್ಯದಲ್ಲಿ ನಾಲ್ಕು ಲಕ್ಷ ಹೆಕ್ಟೇರ್ ಗಿಂತ ಹೆಚ್ಚು ಬಂಜರು ಭೂಮಿ ಇದ್ದು ಇದನ್ನು ನಾವು ಅರಣ್ಯೀಕರಣ ಮಾಡುವ ಮೂಲಕ ಅರಣ್ಯ ಪ್ರದೇಶ ಹೆಚ್ಚಿಸಬಹುದು. ಬಹಳಷ್ಟು ಗುಡ್ಡಗಾಡುಗಳಿವೆ. ಅಲ್ಲಿ ಮೂಲ ಗಿಡಗಳನ್ನು ಬೆಳೆಸುವ ಮೂಲಕ ಉತ್ತಮಗೊಳಿಸಬಹುದು. ಟಾಟಾ ಸಂಸ್ಥೆಯ ಕಬ್ಬಿಣದ ಅದಿರಿನ ಗಣಿಗಳು ಜಮ್ ಶೇಡ್ ಪುರದಲ್ಲಿದ್ದು, ಅಲ್ಲಿ ಎಲ್ಲೆಲ್ಲಿಯೂ ಹಸಿರಿನಿಂದ ತುಂಬಿದೆ. ಗಣಿಗಳಲ್ಲಿ ಮಾಡಬಹುದಾದರೆ ಗುಡ್ಡಗಾಡಿನಲ್ಲಿ ಸಾಧ್ಯವಿಲ್ಲವೇ. ಇಚ್ಚಾಶಕ್ತಿ ಇದ್ದರೆ ಅರಣ್ಯ ಪ್ರದೇಶ ಹೆಚ್ಚಿಸೋಣ. ಜನಾಂಗಕ್ಕೆ ಇದಕ್ಕಿಂತ ಹೆಚ್ಚಿನ ಕೊಡುಗೆ ಮತ್ತೊಂದಿಲ್ಲ ಎಂದರು.