ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಕಾಮನ್ ಸರ್ವಿಸ್ ಸೆಂಟರ್‌ಗಳನ್ನು (ಸಿಎಸ್‌ಸಿ) 10 ಸಾವಿರಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯಸಭಾಸದಸ್ಯರಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸರಕಾರದಲ್ಲಿ 500ಕ್ಕೂ ಅಧಿಕ ಜನೋಪಯೋಗಿ ಯೋಜನೆಗಳಿವೆ.ಮಾಹಿತಿ ಕೊರತೆಯಿಂದ ಸರಿಯಾಗಿ ತಲುಪುತ್ತಿಲ್ಲ. ಸಿಎಸ್‌ಸಿ ಮೂಲಕ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಈಗಾಗಲೇ 6 ಸಾವಿರ ಸಿಎಸ್‌ಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ಸರಕಾರದ ಜನೋಪಯೋಗಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕೇಂದ್ರ ಸರಕಾರದ ಅಧಿಕಾರಿಗಳು ಸಿಎಸ್‌ಸಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಇದರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಮಾದರಿಯಲ್ಲಿ ದೇಶದಲ್ಲಿ ಗ್ರಾ.ಪಂ. ಮಟ್ಟದಲ್ಲಿ ಸಿಎಸ್‌ಸಿ ತೆರೆಯುವ ಬಗ್ಗೆ ಕೇಂದ್ರ ಸರಕಾರದಲ್ಲಿ ಚಿಂತನೆ ನಡೆಯುತ್ತಿದೆ ಎಂದರು.
ಸ್ವ ಉದ್ಯೋಗ ತರಬೇತಿ ಕೇಂದ್ರದಡಿಯಲ್ಲಿ ಇದು ದೇಶದ 590 ಜಿಲ್ಲೆಗಳಲ್ಲಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ ಎಂದು ಹೇಳಿದರು.