ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ತ್ರಿವರ್ಣ ಧ್ವಜವನ್ನು ಹಾರಿಸಿದ ಬಳಿಕ, ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಇದರ ಬೆನ್ನಲ್ಲಿಯೇ ಔಪಚಾರಿಕವಾಗಿ 21 ಗನ್ ಸೆಲ್ಯೂಟ್ ನೀಡಿದ ಬಳಿಕ ಭಾರತ ಇತಿಹಾಸದ ಪುಟಗಳಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿತು.
52 ಸೆಕೆಂಡ್‌ನ ರಾಷ್ಟ್ರಗೀತೆಯ ವೇಳೆ ಒಟ್ಟು 21 ಬಾರಿ ಗನ್ ಸೆಲ್ಯೂಟ್‌ಅನ್ನು ಮಹಾನ್ ದೇಶಕ್ಕೆ ನೀಡಲಾಯಿತು.
ಇದೇಕೆ ವಿಶೇಷವೆಂದರೆ, ಕಳೆದ 74 ವರ್ಷಗಳಲ್ಲಿ ಸ್ವಾತಂತ್ರೋತ್ಸವದ ದಿನದಂದು ನೀಡಲಾಗುವ 21 ಗನ್ ಸೆಲ್ಯೂಟ್‌ಗಳನ್ನು ಮೇಡ್ ಇನ್ ಬ್ರಿಟನ್ ಮೂಲಕ 7 ಸ್ಪೆಷಲ್ ಗನ್ ನಿಂದ ನೀಡಲಾಗುತ್ತಿತ್ತು. ಈ ಶೆಲ್‌ಗಳಲ್ಲಿನ ಮದ್ದುಗುಂಡುಗಳು ಖಾಲಿ ಇರುತ್ತಿದ್ದವು. ಬರೀ ಸ್ಪೋಟದ ಸದ್ದು ಹಾಗೂ ಹೊಗೆ ಮಾತ್ರ ಬರುತ್ತಿದ್ದವು. ಅದಕ್ಕಾಗಿ ಈ ಗನ್‌ಗಳನ್ನು 25 ಪೌಂಡರ್ ಗನ್ಸ್ ಎನ್ನಲಾಗುತ್ತಿತ್ತು. ಅದರರ್ಥ, ಈ ಕ್ಯಾನನ್‌ಗಳು ಕೇವಲ 25 ಪೌಂಡ್ ಅಂದರೆ 11.5 ಕೆಜಿಯ ಗುಂಡುಗಳನ್ನು ಮಾತ್ರವೇ ಸ್ಫೋಟ ಮಾಡುತ್ತಿದ್ದವು.
ಆದರೆ, ಈ ಬಾರಿ 74 ವರ್ಷದ ಇತಿಹಾಸ ಬದಲಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ 25 ಪೌಂಡರ್ ಬ್ರಿಟಿಷ್ ಗನ್‌ಗಳ ಬದಲು, ದೇಶೀಯ ನಿರ್ಮಿತ ಎಟಿಎಜಿಎಸ್‌ಅನ್ನು ಬಳಕೆ ಮಾಡಲಾಗಿದೆ.
ಎಟಿಎಜಿಎಸ್ ಅಂದರೆ, ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್. ಅಂದರೆ, ಸಾಗಿಸಬಲ್ಲ ಸುಧಾರಿತ ಆರ್ಟಿಲರಿ ಗನ್ ವ್ಯವಸ್ಥೆ. ಇದನ್ನು ನಿರ್ಮಾಣ ಮಾಡಿದ್ದು ಡಿಆರ್‌ಡಿಓ. ಇದರ ವಿಶೇಷವೇನೆಂದರೆ, ಇದು ಉಡಾಯಿಸುವ ಗುಂಡು ಅತ್ಯಂತ ದೂರದವರೆಗೆ ಹೋಗಿ ಮುಟ್ಟುತ್ತದೆ. ವಿಶ್ವದಲ್ಲಿಯೇ ಇಷ್ಟು ದೂರದವರೆಗೆ ಗುಂಡನ್ನು ಉಡಾಯಿಸಬಲ್ಲ ಮತ್ಯಾವುದೇ ಹೋವಿಟ್ಜರ್ ಗನ್‌ಗಳಿಲ್ಲ.
ಸುಧಾರಿತ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ (ಎಟಿಎಜಿಎಸ್) ಅನ್ನು ಸಂಪೂರ್ಣವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನದ ಪ್ರಮುಖ ಭಾಗವಾಗಿದೆ. ಭಾರತದಲ್ಲಿ ಆಂತರಿಕವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಉತ್ಪಾದನೆಯೊಂದಿಗೆ ರಕ್ಷಣಾ ವಲಯದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಸರ್ಕಾರದ ಪ್ರೋತ್ಸಾಹದ ಭಾಗವಾಗಿ ATAGS ಅಭಿವೃದ್ಧಿಯಾಗಿದೆ.